Advertisement

ಪೂರ್ಣ ಪ್ರಮಾಣದ ಮರಳುಗಾರಿಕೆ15 ದಿನಗಳಲ್ಲಿ ಸರಿಪಡಿಸಿ: ರಘುಪತಿ ಭಟ್‌

09:33 AM Dec 09, 2018 | |

ಉಡುಪಿ: ಜಿಲ್ಲಾಡಳಿತವು ಈ ಹಿಂದೆ ಜಿಲ್ಲೆಯಲ್ಲಿ ಗುರುತಿಸಿರುವ ಎಲ್ಲ 170 ಮಂದಿ ಸಾಂಪ್ರದಾಯಿಕ ಮರಳು ತೆಗೆಯುವವರಿಗೂ ಲೀಸ್‌ ನೀಡಿ ಮರಳುಗಾರಿಕೆಯನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕೆ 15 ದಿನಗಳ ಗಡುವು ನೀಡಲಾಗುವುದು. ಇಲ್ಲದಿದ್ದಲ್ಲಿ ಮತ್ತೆ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಶಾಸಕ ರಘುಪತಿ ಭಟ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಧರಣಿ ನಡೆಸಿದ ಅನಂತರ ರಾಜ್ಯದ ಸಚಿವರು, ಅಧಿಕಾರಿಗಳು, ಕೇಂದ್ರ ಸಚಿವರನ್ನು ನಾವು ಭೇಟಿ ಮಾಡಿದ ಬಳಿಕ ಜಿಲ್ಲಾಡಳಿತ, ರಾಜ್ಯ ಸರಕಾರ ಕೇಳಿದ ಸ್ಪಷ್ಟೀಕರಣವನ್ನು ಕೇಂದ್ರ ಸರಕಾರ ನೀಡಿದೆ. ಹಾಗಾಗಿ ಸದ್ಯ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ. ಸ್ಪಷ್ಟೀಕರಣವನ್ನು ಕೇಂದ್ರ ಸರಕಾರ ನ. 29ರಂದೇ ನೀಡಿದೆ. ಆದರೆ ಇದುವರೆಗೂ ರಾಜ್ಯ ಸರಕಾರ, ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಜಿಲ್ಲೆಯ ಸಮಸ್ಯೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದರು.

25 ಲಕ್ಷ ಮೆಟ್ರಿಕ್‌ ಟನ್‌ ಮರಳು
ಕುಂದಾಪುರ ಮತ್ತು ಬೈಂದೂರುಗಳನ್ನು ಹೊರತುಪಡಿಸಿ ಜಿಲ್ಲೆಯ ವಿವಿಧೆಡೆ ದಿಬ್ಬಗಳಲ್ಲಿ ಒಟ್ಟು 25 ಲಕ್ಷ ಟನ್‌ ಮರಳನ್ನು ಬೆಥಮೆಟ್ರಿಕ್‌ ಸರ್ವೆಯಲ್ಲಿ ಗುರುತಿಸಲಾಗಿದೆ. ಕಳೆದ ವರ್ಷ 9 ಲಕ್ಷ ಮೆಟ್ರಿಕ್‌ ಟನ್‌ ಮರಳು ಗುರುತಿಸಿ 6.70 ಲಕ್ಷ ಟನ್‌ ಮರಳು ಮಾತ್ರ ತೆಗೆಯಲಾಗಿತ್ತು. ಈ ಬಾರಿ ಅಪಾರ ಪ್ರಮಾಣದಲ್ಲಿ ಮರಳು ಲಭ್ಯವಿದೆ. ಆದರೆ ಜಿಲ್ಲಾಡಳಿತದ ಹಟಮಾರಿ ಧೋರಣೆಯಿಂದ ಸಂಕಷ್ಟ ಎದುರಾಗಿದೆ. ಜಿಲ್ಲಾಧಿಕಾರಿಯವರು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಪ್ರಶ್ನಾವಳಿಗಳನ್ನು ಗಮನಿಸಿದರೆ ಅವರು ಕೇಂದ್ರವು ಮರಳುಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಲು ಬಯಸಿದಂತಿದೆ ಎಂದರು.

ಕೆಎಸ್‌ಸಿಝಡ್‌ಎಂಎಗೆ ವರದಿ ಹೋಗಿಲ್ಲ
ಮರಳುಗಾರಿಕೆಗೆ ಆಗ್ರಹಿಸಿ ಅ. 25ರಂದು ಧರಣಿ ಆರಂಭಿಸಿದ್ದೆವು. ಅಂದೇ ರಾಜ್ಯ ಕಾರ್ಯದರ್ಶಿಯವರಿಗೆ ಜಿಲ್ಲಾಧಿಕಾರಿ ಪತ್ರ ಬರೆದರು. ಅ. 26ಕ್ಕೆ ಕೇಂದ್ರ ಸರಕಾರಕ್ಕೆ ಪತ್ರ ರವಾನಿಸಲಾಯಿತು. ಅನಂತರ ಬೆಥಮೆಟ್ರಿಕ್‌ ಸರ್ವೆಯೂ ಆರಂಭವಾಯಿತು. ನ. 1ಕ್ಕೆ ಬೆಥಮೆಟ್ರಿಕ್‌ ಸರ್ವೆ ಮುಗಿದಿದೆ. ಕೇಂದ್ರ ಪರಿಸರ ಸಚಿವ ಡಾ| ಹರ್ಷವರ್ಧನ್‌ ಅವರ ಬಳಿ ನಿಯೋಗ ತೆರಳಿದಾಗ ಅವರು ಅಗತ್ಯ ಕ್ರಮ ಕೈಗೊಂಡು ರಾಜ್ಯ ಸರಕಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲಾಡಳಿತವು ಮರಳು ದಿಬ್ಬಗಳನ್ನು ಗುರುತಿಸಿರುವ ಕುರಿತು ಕೆಎಸ್‌ಸಿಝಡ್‌ಎಂಎ (ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರ) ತಪ್ಪು ಮಾಹಿತಿ ನೀಡಿದೆ. ಹಾಗಾಗಿ ಅದು ಮತ್ತೆ ವಾಪಸಾಗಿದೆ.

ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರಕಾರದಿಂದ ಸ್ಪಷ್ಟನೆ ಬಂದ ಕೂಡಲೇ ಜಿಲ್ಲಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರೆ ಇಷ್ಟರೊಳಗೆ ಮರಳುಗಾರಿಕೆ ಆರಂಭವಾಗುತ್ತಿತ್ತು. ಈ ನಡುವೆ ಈಗ ರಾಜ್ಯ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ಮಂಡಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇದುವರೆಗೆ ಉಪಸಮಿತಿಯ ಒಂದೇ ಒಂದು ಸಭೆ ನಡೆದಿಲ್ಲ. ಮರಳುಗಾರಿಕೆ ವಿಷಯ ಕುರಿತಾಗಿ ಕೂಡ ಉಪಸಮಿತಿ ಸಭೆ ಶೀಘ್ರ ನಡೆಯುವ ನಿರೀಕ್ಷೆ ಇಲ್ಲ. ಹಾಗಾಗಿ ರಾಜ್ಯ ಸರಕಾರ ಕೂಡಲೆ ಜಿಲ್ಲಾಧಿಕಾರಿಯವರಿಗೆ ಸೂಕ್ತ ನಿರ್ದೇಶನ ನೀಡಿ 15 ದಿನಗಳೊಳಗೆ ಮರಳುಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಭಟ್‌ ಒತ್ತಾಯಿಸಿದರು. ಲಾರಿ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಪ್ರವೀಣ್‌ ಸುವರ್ಣ, ಎಂಜಿನಿಯರ್ ಅಸೋಸಿಯೇಶನ್‌ನ ಪಾಂಡುರಂಗ ಆಚಾರ್‌, ಭಗವಾನ್‌ದಾಸ್‌, ಉಡುಪಿ ಜಿಲ್ಲಾ ಹೊಗೆ ದೋಣಿ ಕಾರ್ಮಿಕರ ಸಂಘದ ಅಧ್ಯಕ್ಷ ಸುಧಾಕರ್‌ ಡಿ. ಅಮೀನ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next