Advertisement
ಕೆಲವೆಡೆ ಅಂಗಡಿ – ಮುಂಗಟ್ಟುಗಳು ಫುಟ್‌ಪಾತ್‌ಗಳನ್ನು ಅತಿಕ್ರಮಣ ಮಾಡಿಕೊಂಡರೆ ಇನ್ನು ಕೆಲವೆಡೆ ಫುಟ್‌ಪಾತ್‌ಗಳಲ್ಲಿಯೇ ವ್ಯಾಪಾರ ನಡೆಸಲಾಗುತ್ತಿದೆ. ಇನ್ನು ಹಲವೆಡೆ ಫುಟ್‌ಪಾತ್‌ಗಳು ಏರುಪೇರಾಗಿದ್ದು, ಹೊಂಡಗಳು ಕಾಣಿಸಿ ಕೊಳ್ಳುತ್ತಿವೆ. ಪರಿಣಾಮ ಪಾದಚಾರಿಗಳು ಹೊಂಡಗಳಿಗೆ ಬೀಳುವ ಅಪಾಯವೂ ಇದೆ. ನಗರದ ಕಿನ್ನಿಮೂಲ್ಕಿಯಿಂದ ಸರ್ವಿಸ್ ಬಸ್ ತಂಗುದಾಣದವರೆಗಿನ ಫುಟ್‌ಪಾತ್‌ಗಳಲ್ಲಿ ಈ ದೃಶ್ಯಾವಳಿ ಕಾಣಬಹುದು.
ಹಳೆ ಡಯಾನ ವೃತ್ತದ ಬಳಿ ಪಾದಚಾರಿ ರಸ್ತೆಯ ಮೇಲೆ ಬೃಹತ್ ಗಾತ್ರದ ಕಬ್ಬಿಣದ ಕೊಳವೆ ಹಾಗೂ ಇನ್ನಿತರ ಪರಿಕರಗಳನ್ನು ದಾಸ್ತಾನು ಇರಿಸಲಾಗಿದ್ದು, ಪಾದಚಾರಿಗಳು ಸಹಿತ ವಾಹನ ಸವಾರರಿಗೆ ದಿನನಿತ್ಯ ಅಡಚಣೆ ಉಂಟಾಗುತ್ತಿದೆ. ಇವುಗಳು ಸಿಗ್ನಲ್ ಕಂಬಗಳ ನಿರ್ಮಾಣ ಕಾಮಗಾರಿಗೆ ತಂದಿಟ್ಟಿರುವ ಪರಿಕರಗಳು ಎಂದು ತಿಳಿದುಬಂದಿದೆ. ಎರಡು ವರ್ಷಗಳಿಂದಲೂ ಇದನ್ನು ಇಲ್ಲಿ ದಾಸ್ತಾನು ಇರಿಸಲಾಗಿದ್ದು, ವಾಹನ ಅಪಘಾತಗಳಿಗೂ ಕಾರಣವಾಗುತ್ತಿವೆ. ಪಾದಚಾರಿ ರಸ್ತೆಯನ್ನು ಕೊಳವೆಗಳು ಕಬಳಿಸಿರುವುದರಿಂದ ಪಾದಚಾರಿಗಳು ನಡು ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆದಷ್ಟು ಬೇಗ ಇಲ್ಲಿನ ಕಬ್ಬಿಣದ ಪರಿಕರಗಳನ್ನು ನಗರಾಡಳಿತ, ಜಿಲ್ಲಾಡಳಿತವು ವಾರಸುದಾರರ ಮೂಲಕ ವಿಲೇವಾರಿ ಮಾಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ಹಬ್ಬ ಹರಿದಿನಗಳ ಸಂದರ್ಭದಲ್ಲಿ ನಗರಸಭೆಯ ಮುಂಭಾಗದ ಫುಟ್‌ಪಾತ್‌ಗಳಲ್ಲಿಯೇ ಹೂ ಮಾರಾಟ ಮಾಡುವ ಪರಿಣಾಮ ಸಂಚಾರ ದಟ್ಟನೆ ಕಂಡುಬರುತ್ತಿದೆ. ಅಲ್ಲದೆ ವಾಹನಗಳನ್ನು ತಿರುವು ಪಡೆದುಕೊಳ್ಳುವವರೂ ಹರಸಾಹಸಪಡುವ ದೃಶ್ಯಾವಳಿಗಳೂ ಕಾಣಸಿಗುತ್ತವೆ. ಪ್ರಯಾಣಿಕರು ರಸ್ತೆಯ ನಡುವೆಯೇ ಬಸ್‌ಗಳಿಗೆ ಹತ್ತಿ ಇಳಿಯುವ ಘಟನೆಗಳೂ ನಡೆಯುತ್ತಿವೆ. ಕೆಲವೆಡೆ ನೋ ಪಾರ್ಕಿಂಗ್ ಸಹಿತ ವಿವಿಧ ಸಂಚಾರ ಸಂಜ್ಞೆಗಳನ್ನು ಅಳವಡಿಸಿದ್ದರೂ ಸವಾರರು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದರಿಂದ ಪಾದಚಾರಿಗಳು ಸಹಿತ ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡುವ ಘಟನೆಗಳೂ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಹೂ ಮಾರಾಟಕ್ಕೆ ನಗರಾಡಳಿತದಿಂದ ಪ್ರತ್ಯೇಕ ಜಾಗ ಸೂಚಿಸಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹವೂ ಇದೆ.
Advertisement
ಸೂಕ್ತ ಕ್ರಮನಗರದ ವಿವಿಧ ಭಾಗಗಳಲ್ಲಿ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡುತ್ತಿರುವುದು ಕಂಡುಬಂದಲ್ಲಿ ಅವರಿಗೆ ದಂಡ ವಿಧಿಸುವ ಜತೆಗೆ ಕೂಡಲೇ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು. ಸಿಗ್ನಲ್ ಕಂಬಗಳ ತೆರವಿಗೂ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು.
-ಡಾ| ಉದಯ ಶೆಟ್ಟಿ ,ಪೌರಾಯುಕ್ತರು (ಪ್ರಭಾರ) ನಗರಸಭೆ