Advertisement

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

11:51 PM Jul 07, 2024 | Team Udayavani |

ಉಡುಪಿ: ರಾಜ್ಯದಲ್ಲಿ ಉಡುಪಿ ಜಿಲ್ಲೆ ಆನೆಕಾಲು (ಫೈಲೇರಿಯಾ) ರೋಗ ಮುಕ್ತ ಮೊದಲ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಯೊಂದೇ ಬಾಕಿಯಿದೆ. ಈ ನಡುವೆ ವಲಸೆ ಕಾರ್ಮಿಕರಲ್ಲಿ ಕೆಲವು ಪ್ರಕರಣಗಳು ಕಂಡುಬಂದಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಮೂಲಕ ಜನವರಿಯಲ್ಲಿ 4, ಎಪ್ರಿಲ್‌ 3, ಮೇ 14 ಹಾಗೂ ಜೂನ್‌ ತಿಂಗಳಲ್ಲಿ 14 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಬಿಹಾರ ಮೂಲಕ ಕಟ್ಟಡ ಕಾರ್ಮಿಕರಾಗಿದ್ದರೆ ಉಳಿದವು ಝಾರ್ಖಂಡ್‌, ಒಡಿಶಾ, ಉತ್ತರಪ್ರದೇಶದ ಮೂಲಕ ಕಾರ್ಮಿಕರದ್ದು. ಇವರಿಗೆಲ್ಲ ಈಗಾಗಲೇ ಸೂಕ್ತ ಚಿಕಿತ್ಸೆಯಲ್ಲಿ ಆರೋಗ್ಯ ಇಲಾಖೆ ಮೂಲಕ ನೀಡಲಾಗಿದೆ. ಜಿಲ್ಲೆಯಲ್ಲಿ ಯಾರಿಗೂ ಹೊಸದಾಗಿ ಈ ರೋಗ ಲಕ್ಷಣ ಕಂಡುಬಂದಿಲ್ಲ.

ರೋಗ ಲಕ್ಷಣ
ಇದು ಸಾಂಕ್ರಾಮಿಕ ರೋಗವಲ್ಲ. ಆನೆಕಾಲು ಕ್ಯೂಲೆಕ್ಸ್‌ ಸೊಳ್ಳೆ ಕಡಿತದಿಂದ ಬರುವ ರೋಗವಾಗಿದೆ. ಫೈಲೇರಿಯಾ ಹುಳುವಿರುವ ವ್ಯಕ್ತಿಯನ್ನು ಕ್ಯೂಲೆಕ್ಸ್‌ ಸೊಳ್ಳೆ ಕಚ್ಚಿದಾಗ ರಕ್ತದಲ್ಲಿರುವ ಹುಳ ಸೊಳ್ಳೆಯ ದೇಹ ಪ್ರವೇಶಿಸುತ್ತದೆ. ಈ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಜಂತು ಹುಳ ಆ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. ಕಡಿತಕ್ಕೊಳಗಾದ ವ್ಯಕ್ತಿಗೆ ಫೈಲೇರಿಯಾ ರೋಗ ಬರಲು ಕನಿಷ್ಠ 3ರಿಂದ 10 ವರ್ಷ ತಗಲಬಹುದು. ವ್ಯಕ್ತಿಯ ದೇಹದೊಳಗೆ ಪ್ರವೇಶಿಸಿದ ಹುಳವು ದುಗ್ಧರಸಗ್ರಂಥಿಗಳಲ್ಲಿ ಶೇಖರಣೆಯಾಗಿ, ರಕ್ತ ಪರಿಚಲನೆಯಾಗದೆ ಮುಂದಿನ ದೇಹದ ಭಾಗ ಸಂಪೂರ್ಣ ಊದಿಕೊಳ್ಳತೊಡಗುತ್ತದೆ. ವ್ಯಕ್ತಿಯ ದೇಹದೊಳಗಿರುವ ಹುಳ ಸಾವನ್ನಪ್ಪಿದರೂ ದೇಹದ ಊತ ಉಳಿದುಕೊಳ್ಳುತ್ತದೆ. ಕಾಲು, ಕೈ, ಎದೆಯ ಭಾಗಗಳಲ್ಲಿ ಊದುವಿಕೆ ಕಾಣಿಸಿಕೊಳ್ಳುತ್ತದೆ.

ಫೈಲೇರಿಯಾ ಮುಕ್ತ ಪ್ರಕ್ರಿಯೆ ಹೇಗೆ?
ಫೈಲೇರಿಯಾ ಸಂಪೂರ್ಣವಾಗಿ ಮುಕ್ತಗೊಳಿಸಲು 2004ರಲ್ಲಿ ಕೇಂದ್ರ ಸರಕಾರ ಮಾಸ್‌ ಡ್ರಗ್‌ ಅಡ್ಮಿನಿಸ್ಟ್ರೇಶನ್‌ ಹಮ್ಮಿಕೊಂಡಿತು. ಆಗ ಜಿಲ್ಲೆಯ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆಲೆºಂಡಜೋಲ್‌ ಮತ್ತು ಡಿಇಸಿ ಗುಳಿಗೆ ನೀಡಲಾಯಿತು. ಸರ್ವೇ ನಡೆಸಿ ಪ್ರಸರಣ ಮೌಲ್ಯಮಾಪನ ನಡೆಸಲಾಯಿತು. ಶಾಲಾ ಮಕ್ಕಳ ರಕ್ತದ ನಮೂನೆಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇದರ ಜತೆಗೆ ನಿರ್ದಿಷ್ಟ ವೈಜ್ಞಾನಿಕ ಸಾಧನದ ಮೂಲಕ ಕ್ಯೂಲೆಕ್ಸ್‌ ಸೊಳ್ಳೆಗಳನ್ನು ಪರೀಕ್ಷಿಸಿ ಅವುಗಳ ಒಳಗೆ ಜಂತು ಹುಳಗಳು ಇದ್ದಾವೆಯೇ ಎನ್ನುವುದನ್ನು ಪತ್ತೆಹಚ್ಚಲಾಗಿತ್ತು.

ಸದ್ಯಕ್ಕೆ ರೋಗ ಲಕ್ಷಣವಿಲ್ಲ
ಅಧಿಕೃತವಾಗಿ ಫೈಲೇರಿಯಾ ಮುಕ್ತ ಜಿಲ್ಲೆ ಎಂಬುದನ್ನು ಪ್ರಕಟಿಸಲು ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಸಿಗಬೇಕು. ಈಗಾಗಲೇ ಈ ಸಂಬಂಧ ಎಲ್ಲ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದೆ. ಮೂರು ವರ್ಷ ನಡೆಸಿದ ಸಮೀಕ್ಷೆಯಲ್ಲಿಯೂ ಜಿಲ್ಲೆ ತೇರ್ಗಡೆ ಹೊಂದಿದ್ದು, ಜಿಲ್ಲೆಯ ಜನರಲ್ಲಿ 2014ರ ಅನಂತರ ರೋಗ ಕಾಣಿಸಿಕೊಂಡಿಲ್ಲ.
-ಡಾ| ಪ್ರಶಾಂತ್‌ ಭಟ್‌,
ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ

Advertisement

-ಪುನೀತ್‌ ಸಸಿಹಿತ್ಲು

Advertisement

Udayavani is now on Telegram. Click here to join our channel and stay updated with the latest news.

Next