ದೇಹಾಂತರಪ್ರಾಪ್ತಿ ಎಂದರೆ ದೇಹಾಂತರಪ್ರಾಪ್ತಿಯ ಅನುಭವ. ನಿದ್ರೆಯಿಂದ ಎದ್ದ ಬಳಿಕ ಒಳ್ಳೆಯ ನಿದ್ದೆ ಮಾಡಿದೆ ಎಂದು ಹೇಳುತ್ತೇವೆ. “ನಾನು’ ಎಂಬ ಜ್ಞಾನ ಇದ್ದದ್ದರಿಂದಲೇ ಹೀಗೆ ಹೇಳುವುದು. ನಿದ್ರೆಯ ಸಮಯದಲ್ಲಿ “ನಾನು’ ಇರಲಿಲ್ಲ ಎಂದು ಹೇಳುವುದಿಲ್ಲವಲ್ಲ? ಮೂರ್ಛೆಯಿಂದ ಎದ್ದವನಾಗಲೀ, ನಿದ್ರೆ ಮಾಡಿದವನಾಗಲೀ “ನಾನು’ ಎನ್ನುತ್ತಾನೆ. ಆ ಜ್ಞಾನ ಇರುವುದರಿಂದಲೇ “ನಾನು’ ಎನ್ನುವುದು. ಇದು ಆತ್ಮನದ್ದೇ ಅನುಭವ. ಆದ್ದರಿಂದ ದೇಹಾಂತರಪ್ರಾಪ್ತಿಯಲ್ಲೂ ಆತ್ಮನ ಅಸ್ತಿತ್ವ ಇರುತ್ತದೆ. ಕೌಮಾರಾದಿ ಅನುಭವ ಜಡದೇಹಕ್ಕೆ ಅಲ್ಲ. ಹಾಗಿದ್ದರೆ ಮೃತ ಶರೀರವೂ ಹೇಳಬೇಕಿತ್ತು. ವಾಯುಗಳು ಹೋದದ್ದರಿಂದ ಹಾಗೆ ಹೇಳಲು ಆಗುವುದಿಲ್ಲ. ಆತ್ಮನಿಗೇ ಕೌಮಾರಾದಿ ಅನುಭವವಾಗುವುದಾದರೆ ಆತ್ಮನೇ ಮನುಷ್ಯನಾಗಿರಬೇಕಾಗಿಲ್ಲ. ಮನುಷ್ಯತ್ವ ಇರುವುದು ಆತ್ಮನಲ್ಲಲ್ಲ. ದೇಹದಲ್ಲಿರುವುದು. “ನಾನು ಮನುಷ್ಯ’ ಎಂದಾಗುವುದಾದರೆ ಮನುಷ್ಯತ್ವ ಇರುವುದು ದೇಹದಲ್ಲಿ. ನಾನು ಬಾಲಕ, ನಾನು ಕುಮಾರ, ನಾನು ವೃದ್ಧ ಇದೆಲ್ಲ ಏಕರೂಪ ಅನುಭವ. ಆತ್ಮನಲ್ಲಿ ಕೌಮಾರ್ಯವಿಲ್ಲ, ವೃದ್ಧಾಪ್ಯವಿಲ್ಲ. ಹಾಗಿದ್ದರೆ ಆತ್ಮನೇ ಇಲ್ಲ ಎಂದು ತೋರಿಸಬೇಕಾಗುತ್ತದೆ. ಆತ್ಮನಲ್ಲಿ ಇಲ್ಲದೇ ಇದ್ದ ಮನುಷ್ಯತ್ವ ಹೇಗೆ ಬಂತು? ನಿದ್ರಾ, ಮೂರ್ಛಾವಸ್ಥೆಯಲ್ಲಿ ಅನುಭವವಿಲ್ಲ, ದೇಹವಿದೆ. ನಿದ್ದೆಯಲ್ಲಿ ನಾನು ಬಾಲ, ನಾನು ಕುಮಾರ, ನಾನು ಮನುಷ್ಯ ಎಂಬ ಜ್ಞಾನವಿಲ್ಲ. ನಿದ್ರೆಯಲ್ಲಿ ಜೀವವಿದ್ದರೂ ಆ ಜ್ಞಾನ ಬರುವುದಿಲ್ಲವಲ್ಲ? ಇದು ದೇಹಕ್ಕೆ ಬಂದ ಜ್ಞಾನವಲ್ಲವೆ?
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811