ಉಡುಪಿ: ನಗರಸಭೆ ಮೂಡು ಪೆರಂಪಳ್ಳಿ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಅನಿಟಾ ಬೆಲಿಂಡ ಡಿ”ಸೋಜಾ ಜಯ ಸಾಧಿಸಿದ್ದಾರೆ.
ಕಾಂಗ್ರೆಸ್ ಸದಸ್ಯೆ ಸೆಲಿನಾ ಕರ್ಕಡಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರುತಿ ವಿರುದ್ಧ ಬಿಜೆಪಿ ಅಭ್ಯರ್ಥಿ ಅನಿತಾ ಬೆಲಿಂಡಾ ಡಿ”ಸೋಜಾ 6 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ಚಲಾವಣೆಯಾದ ಒಟ್ಟು 2039 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಅನಿತಾ 1015 ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರುತಿ 1009 ಮತಗಳನ್ನು ಪಡೆದಿದ್ದರು. 15 ನೋಟಾ ಮತಗಳು ಬಿದ್ದಿವೆ.
ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದು, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮೂಡು ಪೆರಂಪಳ್ಳಿ ವಾರ್ಡ್ ಇದೀಗ ಬಿಜೆಪಿ ಪಾಲಾಗಿದೆ.
35 ಸ್ಥಾನಗಳ ಉಡುಪಿ ನಗರಸಭೆಯಲ್ಲಿ ಈ ಸೋಲಿನಿಂದ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ ನಾಲ್ಕರಿಂದ ಮೂರಕ್ಕೆ ಇಳಿದಿದೆ. ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವುದರ ಮೂಲಕ ಬಿಜೆಪಿ ಸದಸ್ಯರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.