Advertisement

ತಂಡ ಕಾರ್ಯದಿಂದ ಸುಲಲಿತ ಚುನಾವಣೆ

06:45 AM May 18, 2018 | Team Udayavani |

ಉಡುಪಿ:  ಉಡುಪಿ ಜಿಲ್ಲಾಧಿಕಾರಿಯಾಗಿರುವ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಇದೇ ಮೊದಲ ಬಾರಿಗೆ ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಯಶಸ್ವಿಯಾಗಿ ಚುನಾವಣೆ ನಡೆಸಿಕೊಟ್ಟ ಹಿನ್ನೆಲೆಯಲ್ಲಿ ಅವರು ತಮ್ಮ ಅನುಭವಗಳನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ. 
 
6,342 ಸಿಬಂದಿಗಳನ್ನು  ಹೇಗೆ ತೊಡಗಿಸಿಕೊಂಡಿರಿ? 
       ಮುಖ್ಯವಾಗಿ ಸಿಬಂದಿಗಳು ಅನಾರೋಗ್ಯದ ನಿಮಿತ್ತ ಕರ್ತವ್ಯದಿಂದ ರಿಯಾಯಿತಿ ಕೋರುವಾಗ ಅವರಿಗೆ ರಿಯಾಯಿತಿ ಕೊಡುವುದು ಮತ್ತು ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೂ ಸಹಾಯಕ ಅಧಿಕಾರಿಗಳು, ಸಿಬಂದಿಗಳು ತಂಡ ಸ್ಫೂರ್ತಿಯಿಂದ ಕೆಲಸ ಮಾಡಿದ್ದರಿಂದ ತೊಂದರೆಯಾಗಲಿಲ್ಲ. 

Advertisement

ಈ ಅನುಭವ ಮುಂದೆ ನೆರವಾಗಬಹುದೆ?
        ಖಂಡಿತವಾಗಿ. ಈ ಸವಾಲನ್ನು ಎದುರಿಸಿದಾಗ ಸಾಕಷ್ಟು ಅನುಭವವಾಯಿತು. ಎಂತಹ ಸಮಸ್ಯೆಗಳು ಎದುರಾಗುತ್ತವೆ ಮತ್ತು ಇವುಗಳನ್ನು ಹೇಗೆ ನಿಭಾಯಿಸಬೇಕು ಎಂಬ ಅನುಭವ ಮುಂದೆ ನಮಗೆ ಸಾಕಷ್ಟು ಸಹಕಾರಿಯಾಗಲಿದೆ. 

ಚುನಾವಣೆ ಪ್ರಕ್ರಿಯೆಗೆ ಕೆಲಸ ಹೇಗಿತ್ತು? 
        ವಿಶೇಷವಾಗಿ ಮೇ 12 ಚುನಾವಣೆಯ ದಿನ ರಾತ್ರಿ ನಾವು ಯಾರೂ ನಿದ್ದೆ ಮಾಡಲಿಲ್ಲ. ಇದೆಲ್ಲವನ್ನೂ ಮುಗಿಸುವಾಗ ಬೆಳಗ್ಗೆ 7.30 ಆಗಿತ್ತು. ಮೇ 11ರಂದೂ ಇಷ್ಟವಿಲ್ಲದಿದ್ದರೂ ರಾತ್ರಿ ಕೆಲಸ ಮಾಡಬೇಕಾಯಿತು. ಉಳಿದ ದಿನಗಳಲ್ಲಿ ರಾತ್ರಿ 10.30ರವರೆಗೆ ಕಚೇರಿಯಲ್ಲಿ ಇರಬೇಕಾಗುತ್ತಿತ್ತು. ಆಯೋಗ ದವರು ಏನಾದರೂ ಮಾಹಿತಿ ಗಳನ್ನು ಕೇಳಿದರೆ ಅದನ್ನು ಕೊಟ್ಟೇ ಕಚೇರಿಯಿಂದ ತೆರಳಬೇಕಾಗುತ್ತಿತ್ತು.

ಮತ ಯಂತ್ರ ಕೈಕೊಟ್ಟು ಸಮಸ್ಯೆ ಉಂಟಾಯಿತೆ?
         ವಿವಿ ಪ್ಯಾಟ್‌ ಸೂಕ್ಷ್ಮ ಸಂವೇದನೆಯ ಯಂತ್ರ ಎನ್ನುವುದು ಗೊತ್ತಿತ್ತು. ಆದ್ದರಿಂದಲೇ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೂರೈಕೆ ಮಾಡಲಾಗಿತ್ತು. ಕೆಲವು ಕಡೆ ಆಚೀಚಿನ ಬೂತುಗಳಲ್ಲಿ ಕೈಕೊಟ್ಟಾಗ ತೊಂದರೆಯಾಯಿತು. ಬಹುತೇಕ ಕಡೆ ನಾವು ಯಂತ್ರಗಳನ್ನು ಪೂರೈಸಿದೆವು. 

ವೆಬ್‌ಕಾಸ್ಟಿಂಗ್‌ಗೆ ಸಮಸ್ಯೆ ಏನಾದರೂ.. 
        ವೆಬ್‌ಕಾಸ್ಟಿಂಗ್‌ ಕೆಲವು ಸೂಕ್ಷ್ಮ ಮತಗಟ್ಟೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದನ್ನು ನಿರ್ವಹಿಸಲು ಟೆಂಡರ್‌ ಆದದ್ದು ಬೆಂಗಳೂರಿನ ಒಂದು ಸಂಸ್ಥೆಯಿಂದ. ಇವರು ಒಂದು ದಿನದ ಹಿಂದೆ ಬಂದು ಸ್ಥಾಪಿಸಿ ಎಲ್ಲವೂ ಸರಿಯಾಗುತ್ತದೆ ಎಂದು ಹೋದರು. ಚುನಾವಣೆ ದಿನ ಬೆಳಗ್ಗೆ ಶೇ.20ರಷ್ಟೂ ಕೆಲಸ ಆಗಲಿಲ್ಲ. ಸಂಸ್ಥೆಯವರಿಗೆ ಎಚ್ಚರಿಕೆ ಕೊಟ್ಟ ಬಳಿಕ ಶೇ.50ರಷ್ಟು ಕೆಲಸ ಆಯಿತು. ಇದು ಮತದಾನ ಪ್ರಕ್ರಿಯೆಗೆ ದೊಡ್ಡ ಸಮಸ್ಯೆ ಅಲ್ಲ. 

Advertisement

ರಾಜಕೀಯ ಪಕ್ಷಗಳ ಸಹಕಾರ ಹೇಗಿತ್ತು?
        ಎಲ್ಲ ರಾಜಕೀಯ ಪಕ್ಷಗಳೂ ಉತ್ತಮವಾಗಿ ಸಹಕಾರ ನೀಡಿದವು. ಕಾನೂನು ಪಾಲನೆ ಮಾಡಬೇಕೆಂದಾಗ ಶೇ.80ರಷ್ಟು ಜನರು ಸಹಕಾರ ನೀಡಿದರು. ಮಿಕ್ಕುಳಿದ ಶೇ. 20ರಷ್ಟು ಜನರು ಕಾನೂನು ಉಲ್ಲಂಘನೆ ಮಾಡಿದಾಗ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿದ್ದಾರೆ. 

ನೀತಿ ಸಂಹಿತೆ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆಯೇ? 
        ಉಡುಪಿ ಜಿಲ್ಲೆಯಲ್ಲಿ 2013ರ ಚುನಾವಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆ ಆಗಲಿಲ್ಲ. ಆದರೆ ಇತರ ಕಡೆ ಶಿಕ್ಷೆಯಾದದ್ದಿದೆ. 

– ಮಟಪಾಡಿ ಕುಮಾರಸ್ವಾಮಿ 

Advertisement

Udayavani is now on Telegram. Click here to join our channel and stay updated with the latest news.

Next