ಉಡುಪಿ: ಕೋಲ್ಕತಾದಲ್ಲಿ ಆರ್.ಜಿ. ಕರ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯೆ ಮೇಲೆ ನಡೆದ ಅ*ತ್ಯಾಚಾರ ಮತ್ತು ಹ*ತ್ಯೆ ಯನ್ನು ಖಂಡಿಸಿದ್ದಲ್ಲದೇ ಕರ್ತವ್ಯ ಸ್ಥಳದಲ್ಲಿ ಹೆಣ್ಮಕ್ಕಳ ಸುರಕ್ಷತೆ ಬಗ್ಗೆ ಕಠಿನ ಕಾನೂನು ಜಾರಿಗೊಳಿಸಲು ಒತ್ತಾಯಿಸಿ ಉಡುಪಿ ಜಿಲ್ಲೆೆಯ ವೈದ್ಯರೆಲ್ಲಾ ಸೇರಿ ಶನಿವಾರ (ಆ 17 )ಬೀದಿಗಿಳಿದು ಪ್ರತಿಭಟನೆ ನಡೆಸಿದರು. ವೈದ್ಯರ ಮುಷ್ಕರ ಪರಿಣಾಮ ಹಲವೆಡೆ ಒಪಿಡಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ತುರ್ತು ಚಿಕಿತ್ಸೆ ಸೇವೆ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಾಗಿತ್ತು.
ಜಿಲ್ಲೆಯ ಖಾಸಗಿ ಆಸ್ಪತ್ರೆಗಳು, ಸರಕಾರಿ ಆಸ್ಪತ್ರೆ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಆ. 17, ಬೆಳಗ್ಗೆ 6 ಗಂಟೆಯಿಂದ ಆ. 18, ಸಂಜೆ 6 ಗಂಟೆವರೆಗೆ ತುರ್ತು ಚಿಕಿತ್ಸೆ ಹೊರತು ಪಡಿಸಿ ತಮ್ಮ ಕ್ಲಿನಿಕ್ ಹಾಗೂ ಆಸ್ಪತ್ರೆಗಳ ಇತರೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಕೇಂದ್ರ, ರಾಜ್ಯ ಸರಕಾರ ವೈದ್ಯರ ರಕ್ಷಣೆಗೆ ಕಠಿನ ಕಾನೂನು ಜಾರಿಗೆ ತರಬೇಕಿದೆ ಎಂದು ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ ರಾಜಲಕ್ಷ್ಮೀ, ಐಎಂಎ ಜಿಲ್ಲಾ ಸಂಯೋಜಕ ಡಾ ವಾಸುದೇವ್ ತಿಳಿಸಿದ್ದಾರೆ.
ರವಿವಾರ ಸಂಜೆ ಉಡುಪಿ ಬೋರ್ಡ್ ಹೈಸ್ಕೂಲಿನಿಂದ ಅಜ್ಜರಕಾಡು ಹುತಾತ್ಮ ಸ್ಮಾರಕವರೆಗೆ ಮೌನ ಮೆರವಣಿಗೆ ನಡೆಯಿತು. ಕೋಲ್ಕತಾ ಅ*ತ್ಯಾಚಾರ, ಕೊ*ಲೆ ಪ್ರಕರಣವನ್ನು ಖಂಡನೆ, ನ್ಯಾಯಯುತ ತನಿಖೆ, ಆರೋಪಿಗೆ ಕಠಿನ ಶಿಕ್ಷೆ, ಕರ್ತವ್ಯ ಸ್ಥಳದಲ್ಲಿ ಹೆಣ್ಮಕ್ಕಳ ಸುರಕ್ಷತೆಗಾಗಿ ಕ್ರಮವಹಿಸುವಂತೆ ಫಲಕವನ್ನು ಪ್ರದರ್ಶಿಸಿ ಮೆರವಣಿಗೆಯುದ್ದಕ್ಕೂ ಸಾಗಿದರು. ಹುತಾತ್ಮ ಸ್ಮಾರಕದಲ್ಲಿ ಮೊಂಬತ್ತಿ ಹಿಡಿದು ಪ್ರಾರ್ಥಿಸಿದರು.
ಮುಷ್ಕರದಲ್ಲಿ ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಶಾಖೆ, ಕಾರ್ಕಳ ಐಎಂಎ, ಕುಂದಾಪುರ ಐಎಂಎ, ಆಯುಷ್ ವೈದ್ಯರು, ಭಾರತೀಯ ದಂತ ವೈದ್ಯ ಸಂಘ, ಪ್ಯಾರಮೆಡಿಕಲ್, ನರ್ಸಿಂಗ್ ಕಾಲೇಜು ಬೋಧಕರು, ಸಿಬಂದಿ ಸಹಿತ ವಿವಿಧ ಸಂಘ,ಸಂಸ್ಥೆಯವರು ವೈದ್ಯರ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಚಿತ್ರಗಳು: ಆಸ್ಟ್ರೋ ಮೋಹನ್