Advertisement

Udupi: ರಸ್ತೆಯೇ ಇಲ್ಲ: ಬರೀ ಹೊಂಡಗುಂಡಿ!

03:42 PM Aug 13, 2024 | Team Udayavani |

ಉಡುಪಿ: ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸ್ಥಿತಿ ಅಯೋಮಯವಾಗಿದೆ. ಮಳೆ ಕಡಿಮೆಯಾಗಿರುವ ಕಾರಣ ಇನ್ನಾದರೂ ರಸ್ತೆ ಕಾಮಗಾರಿಯನ್ನು ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಕರಾವಳಿ ಬೈಪಾಸ್‌ನಿಂದ ಮಲ್ಪೆ ಸಾಗುವ ಮಾರ್ಗ ಕಾಮಗಾರಿ ಹಂತದಲ್ಲಿದ್ದು, ವಾಹನ ಸವಾರರಿಗೆ ಸಂಚರಿಸಲು ಯಾವುದೇ ಸೂಕ್ತ ವ್ಯವಸ್ಥೆಯನ್ನು ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡಿಲ್ಲ. ಇದೇ ರೀತಿಯಲ್ಲಿ ಸಂತೆಕಟ್ಟೆ ಓವರ್‌ಪಾಸ್‌ ರಸ್ತೆಯಲ್ಲಿಯೂ ನಡೆಯುತ್ತಿದೆ. ಪೆರಂಪಳ್ಳಿ ರಸ್ತೆ ಪರಿಸ್ಥಿತಿಯು ಹದಗೆಟ್ಟಿದ್ದು, ಇಲ್ಲಿನ ರೈಲ್ವೇ ಸೇತುವೆ ಮೇಲೆ ಜನರು ಕಷ್ಟದಿಂದಲೇ ವಾಹನ ಚಲಾಯಿಸಬೇಕಿದೆ. ಕಟಪಾಡಿ ಕಡೆಯಿಂದ ಉಡುಪಿ ನಗರಕ್ಕೆ ಪ್ರವೇಶಿಸಲು ಕಿನ್ನಿಮೂಲ್ಕಿ ದ್ವಾರಕ್ಕೆ ಹೋಗುವ ಮೊದಲು ಗುಂಡಿಗಳ ದರ್ಶನವಾಗುತ್ತದೆ.

ಸಂತೆಕಟ್ಟೆಯಲ್ಲಿ ಇನ್ನೂ ಜಲ್ಲಿ ಸುರಿಯುತ್ತಿದ್ದಾರೆ

ಸಂತೆಕಟ್ಟೆ ಓವರ್‌ಪಾಸ್‌ ಹದಗೆಟ್ಟ ರಸ್ತೆಗೆ ಇನ್ನೂ ಜಲ್ಲಿ ಸುರಿಯುತ್ತಿದ್ದಾರೆ. ಈ ಜಲ್ಲಿ ಇಡೀ ರಸ್ತೆ ಹರಡಿಕೊಂಡು ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಸದ್ಯಕ್ಕೆ ಮಳೆ ಬಿಡುವು ಇರುವುದರಿಂದ ಉತ್ತಮ ರೀತಿಯಲ್ಲಿ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಪಡಿಸುವ ಬಗ್ಗೆ ಎಂಜಿನಿಯರ್‌ಗಳು ಯೋಜನೆ ರೂಪಿಸಬೇಕು ಎಂದು ಸ್ಥಳೀಯರು ಹೇಳಿದ್ದಾರೆ.

ಆದಿ ಉಡುಪಿ ರಸ್ತೆ ಸಂಪೂರ್ಣ ಗುಂಡಿಮಯ

Advertisement

ಎಲ್ಲೆಲ್ಲಿ ಸಂಚಾರಕ್ಕೆ ಸಮಸ್ಯೆಗಳು?

ಕರಾವಳಿ ಬೈಪಾಸ್‌ನಿಂದ ಮಲ್ಪೆ ಸಾಗುವ ಮಾರ್ಗದಲ್ಲಿಕಾಮಗಾರಿ ನಡೆಯುತ್ತಿದ್ದು ಸವಾರರಿಗೆ ಸಂಚಾರಕ್ಕೆ ಸಂಕಷ್ಟ.

ಸಂತೆಕಟ್ಟೆ ಓವರ್‌ಪಾಸ್‌ ರಸ್ತೆಯಲ್ಲಿ ಜಲ್ಲಿ ಹರಡಿಕೊಂಡಿದೆ.

ಪೆರಂಪಳ್ಳಿ ರೈಲ್ವೇ ಸೇತುವೆ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ಕಿನ್ನಿಮೂಲ್ಕಿ ದ್ವಾರದ ಮುಂದೆ ಗುಂಡಿಗಳ ಸಾಲು.

ಗುಂಡಿ ಮುಚ್ಚುವ ಕಾರ್ಯ

ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ತೀರ ಹದಗೆಟ್ಟ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ತಾತ್ಕಲಿಕ ನೆಲೆಯಲ್ಲಿ ದುರಸ್ತಿಪಡಿಸುವ ಬಗ್ಗೆ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಈಗಾಗಲೇ ಉಡುಪಿ ನಗರಸಭೆ ವತಿಯಿಂದ ಗುಂಡಿಮುಚ್ಚುವ ಕೆಲಸ ನಡೆಯುತ್ತಿದೆ. -ಯಶ್‌ಪಾಲ್‌ ಸುವರ್ಣ, ಶಾಸಕರು.

ಇಲಾಖೆಗಳ ನಿರ್ಲಕ್ಷ್ಯವೇ ಕಾರಣ

ಸರ್ವ ಋತುವಿನಲ್ಲೂ ಉಪಯೋಗಿಸುವ ಡಾಮರು (ಬಿಟುಮಿನ್‌) ಸಿಗುವ ಕಾಲಘಟ್ಟದಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ, ಪಂಚಾಯತ್‌, ನಗರ ಸ್ಥಳೀಯ ಸಂಸ್ಥೆಗಳ ರಸ್ತೆಗಳ ಹೊಂಡಗಳು ಬೃಹದಾಕಾರ ಹೊಂದಿ ಮೃತ್ಯುಕೂಪವಾಗಲು ಇಲಾಖೆಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆ. ವಿಕಾಸ್‌ ಹೆಗ್ಡೆ ಆರೋಪಿಸಿದ್ದಾರೆ. ಹಿಂದೆ ಮಳೆಗಾಲದಲ್ಲಿ ರಸ್ತೆ ದುರಸ್ತಿ ಇತ್ಯಾದಿ ಮಾಡಲು ಸಾಧ್ಯವಿರಲಿಲ್ಲ. ಆದರೆ ಇಂದು ಸರ್ವ ಋತುವಿನಲ್ಲೂ ಉಪಯೋಗಿಸಲು ಯೋಗ್ಯವಾದ ಡಾಮರು (ಬಿಟುಮಿನ್‌) ಸಿಗುವಾಗ ಸಂಬಂಧಿತ ಇಲಾಖೆಗಳು ರಸ್ತೆ ದುರಸ್ತಿ ಮಾಡದೆ ಇರುವುದು ಅವರ ಕರ್ತವ್ಯಲೋಪವಾಗಿದೆ. ಇದೂ ಕೂಡ ಭ್ರಷ್ಟಾಚಾರದ ಒಂದು ಭಾಗವಾಗಿದೆ. ರಸ್ತೆ ಹೊಂಡ ಮೊದಲ ಹಂತದಲ್ಲೇ ದುರಸ್ತಿ ಮಾಡಿದರೆ ಇದು ಕಡಿಮೆ ಖರ್ಚಿನಲ್ಲಿ ಆಗುವ ಕೆಲಸವಾಗಿದ್ದು ಇದರಿಂದ ಇಲಾಖಾ ಅಧಿಕಾರಿಗಳಿಗೆ ವೈಯಕ್ತಿಕ ಲಾಭ ಕಡಿಮೆ. ಆದುದರಿಂದ ಸಂಬಂಧಿತ ಇಲಾಖೆಗಳು ರಸ್ತೆಯ ಹೊಂಡಗಳು ಮೃತ್ಯುಕೂಪಗಳಾಗುವ ತನಕ ಕಾಯುತ್ತಿವೆ. ಇಲಾಖೆಯ ಜಾಣ ನಡೆಗೆ ಸಂಬಂಧಿತ ಜನಪ್ರತಿನಿಧಿಗಳು ಕೂಡ ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಓಡಾಡಲು ಪರದಾಟ

ಶಾಲೆ, ಎಪಿಎಂಸಿ ಮಾರುಕಟ್ಟೆ, ಮೀನು ಮಾರುಕಟ್ಟೆ ಸಹಿತ ಪ್ರಮುಖ ಆರ್ಥಿಕ ಕೇಂದ್ರವಾದ ಆದಿ ಉಡುಪಿ ಪರಿಸರದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸವಾರರು, ಪಾದಚಾರಿಗಳು ಓಡಾಡಲು ಪರದಾಡುವಂತಾಗಿದೆ.
-ಶಿವಾನಂದ್‌, ಆದಿ ಉಡುಪಿ.

ವಾಹನಗಳಿಗೆ ಹಾನಿ

ಸಂತೆಕಟ್ಟೆ ಓವರ್‌ಪಾಸ್‌ ರಸ್ತೆಯಲ್ಲಿನ ಗುಂಡಿಗಳನ್ನು ದುರಸ್ತಿಪಡಿಸಿ ವ್ಯವಸ್ಥಿತ ಮಾಡದಿದ್ದರೆ ಸರಣಿ ಅಪಘಾತ ಸಂಭವಿಸಬಹುದು. ಪೆರಂಪಳ್ಳಿ ರಸ್ತೆಯ ಕಥೆಯೂ ಇದೆ ಹಾಗಿದೆ. ಈಗಾಗಲೇ ಕಾರು, ಬೈಕುಗಳ ಬಿಡಿಭಾಗಗಳು ಹದಗೆಟ್ಟ ರಸ್ತೆಗಳಿಂದ ಹಾಳಾಗುತ್ತಿವೆ.
-ಸುರೇಶ್‌ ಪೂಜಾರಿ, ಕಲ್ಯಾಣಪುರ.

Advertisement

Udayavani is now on Telegram. Click here to join our channel and stay updated with the latest news.

Next