Advertisement
ಕಳೆದ ಮೂರು ವರ್ಷಗಳಿಂದ ಮೀನುಗಾರಿಕೆಗೆ ಸಂಬಂಧಿಸಿದ ಕೊಂಡಿ ರಸ್ತೆ ದುರಸ್ತಿ ಹಾಗೂ ನಿರ್ವಹಣೆಗೆ ಯಾವುದೇ ಅನುದಾನ ಮೀನುಗಾರಿಕೆ ಇಲಾಖೆಯಿಂದ ಒದಗಿಸಿಲ್ಲ.ಹೆಜಮಾಡಿಯಿಂದ ಬೈಂದೂರಿನ ಶಿರೂರು ವರೆಗೂ ಎನ್‌ಎಚ್ 66ರಿಂದ ಮೀನುಗಾರಿಕೆ ಪ್ರದೇಶಕ್ಕೆ ಹಲವು ಕೊಂಡಿ ರಸ್ತೆಗಳು ಇವೆ.
ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕೆಲವೊಂದು ಭಾಗದಲ್ಲಿ ರಸ್ತೆ ದುರಸ್ತಿ ನಡೆದಿದೆ. ಆದರೆ, ಮೀನುಗಾರಿಕೆ ಇಲಾಖೆಯಿಂದ ಕಳೆದ ಮೂರು ವರ್ಷದಲ್ಲಿ ಅಧಿಕೃತವಾಗಿ ದುರಸ್ತಿ ಹಾಗೂ ನಿರ್ವಹಣೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. 20 ಕೋ.ರೂ. ಅನುದಾನ: 2023-24ನೇ ಸಾಲಿನಲ್ಲಿ ಮೀನುಗಾರಿಕೆ ಸಂಪರ್ಕ ರಸ್ತೆಗಳ ದುರಸ್ತಿಗೆ ಮೀನುಗಾರಿಕೆ ಇಲಾಖೆಯಿಂದ 20 ಕೋ.ರೂ. ಅನುದಾನ ಮೀಸಲಿಡಲಾಗಿದೆ. ಮೀನುಗಾರಿಕೆ ಕೊಂಡಿ ರಸ್ತೆಗಳ ಪ್ರಸ್ತುತ ಸ್ಥಿತಿ ಆಧರಿಸಿ ದುರಸ್ಥಿ ಕಾಮಗಾರಿ ನಡೆಸಲಾಗುತ್ತದೆ. ಆದರೆ, ಇದು ಉಡುಪಿ ಜಿಲ್ಲೆಗೆ ಮೀಸಲಿಟ್ಟಿರುವ ಅನುದಾನವಲ್ಲ. ರಾಜ್ಯಕ್ಕೆ ಮೀಸಲಿಟ್ಟಿರುವ ಅನುದಾನವಾಗಿದ್ದು, ಉಡುಪಿ ಜಿಲ್ಲೆಗೆ ಎಷ್ಟು ಸಿಗಲಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
Related Articles
ಮೀನುಗಾರಿಕೆ ರಸ್ತೆ ನಿರ್ಮಾಣ ಸಂಬಂಧ 2020-21ನೇ ಸಾಲಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1 ಕಾಮಗಾರಿ 93.45 ಲಕ್ಷ ರೂ.ಗಳಲ್ಲಿ ನಡೆದಿತ್ತು. 2021-22ರಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ 9 ಕಾಮಗಾರಿಗಳು ಸುಮಾರು 32 ಲಕ್ಷ ರೂ.ಗಳಲ್ಲಿ ನಡೆದಿತ್ತು. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 41 ಲಕ್ಷ ರೂ. ವೆಚ್ಚದಲ್ಲಿ 6 ಕಾಮಗಾರಿ, ಕುಂದಾಪುರ ಕ್ಷೇತ್ರದಲ್ಲಿ 5 ಕಾಮಗಾರಿ ಸುಮಾರು 21 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಇದೇ ವರ್ಷ ಬೈಂದೂರಿನಲ್ಲಿ 10 ಕೋ.ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿತ್ತು. ಆದರೆ, ದುರಸ್ತಿ ಹಾಗೂ ನಿರ್ವಹಣೆಗೆ ಅನುದಾನ ಮೀಸಲಿಟ್ಟಿಲ್ಲ.
Advertisement
ಸ್ಥಳೀಯರ ಆಗ್ರಹ: ಮೀನುಗಾರಿಕೆಗೆ ಸಂಬಂಧಿಸಿದ ಕೊಂಡಿ ರಸ್ತೆಯಲ್ಲಿ ನಿರಂತರ ವಾಹನ ಸಂಚಾರ ಇರುವುದರಿಂದ ಹಾಗೂ ಮೀನುಸಾಗಾಟ ಮಾಡುವ ವಾಹನಗಳೇ ಹೆಚ್ಚು ಸಂಚರಿಸುವುದರಿಂದ ಪ್ರತಿ ವರ್ಷವೂ ದುರಸ್ತಿಗೆ ಸರಕಾರ ಅನುದಾನ ಮೀಸಲಿಡಬೇಕು. ಮೀನುಗಾರಿಕೆ ರಸ್ತೆಯಾದರೂ ಸ್ಥಳೀಯರ ಸಂಚಾರಕ್ಕೂ ಅದೇ ರಸ್ತೆ ಬಳಸುವುದರಿಂದ ಹಾನಿಯಾದ ತತ್‌ಕ್ಷಣವೇ ಸರಿಪಡಿಸುವ ವ್ಯವಸ್ಥೆಯನ್ನು ಮೀನುಗಾರಿಕೆ ಇಲಾಖೆ ಮಾಡಬೇಕು. ಲೋಕೋಪಯೋಗಿ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಸ್ಥಳೀಯ ಆಡಳಿತದ ತಾಂತ್ರಿಕ ಸಮಸ್ಯೆಯಿಂದ ಕೆಲವು ಕಡೆಗಳಲ್ಲಿ ರಸ್ತೆ ಅಭಿವೃದ್ಧಿಯೇ ಆಗಿಲ್ಲ ಎಂಬ ದೂರುಗಳು ಇವೆ.
ಕಳೆದ ಮೂರು ವರ್ಷ ಮೀನುಗಾರಿಕೆ ರಸ್ತೆ ದುರಸ್ತಿ, ನಿರ್ವಹಣೆಗೆ ಅನುದಾನ ಒದಗಿಸಿಲ್ಲ. ಈ ವರ್ಷ 20 ಕೋ.ರೂ. ಮೀನುಗಾರಿಕೆ ಕೊಂಡಿ ರಸ್ತೆ ದುರಸ್ತಿ, ನಿರ್ವಹಣೆಗೆ ಮೀಸಲಿಟ್ಟಿದ್ದೇವೆ. ರಸ್ತೆಗಳ ಪ್ರಸ್ತುತ ಸ್ಥಿತಿಗೆ ಅನುಸಾರವಾಗಿ ಅನುದಾನ ವಿನಿಯೋಗಿಸಲಾಗುವುದು.– ಮಂಕಾಳ ವೈದ್ಯ, ಮೀನುಗಾರಿಕೆ ಸಚಿವ