ಉಡುಪಿ: ಸೇವಾ ಕ್ಷೇತ್ರದಲ್ಲಿ ವೃದ್ಧಿ. ದೊಡ್ಡ ಕೃಷಿಕರಲ್ಲಿ ಹೆಚ್ಚಿನ ಭೂಹಿಡುವಳಿ, ಠೇವಣಿ ಹೆಚ್ಚು ಸಾಲ ಹಂಚಿಕೆ ಕಡಿಮೆ. ಕುಸಿಯುತ್ತಿರುವ ಪದವಿ ಶಿಕ್ಷಣ ಬಯಸುವ ವಿದ್ಯಾರ್ಥಿಗಳು. ವೈದ್ಯರ ಸಂಖ್ಯೆ ಇಳಿಮುಖ ಹಾಗೂ ಕುಸಿಯುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಭವಿಷ್ಯದಲ್ಲಿ ಉಡುಪಿ ಮನುಷ್ಯತ್ವ ನಾಶವಾಗುವ ಲಕ್ಷಣವನ್ನು ತೋರಿಸುತ್ತಿದೆ ಎಂದು ಹಂಪಿ ವಿ.ವಿ.ಯ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ| ಎಂ. ಚಂದ್ರ ಪೂಜಾರಿ ಹೇಳಿದರು.
ಅವರು ಎ. 25ರಂದು ಡೇವಿಡ್ ಎ. ಕರ್ಕಡ ಸ್ಮಾರಕ ಟ್ರಸ್ಟ್‌ನ ಆಶ್ರಯದಲ್ಲಿ ಬನ್ನಂಜೆ ನಾರಾಯಣಗುರು ಸಭಾ ಭವನದ ಶಿವಗಿರಿಯಲ್ಲಿ “ಉಡುಪಿ ಜಿಲ್ಲೆಯ ಅಭಿವೃದ್ಧಿ-ಪರ್ಯಾಯ ಕಣ್ಣೋಟ’ ಕುರಿತಾಗಿ ಜರಗಿದ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದರು.
ಜಿಲ್ಲೆಯ ಅಭಿವೃದ್ಧಿಗೆ ಭೌತಿಕ, ಸಾಮಾಜಿಕ ಮತ್ತು ಸಾಂಸಾರಿಕ ಪರಿಸರ ಅತಿ ಮುಖ್ಯವಾದ ಅಂಶಗಳಾಗಿವೆ. ಉಡುಪಿ ಜಿಲ್ಲೆ ಇವೆಲ್ಲವಕ್ಕೂ ಭಿನ್ನವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.ಗ್ರಾಮೀಣ ಪರಿಸರದಲ್ಲಿ ಶೇ. 71 ರಷ್ಟು ಜನರು ವಾಸವಾಗಿದ್ದಾರೆ. ಶೇ. 17 ಜನರು ಕೃಷಿಯಲ್ಲಿ , ಶೇ. 30 ರಷ್ಟು ಕೈಗಾರಿಕೆಯಲ್ಲಿ ಹಾಗೂ ಶೇ. 53 ರಷ್ಟು ಜನರು ಸೇವಾ ಕ್ಷೇತ್ರದಲ್ಲಿದ್ದಾರೆ. ಭೂರಹಿತರ ಸಂಖ್ಯೆ ಕೇವಲ ಶೇ. 10 ರಷ್ಟಿದೆ. ಆದರೆ ಶೇ. 2 ರಷ್ಟಿರುವ ದೊಡ್ಡ ಕೃಷಿಕರಲ್ಲಿ ಶೇ. 21ರಷ್ಟು ಭೂ ಹಿಡುವಳಿ ಇದೆ. ಇದು ಅಸಮಾನತೆಗೆ ಭಾರಿ ತೊಂದರೆಯನ್ನುಂಟು ಮಾಡುತ್ತದೆ ಎಂದು ಹೇಳಿದರು.ಜಿಲ್ಲೆಯಲ್ಲಿ 290 ಬ್ಯಾಂಕ್ ಶಾಖೆಗಳಿವೆ. ಇಲ್ಲಿ ಠೇವಣಿಗೂ ಮತ್ತು ಸಾಲಕ್ಕೂ ಶೇ. 51ರಷ್ಟು ಅಂತರವಿದೆ. ಆರ್‌ಬಿಐ ನಿರ್ದೇಶನವನ್ನೂ ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 100 ಸರಕಾರಿ ಆಸ್ಪತ್ರೆಯಲ್ಲಿ 570 ಬೆಡ್‌ಗಳಿವೆ. 54 ಖಾಸಗಿ ಆಸ್ಪತ್ರೆಯಲ್ಲಿ 3490 ಬೆಡ್‌ಗಳಿವೆ. 227 ಸರಕಾರಿ ವೈದ್ಯರಿದ್ದರೆ, 863 ಖಾಸಗಿ ವೈದ್ಯರಿದ್ದಾರೆ. ಜಿಲ್ಲೆಯ ಸರಾಸರಿ ಜನಸಂಖ್ಯೆಯನ್ನು ಹೋಲಿಸಿದರೆ ಪ್ರತಿ 17,000 ಜನರಿಗೆ ಓರ್ವ ವೈದ್ಯರ ಲಭ್ಯವಿದೆ ಎಂದು ಅವರು ಹೇಳಿದರು.
ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ ಉಡುಪಿ ಜಿಲ್ಲೆ ಆರೋಗ್ಯ ಪೂರ್ಣ ಅಭಿವೃದ್ಧಿಯತ್ತ ಮುಖಮಾಡಬೇಕೆಂದೂ ಅವರು ಆಗ್ರಹಿಸಿದರು.ಸುರತ್ಕಲ್‌ನ ಎನ್‌ಐಟಿಕೆ ಡಾ| ರಾಜೇಂದ್ರ ಉಡುಪ, ಟ್ರಸ್ಟ್‌ನ ಅಧ್ಯಕ್ಷರಾದ ಎ.ಎಸ್. ಆಚಾರ್ಯ, ಕಾರ್ಯದರ್ಶಿ ಕೆ. ಶಂಕರ್, ಸಿಐಟಿಯುನ ಅಧ್ಯಕ್ಷ ವಿಶ್ವನಾಥ ರೈ ಉಪಸ್ಥಿತರಿದ್ದರು.
ಶಿಕ್ಷಣ: ಬಹುಬಣ್ಣದ ನೋಟ
ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 2ನೇ ಸ್ಥಾನವನ್ನು ಪಡೆಯುವ ಉಡುಪಿ ಜಿಲ್ಲೆಯ ವಸ್ತು ಚಿತ್ರಣ ನೋಡಿದರೆ ದಿಗಿಲು ಮೂಡಿಸುತ್ತದೆ. 964 ಪ್ರಾಥಮಿಕ ಶಾಲೆಗಳಲ್ಲಿ 1,26,808 ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಾರೆ. 286 ಪ್ರೌಢ ಶಾಲೆಗಳಲ್ಲಿ 57 ಸಾವಿರ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಾರೆ. ಜಿಲ್ಲೆಯ 96ಪ.ಪೂ. ಕಾಲೇಜಿನಲ್ಲಿ 33,250 ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದರೆ, 30 ಪದವಿ ಕಾಲೇಜುಗಳಿಂದ ಕೇವಲ 19,082 ವಿದ್ಯಾರ್ಥಿಗಳು ಪದವಿಯನ್ನು ಪಡೆಯುತ್ತಾರೆ. ಹಾಗಾದರೆ ಪ್ರಾಥಮಿಕ ಶಾಲೆಯಲ್ಲಿದ್ದ ಲಕ್ಷ ಇಲ್ಲಿ ಸಾವಿರ ಹೇಗಾಯಿತು? ಎಂದು ಅವರು ಪ್ರಶ್ನಿಸಿದರು.