Advertisement
ಪರ್ಯಾಯೋತ್ಸವ ಸ್ವಾಗತ ಸಮಿತಿ ಹಾಗೂ ನಗರಸಭೆ ವತಿಯಿಂದ ರಥಬೀದಿಯ ಶ್ರೀ ಆನಂದತೀರ್ಥ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪುರಪ್ರವೇಶ ಹಾಗೂ ಪೌರಸಮ್ಮಾನ ಕಾರ್ಯದಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.
ಜಗತ್ತಿನ ಮೂಲೆ ಮೂಲೆ ಸುತ್ತಿದ್ದೇವೆ. ಆದರೆ ಉಡುಪಿಗೆ ಬಂದಾಗ ವಿಶೇಷ ವೈಬ್ರೇಷನ್ ಆಗುತ್ತದೆ. ಇದರಿಂದ ತಿಳಿಯುವುದು ನಮ್ಮೂರೇ ವಾಸಿ ಎಂಬುದು. ಈ ಅನುಭವ ಪಡೆಯಲು ಇಲ್ಲಿಯೇ ಇದ್ದರೆ ಆಗುವುದಿಲ್ಲ. ಸಂಚಾರ ಮಾಡಬೇಕು. ಮೂರು ಲೋಕವು ನಮ್ಮ ದೇಶ. ವಿದೇಶ ಎಂಬುದು ಯಾವುದು? ಆಡಳಿತಾತ್ಮಕ ಗಡಿ ಅಷ್ಟೆ. ಆಧ್ಯಾತ್ಮಿಕವಾಗಿ ಎಲ್ಲವೂ ಒಂದೇ. ಹೀಗಾಗಿ ನಾವು ವಿದೇಶಿ ಪ್ರವಾಸ ಮಾಡಿಲ್ಲ ಎಂದರು.
Related Articles
Advertisement
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾತನಾಡಿ, ಎಲ್ಲರ ಬದುಕು ಸುಗಮವಾಗಿ ಸಾಗಲಿ, ಎಲ್ಲರಿಗೂ ನೆಮ್ಮದಿಯ ಬದುಕು ದೇವರು ಕರುಣಿಸಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಪುತ್ತಿಗೆ ಶ್ರೀಪಾದರು ಹಿಂದೂ ಧರ್ಮದ ಪ್ರಚಾರದ ಮೂಲಕ ಸಮಾಜದ ಆಸ್ತಿಯಾಗಿದ್ದಾರೆ ಎಂದರು.ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತ ನಾಡಿ, ಭಾರತ ವಿಶ್ವಗುರು ಗಳಾದ ಪುತ್ತಿಗೆ ಶ್ರೀಪಾದರ ಚತುರ್ಥ ಪರ್ಯಾಯ ನಡೆಯಲಿದೆ. ಧರ್ಮಕ್ಕೆ ಅಂತಾರಾಷ್ಟ್ರೀಯ ಮನ್ನಣೆಗೆ ಅವರ ಕೊಡುಗೆ ಅಪಾರ. ಧರ್ಮ, ದೇಶ, ನಾಡು ಹಾಗೂ ಶ್ರೀಕೃಷ್ಣನಿಗಾಗಿ ಶ್ರೀಪಾದರು ಬದುಕುತ್ತಿದ್ದಾರೆ ಎಂದು ಹೇಳಿದರು. ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್ ಎಚ್., ಕೆನರಾ ಬ್ಯಾಂಕ್ ಮಣಿಪಾಲ ಸರ್ಕಲ್ ಆಫೀಸ್‌ನ ಜಿಎಂ ಮಂಜುನಾಥ ಜಿ. ಪಂಡಿತ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಧರ್ಮದರ್ಶಿ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದ ಆನುವಂಶಿಕ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎಎಸ್ಪಿ ಪರಮೇಶ್ವರ ಹಗಡೆ, ಸಮಿತಿಯ ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ. ರಘುಪತಿ ಭಟ್ ಉಪಸ್ಥಿತರಿದ್ದರು. ಮುನಿಯಾಲು ಆಯುರ್ವೇದ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ| ಹರಿಪ್ರಸಾದ್ ಭಟ್ ಹೆರ್ಗ ಅಭಿನಂದನ ಭಾಷಣ ಮಾಡಿದರು. ಶ್ರೀ ಸುಗುಣೇಂದ್ರ ಪಂಚರತ್ನವನ್ನು ಮಧೂರು ನಾರಾಯಣ ಸರಳಾಯ ಹಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ| ಎಚ್.ಎಸ್. ಬಲ್ಲಾಳ್ ಪ್ರಸ್ತಾವನೆಗೈದರು. ಪೌರಾಯುಕ್ತ ರಾಯಪ್ಪ ಸ್ವಾಗತಿಸಿ, ಕಂದಾಯ ಅಧಿಕಾರಿ ಸಂತೋಷ್ ಪೌರಾಭಿನಂದನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ವಂದಿಸಿ, ಡಾ| ಬಿ. ಗೋಪಾಲಾಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು.
2008ರಲ್ಲಿ ನಡೆದ ಶ್ರೀಪಾದರ ತೃತೀಯ ಪರ್ಯಯೋತ್ಸವದಲ್ಲಿ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಅವರು ನಗರಸಭೆಯ ಆಡಳಿತಾಧಿಕಾರಿಯಾಗಿದ್ದು ಪೌರಸಮ್ಮಾನ ನೆರವೇರಿಸಿದ್ದರು. ಇದೀಗ ಡಾ| ವಿದ್ಯಾಕುಮಾರಿ ನಗರಸಭೆ ಆಡಳಿತಾಧಿಕಾರಿಯಾಗಿ ಪೌರಸಮ್ಮಾನ ನೆರವೇರಿಸಿದರು. ತುಷಾರ ಪರ್ಯಾಯ ವಿಶೇಷಾಂಕ ಲೋಕಾರ್ಪಣೆಯನ್ನು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ನೆರವೇರಿಸಿದರು. ಶ್ರೀಕೃಷ್ಣ ಮುಖ್ಯಪ್ರಾಣ ಪರ್ಯಾಯ ಪಂಚಾಂಗವನ್ನು ಶ್ರೀಪಾದದ್ವಯರು ಬಿಡುಗಡೆ ಮಾಡಿದರು. ಶ್ರೀಕೃಷ್ಣ ಪೂಜೆಗೆ ಸಂಬಂಧಿಸಿ ಸಿದ್ಧಪಡಿಸಿರುವ ಶ್ರೀಕೃಷ್ಣ ಸೇವಾ ಆನ್ ಲೈನ್ ಹಾಗೂ ಆಫ್ ಲೈನ್ ಬುಕ್ಕಿಂಗ್ ವ್ಯವಸ್ಥೆಯ ಕ್ಯುಆರ್ ಕೋಡ್ ಉದ್ಘಾಟಿಸಿ, ಯುಗಪುರುಷ ಪರ್ಯಾಯ ವಿಶೇಷಾಂಕ ಬಿಡುಗಡೆ ಮಾಡಿದರು. ಪುತ್ತಿಗೆ ಶ್ರೀಗಳ ಪುರಪ್ರವೇಶದ ಅಂಗವಾಗಿ ಉಡುಪಿ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೂ ಅದ್ದೂರಿ ಮೆರವಣಿಗೆ ನಡೆಯಿತು.