ಉಡುಪಿ: ಕೆಳ ಪರ್ಕಳದಿಂದ-ಮಣಿಪಾಲ ರಸ್ತೆ ಅಭಿವೃದ್ಧಿ ಸಂಬಂಧಿಸಿ ಜನವರಿ ವರೆಗೆ ಇದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಮತ್ತೆ ವಿಸ್ತರಿಸಿದೆ.
ಪರ್ಕಳದಲ್ಲಿ ರಾ.ಹೆ. (169ಎ) 4 ಮೀ. ಉದ್ದದ ನೇರ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಕೆಳ ಪರ್ಕಳ ತಿರುವು ರಸ್ತೆ ಇರುವುದನ್ನು ನೇರ ರಸ್ತೆಯಾಗಿ ರೂಪಿಸುವ ಯೋಜನೆ ಇದಾಗಿದ್ದು. ಇದಕ್ಕೆ ಸುಮಾರು 6 ಸಾವಿರ ಲೋಡ್ ಮಣ್ಣಿನ ಅಗತ್ಯವಿದ್ದು, ಈಗಾಗಲೇ 5 ಸಾವಿರ ಲೋಡ್ ಮಣ್ಣನ್ನು ರಸ್ತೆಗೆ ತುಂಬಿಸಲಾಗಿದೆ.
ಈ ಜಾಗಕ್ಕೆ ಸಂಬಂಧಿಸಿದ ಖಾಸಗಿ ವ್ಯಕ್ತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿ ಕೋರ್ಟ್‌ನಿಂದ 2022ರಲ್ಲಿ ತಡೆಯಾಜ್ಞೆ ಬಂದಿತ್ತು.
2023ರಲ್ಲಿಯೂ ವಿಚಾರಣೆ ನಡೆದು, 2024ರಲ್ಲಿಯೂ ತಡೆಯಾಜ್ಞೆ ಮುಂದುವರಿದಿದೆ. ಮುಂದಿನ ವಿಚಾರಣೆ ಯಾವಾಗ ಆಗುತ್ತದೆ ಎಂಬ ಖಾತ್ರಿ ಇಲ್ಲದ ಕಾರಣ ಕಾಮಗಾರಿ ಮತ್ತಷ್ಟು ವಿಳಂಬವಾಗಬಹುದು ಎಂದು ರಾ.ಹೆ. ಪ್ರಾಧಿಕಾರ ಮೂಲಗಳು ತಿಳಿಸಿವೆ.
ಕೆಳಪರ್ಕಳ ಹಳೆಯ ಡಾಮರು ರಸ್ತೆ ಪರ್ಯಾಯ ಮಾರ್ಗವಾಗಿದ್ದು, ಧೂಳು, ಗುಂಡಿಗಳಿಂದ ಕೂಡಿದ್ದ ರಸ್ತೆಯನ್ನು ಈ ಹಿಂದೆ ಡಾಮರು ಹಾಕಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಮತ್ತೆ ಈ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. ಇಕ್ಕಟ್ಟು, ತಿರುವಾದ ರಸ್ತೆಯಲ್ಲಿ ವಾಹನಗಳು ನಿರಂತರ ಸಂಚರಿಸುವಂತಾಗಿದೆ.