ಉಡುಪಿ: ನಾಲ್ಕು ವರ್ಷಗಳಿಂದ ಯುವತಿಯನ್ನು ಪೋಷಿಸಿದ್ದ ಸರಕಾರ ಶುಕ್ರವಾರ ಆಕೆಗೆ ಮದುವೆ ಮಾಡಿಸಿ ಮಾದರಿಯಾದ ಘಟನೆ ನಿಟ್ಟೂರಿನಲ್ಲಿ ಶುಕ್ರವಾರ ನಡೆದಿದೆ.
ಮನೆಯವರಿಂದ ದೂರವಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ನಿಟ್ಟೂರು ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಜಯಶ್ರೀ ಎಂಬಾಕೆಯನ್ನು ದಾವಣಗೆರೆ ಜಿಲ್ಲೆಯ ಸವಳಂಗ ಗ್ರಾಮದ ಕೃಷಿಕ ಮಲ್ಲೇಶ ಡಿ.ಎಲ್.ಅವರೊಂದಿಗೆ ವಿವಾಹ ಮಾಡಿಕೊಡಲಾಯಿತು.
ವಧು ಹಾಗೂ ವರ ಇಬ್ಬರೂ 9ನೇ ತರಗತಿಯ ವರೆಗೆ ವ್ಯಾಸಂಗ ಮಾಡಿದ್ದಾರೆ. ಅನಾಥೆಯನ್ನೇ ವರಿಸ ಬೇಕೆಂದು ನಿಶ್ಚಯಿಸಿದ್ದ ವರನ ಕಡೆಯವರು ಮಹಿಳಾ ನಿಲಯದಲ್ಲಿ ವಿಚಾರಿಸಿದ್ದರು. ಅನಂತರ ಜಿಲ್ಲಾಧಿಕಾರಿ ಅಧ್ಯಕ್ಷತೆಯ ವ್ಯವಸ್ಥಾಪನ ಸಮಿತಿಯಲ್ಲಿ ನಿರ್ಣಯಿಸಿ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳು ಅದಕ್ಕೆ ಬೇಕಿರುವ ತಯಾರಿ ನಡೆಸಿ ವರನ ಬಗ್ಗೆ ಎಲ್ಲ ರೀತಿಯ ಮಾಹಿತಿ ಕಲೆಹಾಕಿ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಗುರುವಾರ ಅರಶಿನಶಾಸ್ತ್ರ ನಡೆದು ವಿವಾಹ ನೋಂದಣಿ ನಡೆಯಿತು. ಶುಕ್ರವಾರ ಅಧಿಕೃತವಾಗಿ ಮದುವೆ ಮಾಡಲಾಯಿತು.
ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಡಿಸಿ ಕೂರ್ಮಾರಾವ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಲೀಲಾವತಿ, ವರನ ಕಡೆಯ ಮಂದಿ ಮದುವೆಗೆ ಸಾಕ್ಷಿಯಾದರು. ಮೂಡುಬೆಳ್ಳೆ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು.
ಉದಾರ ನೆರವು
ಕಟಪಾಡಿಯ ಜ್ಯೇಷ್ಠ ಡೆವಲಪರ್ಸ್ ನಿಂದ ಮದುಮಗಳಿಗೆ ಚಿನ್ನದ ಮಾಂಗಲ್ಯ ಮತ್ತು ಧಾರೆ ಸೀರೆ, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳ ವತಿಯಿಂದ ಊಟದ ವ್ಯವಸ್ಥೆ ಸಹಿತ ವಿವಿಧ ಸಂಸ್ಥೆ, ವ್ಯಕ್ತಿಗಳ ಉದಾರ ನೆರವಿನಿಂದ ಈ ಮದುವೆ ನೆರವೇರಿದೆ. ರವೀಂದ್ರ ನಾಯಕ್ ಹಾಗೂ ಹಿತೈಷಿಗಳಿಂದ ಮದುಮಗಳ ಹೆಸರಿನಲ್ಲಿ 50 ಸಾವಿರ ರೂ. ನಿರಖು ಠೇವಣೆ ಇರಿಸಲಾಯಿತು.