Advertisement

ಗ್ರಾಮೀಣ ಭಾಗಕ್ಕೆ ಕೆಎಸ್ಸಾರ್ಟಿಸಿ ಸೇವೆ

12:46 AM Apr 12, 2022 | Team Udayavani |

ಉಡುಪಿ: ಖಾಸಗಿ ಸಾರಿಗೆ ವ್ಯವಸ್ಥೆಗಿಂತ ಸರಕಾರಿ ಸಾರಿಗೆ ವ್ಯವಸ್ಥೆ ದಕ್ಷತೆಯಿಂದ ಹೆಚ್ಚಿನ ಸೇವೆ ನೀಡಬೇಕು. ಗ್ರಾಮೀಣ ಭಾಗಕ್ಕೆ ಕೆಎಸ್ಸಾರ್ಟಿಸಿ ಸೇವೆ ಸಿಗುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಹೇಳಿದರು.

Advertisement

ಬನ್ನಂಜೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನಿರ್ಮಾಣಗೊಂಡ ಡಾ| ವಿ.ಎಸ್‌. ಆಚಾರ್ಯ ಬಸ್‌ ನಿಲ್ದಾಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಡಾ| ಆಚಾರ್ಯ ನೆನಪಿನಲ್ಲಿ ಈ ತಂಗುದಾಣ ನಿರ್ಮಾಣಗೊಂಡಿರುವುದು ಸಂತಸದಾಯಕ. ರಾಜ್ಯದ ಸಾರಿಗೆ ವ್ಯವಸ್ಥೆ ಸುಭದ್ರವಾಗಿರಬೇಕು. ಓಡಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲದವರಿಗೆ ಸರಕಾರಿ ಸಾರಿಗೆ ವ್ಯವಸ್ಥೆ ಸದುಪಯೋಗವಾಗಬೇಕು ಎಂದರು.

ಹೆಸರಿಗೆ ತಕ್ಕ ಸೇವೆ ಸಿಗಲಿ
ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕ ಆಡಳಿತ ನಡೆಸಿದವರು ಡಾ| ಆಚಾರ್ಯರು. ಆಡಳಿತದಲ್ಲಿ ವಿವಿಧ ಸೇವೆ ನೀಡುವ ಮೂಲಕ ಉಡುಪಿ ನಗರಸಭೆ ಅವರ ಕಾಲದಲ್ಲಿ ಉತ್ತಮ ಪ್ರಶಸ್ತಿಗೆ ಭಾಜನವಾಗಿದೆ. ಸಚಿವರು, ಶಾಸಕರಾಗಿ ಅವರು ಯಶಸ್ಸು ಸಾಧಿಸಿದ್ದಾರೆ. ಅವರಂತೆಯೇ ಈ ಬಸ್‌ ತಂಗುದಾಣ ಸ್ವತ್ಛ, ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಅವರ ಹೆಸರಿಗೆ ತಕ್ಕಂಥ ಸೇವೆ ಇಲ್ಲಿ ಸಿಗಬೇಕು. ಈ ಬಸ್‌ ತಂಗುದಾಣ ದಲ್ಲಿ ಮಲ್ಟಿಪ್ಲೆಕ್ಸ್‌ ಮಾಡುವ ಬಗ್ಗೆ ಸದ್ಯವೇ ನಿರ್ಣಯಿಸಲಾಗುವುದು ಎಂದರು.

ಮೆಡಿಕಲ್‌ ಕಾಲೇಜು ಆರಂಭ
ಉಡುಪಿ ಬೆಳೆಯುತ್ತಿರುವ ನಗರ. ನೈಸರ್ಗಿಕ ಪ್ರದೇಶ, ಉತ್ತಮ ಜನರಿಂದ ಕೂಡಿದೆ. ಇಲ್ಲಿ ಎಲ್ಲರಿಗೂ ಸ್ಫೂರ್ತಿ ಸಿಗುತ್ತದೆ. ಈಗಾಗಲೇ 250 ಬೆಡ್‌ಗಳ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್‌ ಕಾಲೇಜು- ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. 200 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ತಾಯಿ- ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತದೆ ಎಂದರು.

Advertisement

ಒಳಚರಂಡಿ ವ್ಯವಸ್ಥೆಗೂ ಮಂಜೂರಾತಿ
ಉಡುಪಿ ನಗರದ ಯುಜಿಡಿ ಸಮಸ್ಯೆ ನಿವಾರಣೆಗೆ ಈಗಾಗಲೇ ಡಿಪಿಆರ್‌ ಮಾಡಲಾಗಿದೆ. ಸರಕಾರ ಇದನ್ನೂ ಮಂಜೂರು ಮಾಡಲಾಗುತ್ತದೆ. ಸಾರಿಗೆ ಸಂಸ್ಥೆಗಳು ಹಾಗೂ ಎಸ್ಕಾಂಗಳು ಸ್ವಂತ ಕಾಲಿನಲ್ಲಿ ನಿಲ್ಲಬೇಕು. ಈ ಎರಡನ್ನು ಸರಿಪಡಿಸಿದರಷ್ಟೇ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೊಳ್ಳಲಿದೆ ಎಂದರು.

ಸಾರಿಗೆ ಇಲಾಖೆ: ಖಾಲಿ ಹುದ್ದೆ ಭರ್ತಿ
ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಸಮಾನ ವೇತನ ನೀಡುವ ಪ್ರಯತ್ನಕ್ಕೂ ಮುಖ್ಯಮಂತ್ರಿಗಳು ಶ್ರಮಿಸಿದ್ದಾರೆ. ಅನಿವಾರ್ಯ ಕಾರಣಗಳಿಂದ ಮುಷ್ಕರ ನಡೆಸಿದ ಸಾರಿಗೆ ಇಲಾಖೆಯ ಕೆಲವು ಮಂದಿ ಸಿಬಂದಿಯನ್ನು ಮರುನೇಮಕ ಮಾಡಲಾಗಿದೆ. ತಿಂಗಳೊಳಗೆ ಎಲ್ಲರನ್ನೂ ನೇಮಕ ಮಾಡಲಾಗುವುದು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಅಪಘಾತರಹಿತ ಚಾಲಕರಿಗೆ ಬೆಳ್ಳಿಪದಕ ವಿತರಿಸಲಾಯಿತು. ಗುತ್ತಿಗೆದಾರರಾದ ಪ್ರಭಾಕರ್‌ ಯೆಯ್ನಾಡಿ ಅವರನ್ನು ಮುಖ್ಯಮಂತ್ರಿಯವರು ಸಮ್ಮಾನಿಸಿದರು.

ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು. ಸಚಿವರಾದ ಎಸ್‌. ಅಂಗಾರ, ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಲಾಲಾಜಿ ಆರ್‌. ಮೆಂಡನ್‌, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್‌ ಎಸ್‌.ಕಲ್ಮಾಡಿ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ, ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ಸಹಿತ ಕೆಎಸ್ಸಾರ್ಟಿಸಿ ಅಧಿಕಾರ ವೃಂದ ಹಾಗೂ ಸಿಬಂದಿ ಉಪಸ್ಥಿತರಿದ್ದರು.

ಸಿಆರ್‌ಝಡ್‌ ನಿಯಮ ಬದಲಾವಣೆ ಮುನ್ಸೂಚನೆ
ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪುಷ್ಟಿ ಸಿಗಬೇಕೆಂದರೆ ಸಿಆರ್‌ಝಡ್‌ ನಿಯಮಾವಳಿ ಬದಲಾಗಬೇಕು. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲಿಯೇ ತಿಳಿಸಲಾಗುವುದು. ಇದು ಕಾರ್ಯಗತಗೊಂಡರೆ ಬೀಚ್‌ ಹಾಗೂ ದೇಗುಲ ಪ್ರವಾಸೋದ್ಯಮದ ಮೂಲಕ ಜಿಲ್ಲೆಯ ಆರ್ಥಿಕತೆ ವೃದ್ಧಿಯಾಗಲಿದೆ. ಪ್ರವಾಸೋದ್ಯಮಕ್ಕೆ ಸರಕಾರ ಪೂರ್ಣ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next