Advertisement

Digital Agriculture Mission ಸೇರಿದಂತೆ ಏಳು ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಒಪ್ಪಿಗೆ

01:03 AM Sep 03, 2024 | Team Udayavani |

ಹೊಸದಿಲ್ಲಿ: ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಅಭ್ಯುದಯಕ್ಕೆ ಒಟ್ಟು 14 ಸಾವಿರ ಕೋಟಿ ರೂ. ಮೌಲ್ಯದ 7 ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಸಭೆಯು ಸೋಮವಾರ ಅನುಮೋದನೆ ನೀಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ಕೇಂದ್ರ ವಾರ್ತಾ ಸಚಿವ ಅಶ್ವಿ‌ನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ.

Advertisement

2,817 ಕೋಟಿ ರೂ. ವೆಚ್ಚದ ಡಿಜಿಟಲ್‌ ಕೃಷಿ ಮಿಷನ್‌ ಮತ್ತು 3,979 ರೂ. ವೆಚ್ಚದ ಬೆಳೆ ವಿಜ್ಞಾನ ಯೋಜನೆ ಸಹಿತ ಏಳು ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಈ ಕಾರ್ಯಕ್ರಮಗಳಿಂದ ರೈತರ ಬದುಕು ಹಸನಾಗುವುದಲ್ಲದೆ ಒಟ್ಟು 13,966 ಕೋಟಿ ರೂ. ವೆಚ್ಚದಲ್ಲಿ ಅವರ ಆದಾಯವನ್ನು ಹೆಚ್ಚಿ ಸುವ ಪ್ರಯತ್ನಗಳು ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ. ಈ ಏಳು ಕಾರ್ಯ ಕ್ರಮಗಳು ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ ಎಂದಿದ್ದಾರೆ.

ರೈತರ ಅಭ್ಯುದಯದ
ಸಪ್ತ ಯೋಜನೆ
1. ಡಿಜಿಟಲ್‌ ಕೃಷಿ ಮಿಷನ್‌: ಒಟ್ಟು 2,817 ಕೋಟಿ ರೂ. ಹೂಡಿಕೆಯೊಂದಿಗೆ ಡಿಜಿಟಲ್‌ ಕೃಷಿ ಮಿಷನ್‌ ಆರಂಭ. ಕೃಷಿಗಾಗಿ ಸಾರ್ವಜನಿಕ ಮೂಲ ಸೌಕರ್ಯದ ಭಾಗ ವಾಗಿ ಈ ಕಾರ್ಯಕ್ರಮ ಅನುಷ್ಠಾನ.

2. ಬೆಳೆ ವಿಜ್ಞಾನ: ಸುಮಾರು 3,979 ಕೋಟಿ ರೂ. ವೆಚ್ಚದ ಬೆಳೆ ವಿಜ್ಞಾನ ಯೋಜನೆ ಇದು. ಆಹಾರ, ಪೌಷ್ಟಿಕಾಂಶ ಭದ್ರತೆಯ ಕಾರ್ಯಕ್ರಮಗಳು ಇರಲಿವೆ.

Advertisement

ಸಂಶೋಧನೆ ಮತ್ತು ಶಿಕ್ಷಣ, ಸಸ್ಯ ವಂಶವಾಹಿನಿ ಸಂಪನ್ಮೂಲ ನಿರ್ವಹಣೆ, ಆಹಾರ ಮತ್ತು ಮೇವು ಬೆಳೆ ಸುಧಾರಣೆಗೆ ವಂಶವಾಹಿ, ಧಾನ್ಯಗಳು ಮತ್ತು ಎಣ್ಣೆ ಬೀಜ ಬೆಳೆಗಳ ಸುಧಾರಣೆ, ವಾಣಿಜ್ಯ ಬೆಳೆಗಳ ಸುಧಾರಣೆ, ಕೀಟಗಳು, ಸೂಕ್ಷ್ಮಜೀವಿಗಳು, ಪರಾಗಸ್ಪರ್ಶಕಗಳ ಕುರಿತಾದ ಸಂಶೋಧನೆ… ಹೀಗೆ ಒಟ್ಟು ?? ಸ್ತಂಭಗಳನ್ನು ಈ ಕಾರ್ಯಕ್ರಮ ಹೊಂದಿದೆ.

ಕೃಷಿ ಶಿಕ್ಷಣ: ಕೃಷಿ ಶಿಕ್ಷಣ, ನಿರ್ವಹಣೆ ಮತ್ತು ಸಮಾಜ ವಿಜ್ಞಾನ ಬಲವರ್ಧನೆಗೆ 2,291 ಕೋಟ ರೂ. ಕಾರ್ಯಕ್ರಮ ಅನುಷ್ಠಾನ. ಕೃಷಿ ಸಂಶೋಧನ ಭಾರತೀಯ ಮಂಡಳಿಯಡಿ ಈ ಯೋಜನೆ ಅನುಷ್ಠಾನ. 2020ರ ಹೊಸ ಶಿಕ್ಷಣ ನೀತಿಯಡಿ ಕೃಷಿ ಶಿಕ್ಷಣದ ಆಧುನೀಕರಣ ಇದರ ಗುರಿ.

ಪಶು ಆರೋಗ್ಯ: ಸುಮಾರು 1,702 ಕೋ. ರೂ. ವೆಚ್ಚದಲ್ಲಿ ಪಶುಗಳ ಸುಸ್ಥಿರ ಆರೋಗ್ಯ ಮತ್ತು ಉತ್ಪಾದನೆ ಕುರಿತಾದ ಯೋಜನೆ. ಜಾನುವಾರುಗಳು ಮತ್ತು ಹೈನುಗಾರಿಕೆ ಮೂಲಕ ರೈತರ ಆದಾಯ ಹೆಚ್ಚಿಸುವುದು ಉದ್ದೇಶ. ಪ್ರಾಣಿಗಳ ಆರೋಗ್ಯ ನಿರ್ವಹಣೆ ಮತ್ತು ಪಶು ಶಿಕ್ಷಣ, ಹೈನೋತ್ಪನ್ನ ಮತ್ತು ತಂತ್ರಜ್ಞಾನ ಮತ್ತಿತರ ವಿಷಯ ಮೇಲೆ ಹೆಚ್ಚು ಗಮನ ಕೇಂದ್ರೀಕರಣ.

ತೋಟಗಾರಿಕೆ ಬೆಳೆ: ತೋಟಗಾರಿಕೆ ಕೃಷಿಯ ಮೂಲಕ ರೈತ ಆದಾಯ ಹೆಚ್ಚಳಕ್ಕಾಗಿ 860 ಕೋಟಿ ರೂ. ಯೋಜನೆಗೆ ಅಂಗೀಕಾರ. ಈ ಕಾರ್ಯಕ್ರಮವು ಉಷ್ಣವಲಯ, ಅರೆ-ಉಷ್ಣವಲಯ, ತೋಟಗಾರಿಕೆ, ಗೆಣಸು, ಗಡ್ಡೆಗಳು, ಒಣಭೂಮಿ ಕೃಷಿ ಬೆಳೆಗಳು, ತರಕಾರಿಗಳು, ಹೂ ಬೆಳೆ, ಅಣಬೆ, ಮಸಾಲೆ, ಗಿಡಮೂಲಿಕೆ ಕೃಷಿಗಳನ್ನು ಕೇಂದ್ರೀಕರಿಸಲಿದೆ.

ಕೃಷಿ ವಿಜ್ಞಾನ ಕೇಂದ್ರ: ಈಗಾಗಲೇ ಅಸ್ತಿತ್ವದಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳ ಬಲವರ್ಧನೆಗಾಗಿ 1,202 ಕೋಟಿ ರೂ. ವೆಚ್ಚಕ್ಕೆ ಅಸ್ತು. ಈ ಕೇಂದ್ರಗಳು ತಂತ್ರಜ್ಞಾನ ಮೌಲ್ಯಮಾಪನ ನಡೆಸುತ್ತವೆ. ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನ ಮತ್ತು ಅವುಗಳನ್ನು ಕೃಷಿಯಲ್ಲಿ ಅನ್ವಯಿಸುವುದರ ನಡುವೆ ಸೇತುಬಂಧವಾಗಿ ಕೆಲಸ ಮಾಡುತ್ತವೆ. ದೇಶಾದ್ಯಂತ ಒಟ್ಟು 700 ಕೃಷಿ ವಿಜ್ಞಾನ ಕೇಂದ್ರಗಳಿವೆ.

ನೈಸರ್ಗಿಕ ಸಂಪನ್ಮೂಲ ನಿರ್ವಹಣೆ: ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ 1,115 ಕೋಟಿ ರೂ. ವೆಚ್ಚ ಮಾಡಲು ಅಂಗೀಕಾರ. ಈ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ.

309 ಕಿ.ಮೀ. ಹೊಸ ರೈಲು ಮಾರ್ಗ
ದೇಶದ ಎರಡು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮುಂಬಯಿ ಮತ್ತು ಇಂದೋರ್‌ ನಡುವಣ ಪ್ರಯಾಣ ಸಮಯ ಕಡಿಮೆ ಮಾಡುವ ನಿಟ್ಟಿನಲ್ಲಿ 309 ಕಿ.ಮೀ. ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ರೈಲು ಮಾರ್ಗವು ಮಹಾರಾಷ್ಟ್ರದ 2 ಮತ್ತು ಮಧ್ಯಪ್ರದೇಶದ 4 ಜಿಲ್ಲೆಗಳಲ್ಲಿ ಹಾದು ಹೋಗಲಿದೆ. ಈ ಯೋಜನೆಯ ಅಂದಾಜು ವೆಚ್ಚ 18,036 ಕೋಟಿ ರೂ. ಆಗಿದ್ದು, 2018-29ರ ವೇಳೆಗೆ ಪೂರ್ಣಗೊಳ್ಳಲಿದೆ.

ಏನಿದು ಡಿಜಿಟಲ್‌
ಕೃಷಿ ಮಿಷನ್‌?
ಡಿಜಿಟಲ್‌ ತಂತ್ರಜ್ಞಾನಗಳನ್ನು ಬಳಸಿ ಕೊಂಡು ಕೃಷಿ ವಲಯವನ್ನು ಆಧುನಿಕ ಗೊಳಿಸುವುದು ಇದರ ಉದ್ದೇಶ. ಡಿಜಿಟಲ್‌ ಮಾಧ್ಯಮದ ಮೂಲಕ ಬೆಳೆ ಸಮೀಕ್ಷೆ, ಆಧಾರ್‌ನಂತೆ ರೈತರ ಜಮೀನಿಗೆ ವಿಶೇಷ ಐಡಿಯನ್ನೂ ಈ ಯೋಜನೆಯಡಿ ನೀಡಲಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಗೆ ಇದು ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.