ಉಡುಪಿ: ಹುಬ್ಬಳ್ಳಿಯ ಹಿಂದೂ ಯುವತಿ ನೇಹಾ ಹತ್ಯೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿದೆ.
ಸೋಮವಾರ ಪಕ್ಷದ ಜಿಲ್ಲಾ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದಜಿಲ್ಲಾ ಅಧ್ಯಕ್ಷ ಕಿಶೋರ್ ಕುಮಾರ್, ಅನ್ಯ ಕೋಮಿನ ಯುವಕನಿಂದ ಹತ್ಯೆಯಾದ ನೇಹಾ ಹಿರೇಮಠ ಸಾವಿನ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರಕಾರ ಹಗುರವಾಗಿ ಪರಿಗಣಿಸಿದ್ದು, ಅದರ ದುರಾಡಳಿತಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯವೇ ತಲೆತಗ್ಗಿಸುವಂತ ಘಟನೆ ಆಗಿದ್ದರೂ ಕಾಂಗ್ರೆಸ್ ಸರಕಾರ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದೆ. ಮುಖ್ಯಮಂತ್ರಿ, ಗೃಹಮಂತ್ರಿಗಳು ನೀಡುತ್ತಿರುವ ಹೇಳಿಕೆಗಳು ಓಲೈಕೆ ರಾಜಕಾರಣಕ್ಕೆ ಪುರಾವೆಗಳಾಗಿವೆ. ಸಮಾಜದ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದ್ದರೂ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ನೇಹಾಳ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಇಂಥ ಘಟನೆಗಳು ಸಂಭವಿಸಿದಾಗ ಸರಕಾರ ಜವಾಬ್ದಾರಿಯುತವಾಗಿ ವರ್ತಿಸುವುದು ಬಿಟ್ಟು, ಉಡಾಫೆಯಾಗಿ ವರ್ತಿಸುತ್ತಿದೆ. ಕೊಲೆಯಾದ ಯುವತಿಯಪೋಷಕರಿಗೆ ಸಾಂತ್ವನ ಹೇಳುವುದು ಬಿಟ್ಟು ಆಕೆಯ ತೇಜೋವಧೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳು ಶಾಲೆ, ಕಾಲೇಜಿಗೆ ಭಯದಿಂದ ತೆರಳುವ ಪರಿಸ್ಥಿತಿಯನ್ನು ಕಾಂಗ್ರೆಸ್ ಸರಕಾರ ಸೃಷ್ಟಿಸಿದೆ ಎಂದು ಬಿಜೆಪಿ ಮಂಗಳೂರು ಪ್ರಭಾರಿ ಉದಯ ಕುಮಾರ್ ಶೆಟ್ಟಿ ಆರೋಪಿಸಿದರು.
ಶಾಸಕ ಯಶಪಾಲ್ ಎ. ಸುವರ್ಣ, ಉಪಾಧ್ಯಕ್ಷ ಕಿರಣ್ ಕುಮಾರ್, ಪ್ರಮುಖರಾದ ಶ್ಯಾಮಲಾ ಕುಂದರ್, ಕುಯಿಲಾಡಿ ಸುರೇಶ್ ನಾಯಕ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೇಬೆಟ್ಟು, ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಮಹೇಶ್ ಠಾಕೂರ್ ಮತ್ತಿತರರು ಭಾಗವಹಿಸಿದ್ದರು.