Advertisement

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

01:21 AM Jul 27, 2024 | Team Udayavani |

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಮತ್ತು ಇಲ್ಲಿನ ಬಿಜೆಪಿ, ಜೆಡಿಎಸ್‌ ಸಂಸದರೂ ಅನುದಾನ ತರುವ ಯಾವುದೇ ಪ್ರಯತ್ನ ಮಾಡಿಲ್ಲ. ಹೀಗಾಗಿ ಕೇಂದ್ರ ಸರಕಾರ ಕರ್ನಾಟಕಕ್ಕೆ ಚೊಂಬು ನೀಡಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಬ್ರಹ್ಮಗಿರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ, ಪೋಸ್ಟರ್‌ಗಳನ್ನು ಪ್ರದರ್ಶಿಸಿ ಆಕ್ರೋಶ ಹೊರ ಹಾಕಿದರು. ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಕೇಂದ್ರ ಸರಕಾರ ಬಜೆಟ್‌ ಮಂಡನೆ ಮೂಲಕ ಒಕ್ಕೂಟ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡಿದೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.33ರಿಂದ ಶೇ.83ಕ್ಕೆ ಏರಿಕೆಯಾಗಿದೆ. ಪದವೀಧರರಿಗೆ ಉದ್ಯೋಗವೇ ಸಿಗುತ್ತಿಲ್ಲ. ಅಧಿಕಾರ ಉಳಿಸಿಕೊಳ್ಳಲು ಬಜೆಟ್‌ ಮಂಡನೆ ಮಾಡಿದ್ದಾರೆ. ಮಿತ್ರಪಕ್ಷಗಳನ್ನು ಓಲೈಸಲು ಆ ರಾಜ್ಯಗಳಿಗೆ ಮಾತ್ರ ವಿಶೇಷ ಅನುದಾನ ನೀಡಿದ್ದಾರೆ ಎಂದು ದೂರಿದರು.

ಜಿಲ್ಲಾ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಮಾತನಾಡಿ, ಕೇಂದ್ರ ಸರಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದ್ದರೂ ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್‌ ಸಂಸದರು ಮಾತನಾಡುತ್ತಿಲ್ಲ. ವಿತ್ತ ಸಚಿವರು ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿದ್ದರೂ ಕರ್ನಾಟಕಕ್ಕೆ ಅನುದಾನ ನೀಡದೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next