Advertisement

ಉಡುಪಿ ಕ್ಷೇತ್ರ: 2 ಸಾವಿರ ಎಕ್ರೆಯಲ್ಲಿ ಸಾವಯವ ಕೃಷಿ

10:59 PM Apr 29, 2021 | Team Udayavani |

ಉಡುಪಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಡಿಲು ಭೂಮಿ ಕೃಷಿ  ಆಂದೋಲನದ ಹಿನ್ನೆಲೆಯಲ್ಲಿ ಸ್ಥಾಪಿಸಿದ ಕೇದಾರೋತ್ಥಾನ ಟ್ರಸ್ಟ್‌ ವತಿಯಿಂದ ಸುಮಾರು 2,000 ಎಕ್ರೆ ಹಡಿಲು ಭೂಮಿಯಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್‌ ತಿಳಿಸಿದ್ದಾರೆ.

Advertisement

ಅಮೃತ್‌ ಗಾರ್ಡನ್‌ನಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯವಿರುವ ಬೀಜಗಳನ್ನು ಈಗಾಗಲೇ ಖರೀದಿಸಲಾಗಿದೆ. 500 ಎಕ್ರೆಗೆ ಬೇಕಾದ ನೇಜಿಯನ್ನು ಕೇಂದ್ರದಿಂದ ಸಿದ್ಧಪಡಿಸಿ ಇಡಲಾಗಿದೆ. ಕೃಷಿಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವ ಉದ್ದೇಶದಿಂದ ಕ್ಷೇತ್ರದಲ್ಲಿ 6 ಯಂತ್ರ ಸಹಾಯಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು. ಕ್ಷೇತ್ರದಲ್ಲಿ ಹೆಚ್ಚಿನ ಕೃಷಿ ಭೂಮಿಗಳಲ್ಲಿ ಮಳೆಗಾಲದಲ್ಲಿ ನೀರು ತುಂಬುವುದರಿಂದ ಹಡಿಲು ಬಿಡಲಾಗಿದೆ. ಈ ನಿಟ್ಟಿನಲ್ಲಿ ಮೊದಲು ನೀರು ಹರಿದು ಬರುವ ತೋಡುಗಳ ದುರಸ್ತಿ ಮಾಡಬೇಕಾಗಿದೆ. ಈಗಾಗಲೇ 15 ಹಿಟಾಚಿಯಲ್ಲಿ ಹೊಳೆತ್ತುವ ಕೆಲಸ ನಡೆಯುತ್ತಿದೆ. ಒಂದು ಎಕ್ರೆ ಕೃಷಿ ಮಾಡಲು 20,000ರೂ. ವೆಚ್ಚವಾಗುತ್ತದೆ. ಸುಮಾರು 2,000 ಎಕ್ರೆಯಲ್ಲಿ ವ್ಯವಸಾಯ ನಡೆಸಲು ಸುಮಾರು 4-5 ಕೋಟಿ ರೂ. ಬೇಕಾಗಬಹುದು. ಆದುದರಿಂದ ಈ ಯೋಜನೆಗೆ ದಾನಿಗಳಿಂದ ದೇಣಿಗೆ ಪಡೆಯಲು ನಿರ್ಧರಿಸಲಾಗಿದೆ ಎಂದರು.

ಯಾವುದೇ ಒಪ್ಪಂದವಿಲ್ಲ :

ಹಡಿಲು ಭೂಮಿಯಲ್ಲಿ ಕೃಷಿ ಮಾಡುವುದಕ್ಕೆ ಸಂಬಂಧಿಸಿ ಟ್ರಸ್ಟ್‌ ಮತ್ತು ಭೂಮಿಯ ಮಾಲಕರ ಮಧ್ಯೆ ಯಾವುದೇ ಒಪ್ಪಂದ ಇರುವುದಿಲ್ಲ. ಎಲ್ಲವೂ ವಿಶ್ವಾಸದಿಂದ ಕೆಲಸ ಮಾಡಲಾಗುವುದು. ಇದರಲ್ಲಿ ಹಣ ಹೂಡಿಕೆ ಮಾಡಿದರೆ ಇಳುವರಿ ಮಾರಾಟ ಮಾಡಿ ಬಡ್ಡಿ ರಹಿತವಾಗಿ ಹಣ ವಾಪಸು ನೀಡಲಾಗುವುದು. ಈ ಕುರಿತ ಎಲ್ಲ ಲೆಕ್ಕಾಚಾರಗಳು ಕೂಡ ಪಾರದರ್ಶಕವಾಗಿರುತ್ತದೆ ಎಂದು ಹೇಳಿದರು.

ರೈತರಿಗೆ ಸಹಕಾರ :

Advertisement

ಸಾವಯವ ಕೃಷಿಯಿಂದ ಬರುವ ಇಳುವರಿಯನ್ನು ಟ್ರಸ್ಟ್‌ ಪಡೆದುಕೊಳ್ಳಲಿದೆ. ಈ ಬಾರಿ ಯಾವುದೇ ಲಾಭದ ನಿರೀಕ್ಷೆ ಯನ್ನು ಹೊಂದಿಲ್ಲ. ಹಡಿಲು ಭೂಮಿಯಲ್ಲಿ ಮಾಲಕರೇ ಕೃಷಿ ಮಾಡುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ. ಅವರು ಮಾಡದಿದ್ದರೆ ನಾವು ಮಾಡುತ್ತೇವೆ. ಅದೇ ರೀತಿ ಭೂಮಿಯ ಮಾಲಕರು ತಾವೇ ಕೃಷಿ ಮಾಡಲು ಬಯಸಿದಲ್ಲಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.  ಟ್ರಸ್ಟ್‌ ಸದಸ್ಯರಾದ ಮುರಳಿ ಕಡೆಕಾರ್‌, ರಾಘವೇಂದ್ರ ಕಿಣಿ, ಮಹೇಶ್‌ ಠಾಕೂರ್‌, ಜಿ.ಪಂ. ಮಾಜಿ ಅಧ್ಯಕ್ಷ ದಿನಕರ್‌ ಬಾಬು, ಜಿ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಪ್ರತಾಪ್‌ ಹೆಗ್ಡೆ ಮಾರಾಳಿ, ಜೀವನ ಯಂತ್ರ ಅಗ್ರಿ ಸೊಲ್ಯೂಷನ್ಸ್‌ನ ಪ್ರ. ವ್ಯವಸ್ಥಾಪಕ ಶ್ರೀಕಾಂತ್‌ ಭಟ್‌ ಉಪಸ್ಥಿತರಿದ್ದರು.

4ನೇ ವರ್ಷಕ್ಕೆ ವಾಪಾಸು :

ವರ್ಷದಿಂದ ವರ್ಷಕ್ಕೆ ಹಡಿಲು ಭೂಮಿಯ ಕೃಷಿಯನ್ನು ವಿಸ್ತರಿಸಲಾಗುತ್ತದೆ. ಆ ಮೂಲಕ ಎಲ್ಲ ಹಡಿಲು ಬಿದ್ದ ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸುವುದೇ ಗುರಿಯಾಗಿದೆ. ಹಡಿಲು ಭೂಮಿಯಲ್ಲಿ ಮಾಲಕರಿಗೆ ಕೃಷಿ ಮಾಡಲು ಸಾಧ್ಯವಾಗದಿದ್ದರೆ ಸತತವಾಗಿ ಮೂರು ವರ್ಷ ಗಳ ಟ್ರಸ್ಟ್‌ ವತಿಯಿಂದ ಕೃಷಿ ಮಾಡಲಾಗುತ್ತದೆ. ನಾಲ್ಕು ವರ್ಷದ ಬಳಿಕ ಆ ಭೂಮಿಯ ಮಾಲಕರೇ ಕೃಷಿಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಭಟ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next