3ರ ಬದಲು 6 ವಯರ್
ಮಣಿಪಾಲ-ಕುಂಜಿಬೆಟ್ಟು 33 ಕೆವಿ ಲೈನ್‌ಗೆ ಹೈಟೆಕ್ ಸ್ಪರ್ಶ ನೀಡುತ್ತಿರುವ ಮೆಸ್ಕಾಂ, ನೂತನ ಸ್ಪನ್ ಪೋಲ್‌ಗಳ ಅಧಿಕ ಸಾಮರ್ಥ್ಯವನ್ನು ಬಳಸಿಕೊಂಡು 3ರ ಬದಲು 6 ವಯರ್‌ಗಳನ್ನು ಹಾಕುತ್ತಿದೆ. ಕಂಡಕ್ಟರ್ ಸಾಮರ್ಥ್ಯ ಅಧಿಕಗೊಳಿಸಿ, ಕಯೋಟ್ ವಯರ್‌ಗಳನ್ನು ಅಳವಡಿಸಲಾಗಿದ್ದು ಹಿಂದಿದ್ದ ರ್ಯಾಬಿಟ್ ವಯರ್‌ಗಳು° ಕೈಬಿಡಲಾಗಿದೆ. ಇದರಿಂದ ಸುರಕ್ಷತೆಯ ಜತೆಗೆ ವಿದ್ಯುತ್ ನಷ್ಟವೂ ತಪ್ಪಲಿದೆ. ಈ ವಯರ್‌ಗಳು ಬಲಿಷ್ಠವಾಗಿದ್ದು ತಂತಿ ಕಡಿದು ಪ್ರಾಣಾಪಾಯ ಆಗುವುದು ತಪ್ಪಲಿದೆ.
Advertisement
ವಾಹನ ಗುದ್ದಿದರೆ ಹಾನಿ ಕಡಿಮೆ ಸ್ಪನ್ ಪೋಲ್ ಅನ್ನು ಭೂಮಿಯ ಕೆಳಗೆ 5 ಅಡಿ ಆಳದಲ್ಲಿ ಹೂಳಲಾಗುತ್ತದೆ. ಇದರಿಂದ ಸಣ್ಣ ವಾಹನಗಳು ಗುದ್ದಿದಾಗ ಅಥವಾ ಗೆಲ್ಲುಗಳು ಬಿದ್ದಾಗ ಪಕ್ಕನೆ ಹಾನಿಯಾಗುವುದಿಲ್ಲ. ಅಧಿಕ ಸಾಮರ್ಥ್ಯ ಇರುವುದರಿಂದ ಅವುಗಳಿಗೆ ಪ್ರತ್ಯೇಕ ಸ್ಟೇ ನೀಡುವ ಅಗತ್ಯವಿಲ್ಲ.
ಹಿಂದಿದ್ದ 9 ಮೀಟರ್ ಕಬ್ಬಿಣ ಮತ್ತು ಕಾಂಕ್ರೀಟ್ ಕಂಬಗಳ ಬದಲಿಗೆ 11 ಮೀಟರ್ ಎತ್ತರದ ಹಲವು ವೈಶಿಷ್ಟéಗಳಿರುವ ಕೊಳವೆಯಾಕಾರದ ಕಾಂಕ್ರೀಟ್ ಕಂಬಗಳೇ ಈ ಸ್ಪನ್ ಪೋಲ್‌ಗಳು. ಸುಮಾರು 20ರಿಂದ 22 ಸಾವಿರ ರೂ. ಪ್ರತಿ ಕಂಬಕ್ಕೆ ವೆಚ್ಚವಾಗಲಿದ್ದು, ಇವು ಹೆಚ್ಚಿನ ಲೋಡ್ ಹೊರುವ ಸಾಮರ್ಥ್ಯ ಹೊಂದಿವೆ. ಇದರ ತುದಿಯ ವ್ಯಾಸ ಕಿರಿದಾಗಿದ್ದು, ಕೆಳಭಾಗ ಟೊಳ್ಳಾಗಿರುತ್ತದೆ. ಮೇಲರ್ಧ ಭಾಗ ಕಾಂಕ್ರೀಟ್ ಪೂರ್ಣ ತುಂಬಿರುತ್ತವೆ. ಸೆಂಟ್ರಿಫ್ಯೂಗಲ್ ಕಾಸ್ಟಿಂಗ್ ಮತ್ತು ಸ್ಪಿನ್ನಿಂಗ್ ತಂತ್ರಜ್ಞಾನ ಬಳಸಿ ಈ ಪೋಲ್‌ಗಳನ್ನು ತಯಾರಿಸಲಾಗುತ್ತದೆ.
Related Articles
ನೂತನ ಸ್ಪನ್ ಪೋಲ್‌ಗಳನ್ನು ಮತ್ತು ಕಯೋಟ್ ವಯರ್‌ಗಳನ್ನು ಅಳವಡಿಸುವ ಕಾಮಗಾರಿ ಶೇ. 90 ಪೂರ್ಣಗೊಂಡಿದ್ದು ಇಂದ್ರಾಳಿ ರೈಲ್ವೇ ಸೇತುವೆ ಬಳಿಕದ ಸ್ವಲ್ಪ ಕಾಮಗಾರಿ ಬಾಕಿ ಇದೆ. 50-60 ಸ್ಪನ್ ಪೋಲ್‌ಗಳನ್ನು ಅಳವಡಿಸಲಾಗಿದೆ. ಕ್ರಾಸಿಂಗ್ ಇರುವಲ್ಲಿ ಎತ್ತರದಲ್ಲಿ ತಂತಿಗಳು ಹಾದುಹೋಗಲು ಸ್ಪನ್ ಪೋಲ್‌ಗಳು ಸಹಕಾರಿಯಾಗಲಿವೆ. ಮುಂದಿನ ವಿದ್ಯುತ್ ನಿಲುಗಡೆಯ ದಿನಗಳಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದು ಮಣಿಪಾಲ ಎಇಇ ಮಾರ್ತಾಂಡಪ್ಪ ತಿಳಿಸಿದ್ದಾರೆ.
Advertisement
– ಅಶ್ವಿನ್ ಲಾರೆನ್ಸ್