Advertisement

ರಾಷ್ಟ್ರಪತಿ ಆತಿಥ್ಯಕ್ಕೆ  ಉಡುಪಿ ಸಿದ್ಧ

09:58 AM Dec 27, 2018 | Team Udayavani |

ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಗುರುವಾರ ಮಧ್ಯಾಹ್ನ ಉಡುಪಿಗೆ ಆಗಮಿಸಲಿದ್ದು, ಬುಧವಾರ ಪೊಲೀಸರು ಸಿದ್ಧತೆಗೆ ಅಂತಿಮ ಸ್ಪರ್ಶ ನೀಡಿದರು. ಮಧ್ಯಾಹ್ನ ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ ನೇತೃತ್ವದಲ್ಲಿ ರಿಹರ್ಸಲ್‌ ನಡೆಯಿತು. 

Advertisement

ಕರಾವಳಿ ಬೈಪಾಸ್‌ ಸಮೀಪದ ಹೆಲಿಪ್ಯಾಡ್‌ನಿಂದ ರಥಬೀದಿಗೆ ಬಂದ ರಿಹರ್ಸಲ್‌ ದಂಡು ಪೇಜಾವರ ಮಠ ಮತ್ತು ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸುವ ರಥಬೀದಿ ಮಾರ್ಗ, ಸಮಯ, ವ್ಯವಸ್ಥೆಯನ್ನು ಪರಿಶೀಲಿಸಿತು. ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ರಾಷ್ಟ್ರಪತಿ ಆಗಮಿಸಲಿದ್ದು, ಇದೇ ಕಾರು ರಿಹರ್ಸಲ್‌ನಲ್ಲಿ ಪಾಲ್ಗೊಂಡಿತು. ಪ್ಯಾರಾ ಮಿಲಿಟರಿ ಪಡೆ ಈಗಾಗಲೇ ಆಗಮಿಸಿದ್ದು ಭದ್ರತೆಯಲ್ಲಿ ಪಾಲ್ಗೊಂಡಿದೆ. ಐಜಿಪಿ ಅವರು ವ್ಯವಸ್ಥೆಯನ್ನು ಅವಲೋಕಿಸಿದರು. 

ಸ್ಮರಣಿಕೆ ಸಿದ್ಧ 
ಪೇಜಾವರ ಮಠದಲ್ಲಿ ರಾಷ್ಟ್ರಪತಿಯವರಿಗೆ ನೀಡಲು ಶ್ರೀಕೃಷ್ಣ ಪ್ರತಿಮೆಯ ಆಕರ್ಷಕ ಸ್ಮರಣಿಕೆ ಸಿದ್ಧಪಡಿಸಲಾಗಿದೆ. ಹೊರದ್ವಾರವನ್ನು ಅಲಂಕರಿಸಲಾಗಿದೆ. ಪೇಜಾವರ ಮಠ ಮತ್ತು ಶ್ರೀಕೃಷ್ಣ ಮಠ ದಲ್ಲಿ ಆಸನಗಳನ್ನು  ಜೋಡಿಸಲಾಗಿದೆ. ಬೆಳಗ್ಗೆ 8 ಗಂಟೆಯೊಳಗೆ ಎಲ್ಲ ಪೂಜೆಗಳನ್ನು ಮುಗಿಸಲಾಗುವುದು. ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮಧ್ಯಾಹ್ನ11.45ಕ್ಕೆ ಹೆಲಿಪ್ಯಾಡ್‌ಗೆ ಆಗಮಿಸುವ ರಾಷ್ಟ್ರಪತಿ 12 ಗಂಟೆಗೆ ಪೇಜಾವರ ಮಠಕ್ಕೆ ಆಗಮಿಸುವರು, ಬಳಿಕ ಶ್ರೀಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಪಡೆಯುವರು. ಅಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ತಣ್ತೀ ಸಂಶೋಧನ ಸಂಸದ್‌ ಹೊರತಂದಿರುವ “ಮಹಾಭಾರತ’ದ ಇ ಬುಕ್‌ ಉದ್ಘಾಟಿಸುವ ಸಾಧ್ಯತೆ ಇದೆ. 

ರಾಷ್ಟ್ರಪತಿ ಭೇಟಿ ಸಂದರ್ಭ ಪೇಜಾವರ ಮಠದಲ್ಲಿ ಪೇಜಾವರ ಹಿರಿಯ ಮತ್ತು ಕಿರಿಯ ಸ್ವಾಮೀಜಿ, ಪರ್ಯಾಯ ಪಲಿಮಾರು ಸ್ವಾಮೀಜಿ ಭಾಗವಹಿಸು ವರು. ಶ್ರೀಕೃಷ್ಣ ಮಠದಲ್ಲಿ ಈ ಮೂವರು ಸ್ವಾಮೀಜಿ ಯವರಲ್ಲದೆ ಸೋದೆ, ಕಾಣಿಯೂರು, ಅದಮಾರು ಕಿರಿಯ ಸ್ವಾಮೀಜಿ ಉಪಸ್ಥಿತರಿರುವರು. ಆಯ್ದ ಬೆರಳೆಣಿಕೆ ವ್ಯಕ್ತಿಗಳಿಗೆ ಮಾತ್ರ ಪಾಸ್‌ ನೀಡಲಾಗಿದೆ. ಪೇಜಾವರ ಸ್ವಾಮೀಜಿಯವರು ಬುಧವಾರ ರಾತ್ರಿ ಬೆಂಗಳೂರಿನಿಂದ ಉಡುಪಿ ಮಠಕ್ಕೆ ಆಗಮಿಸಿದ್ದಾರೆ.

ಸಾರ್ವಜನಿಕರಿಗೆ ಕಿರಿಕಿರಿ
ರಥಬೀದಿ ಸುತ್ತಮುತ್ತಲಿನ ಅಂಗಡಿಗಳನ್ನು ಬುಧವಾರವೇ ಬಂದ್‌ ಮಾಡಿದ್ದರಿಂದ ಮತ್ತು ರಿಹರ್ಸಲ್‌ನಿಂದ ಸಾರ್ವಜನಿಕರಿಗೆ, ವ್ಯವಹಾರಸ್ಥರಿಗೆ ತೊಂದರೆಯಾಯಿತು. 

Advertisement

ಶಾಲೆಗಳಿಗೆ ರಜೆ
ರಥಬೀದಿ ಸಮೀಪದ ಮುಕುಂದಕೃಪಾ ಶಾಲೆ ಮತ್ತು ವಿದ್ಯೋದಯ ಶಾಲೆಗಳಿಗೆ ಗುರುವಾರ ರಜೆ ಸಾರಲಾಗಿದೆ. ವಿದ್ಯೋದಯ ಶಾಲೆಯಲ್ಲಿ ಪೊಲೀಸ್‌ ವ್ಯವಸ್ಥೆ ಮಾಡಲಾಗಿದೆ.

ಮಾರ್ಗ ಬದಲಾವಣೆ
ಉಡುಪಿ: ನಗರದಲ್ಲಿ ಗುರುವಾರ ಬೆಳಗ್ಗಿನಿಂದ ಸಂಜೆಯ ವರೆಗೂ ವಾಹನ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ನಗರಕ್ಕೆ ಆಗಮಿಸುವವರು ತುರ್ತು ಸಂದರ್ಭ ವಿನಾ ವಿಳಂಬಿಸಿಯೇ ಆಗಮಿಸುವುದು ಉತ್ತಮ. ಗುರುವಾರ ಬೆಳಗ್ಗೆ 7ರಿಂದ ಅಪರಾಹ್ನ 4ರ ವರೆಗೆ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗುತ್ತದೆ. ಉಡುಪಿಯಲ್ಲಿ ಈಗ ಪ್ರವಾಸಿಗರ/ ಯಾತ್ರಾರ್ಥಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಬದಲಾಯಿಸಿದ ಮಾರ್ಗ ಗಳಲ್ಲಿಯೂ ವಾಹನ ನಿಬಿಡತೆ ಉಂಟಾಗುವ ಸಾಧ್ಯತೆಗಳೂ ಇವೆ.

11.30ರಿಂದ ಝೀರೋ ಟ್ರಾಫಿಕ್‌ 
ಆದಿ ಉಡುಪಿಯಿಂದ ಬನ್ನಂಜೆ-ಶಿರಿಬೀಡು, ಸಿಟಿ ಬಸ್‌ನಿಲ್ದಾಣ- ಕಲ್ಸಂಕ- ರಥಬೀದಿ ವರೆಗೆ ಬೆಳಗ್ಗೆ 11.30ರಿಂದ ಅಪರಾಹ್ನ ಸುಮಾರು 2 ಗಂಟೆಯ ನಡುವೆ 2 ಬಾರಿ “ಝೀರೋ ಟ್ರಾಫಿಕ್‌’ ಇರಲಿದೆ. ರಾ.ಹೆದ್ದಾರಿ 66ರ ಕರಾವಳಿ ಬೈಪಾಸ್‌, ಅಂಬಾಗಿಲು, ಉದ್ಯಾವರ ಜಂಕ್ಷನ್‌ ಹಾಗೂ ಅಂಬಲಪಾಡಿ ಜಂಕ್ಷನ್‌ಗಳಲ್ಲಿಯೂ ಸಂಚಾರ ದಟ್ಟಣೆಯ ಸಾಧ್ಯತೆಗಳಿವೆ. “ಪೊಲೀಸರು ಅತಿ ನಿರ್ಬಂಧ ಹೇರುತ್ತಿದ್ದಾರೆ. ಭದ್ರತೆ ಹೆಸರಿನಲ್ಲಿ ರಸ್ತೆ ಬ್ಲಾಕ್‌ ಮಾಡುತ್ತಿದ್ದಾರೆ’ ಎಂಬ ದೂರುಗಳು ಸಾರ್ವಜನಿಕರಿಂದ ಬುಧವಾರವೇ ಬರಲಾರಂಭಿಸಿದ್ದವು.

ದೊಡ್ಡವರು ಮತ್ತೆ ಮತ್ತೆ ಬಂದರೆ! 
ಉಡುಪಿ: ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲರು, ಮಂತ್ರಿಮಾಗಧರು ಆಗಾಗ್ಗೆ ಬಂದರೆ ಸ್ಥಳೀಯರಿಗೆ ಒಂದಿಷ್ಟು ತೊಂದರೆಯಾದರೂ ಊರಿಗೆ ಒಂದಿಷ್ಟು ಪ್ರಯೋಜನಗಳೂ ಆಗುತ್ತವೆ. ರಾಷ್ಟ್ರಪತಿ ಭೇಟಿಗಾಗಿ ಡಿಸೆಂಬರ್‌ ಎರಡನೇ ವಾರದಿಂದಲೇ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ಬುಧವಾರದಿಂದಲೇ ವಾಹನಸಂಚಾರ ಮುಕ್ತ ರಸ್ತೆ ಪ್ರಯೋಗ ನಡೆಸಲಾಗುತ್ತಿದೆ. ರಥಬೀದಿ, ಬನ್ನಂಜೆ ಸುತ್ತಮುತ್ತಲಿನ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಪೊಲೀಸರು ಏದುಸಿರು ಬಿಟ್ಟುಕೊಂಡು ಓಡಾಡುತ್ತಿದ್ದಾರೆ. ಇಷ್ಟೆಲ್ಲ ಕಿರಿಕಿರಿ ಅನುಭವಿಸಿದರೂ ಒಂದಷ್ಟು ಅನುಕೂಲವಾಗಿದೆ. ಸಾಮಾನ್ಯರು ಎಷ್ಟೇ ಬೊಬ್ಬೆ ಹೊಡೆದರೂ ಎಚ್ಚರವಾಗದ ಆಡಳಿತದವರು ಈಗ ಒಮ್ಮಿಂದೊಮ್ಮೆಗೆ ಎಚ್ಚೆತ್ತು ರಸ್ತೆ ದುರಸ್ತಿ, ತೇಪೆ, ದಾರಿ ಬದಿ ಇದ್ದ ಕಸ ವಿಲೇವಾರಿ ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದಾರೆ!

ರಸ್ತೆ ದುರಸ್ತಿಗೆ 1 ಕೋ.ರೂ.
ಉಡುಪಿ ನಗರಸಭೆಯ 34 ವಾರ್ಡುಗಳಲ್ಲಿ ರಸ್ತೆ, ದುರಸ್ತಿಗಳನ್ನು ಸುಮಾರು 1 ಕೋ.ರೂ. ವೆಚ್ಚದಲ್ಲಿ ಮಾಡಲಾಗಿದೆ. ವೆಚ್ಚವನ್ನು ನಗರಸಭೆ ಭರಿಸಿದೆಯಾದರೂ ರಾಷ್ಟ್ರಪತಿ ಭೇಟಿಗಾಗಿಯೇ ತೆಗೆದಿಟ್ಟ ಹಣವಲ್ಲ. ಇವೆಲ್ಲ ಟೆಂಡರ್‌ ಕಾಮಗಾರಿಗಳು. ಆದರೂ ರಾಷ್ಟ್ರಪತಿ ಬಾರದೆ ಇದ್ದರೆ ಇಷ್ಟು ಬೇಗ ನಡೆಯುತ್ತಿರಲಿಲ್ಲ. 2017ರಲ್ಲಿ ರಾಷ್ಟ್ರಪತಿಗಳಾಗಿದ್ದ ಪ್ರಣವ್‌ ಮುಖರ್ಜಿ ಬಂದಾಗ ಕರಾವಳಿ ಬೈಪಾಸ್‌ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಆದರೂ ಅದರ ಅಂಡರ್‌ಪಾಸ್‌ನ್ನು ತರಾತುರಿಯಲ್ಲಿ ಬಿಟ್ಟುಕೊಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next