ಪಡುಬಿದ್ರಿ: ಹೆಜಮಾಡಿಯ ಎಸೆಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ಎಸೆಸೆಲ್ಸಿ ಪರೀಕ್ಷೆಯು ಸಂಪೂರ್ಣ ಸುರಕ್ಷತೆಯ ವಾತಾವರಣದಲ್ಲಿ ನಡೆಯುತ್ತಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಅವರು, ಹೆಜಮಾಡಿ ಪರೀಕ್ಷಾ ಕೇಂದ್ರದಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕಿತ ವಿದ್ಯಾರ್ಥಿ ಪರೀಕ್ಷೆ ಬರೆದ ಕೋಣೆಯನ್ನು ಮುಚ್ಚಲಾಗಿದೆ. ಅಲ್ಲಿದ್ದ ವಿದ್ಯಾರ್ಥಿಗಳಿಗೆ ಬೇರೆ ಕೋಣೆಯ ವ್ಯವಸ್ಥೆ ಕಲ್ಪಿಸಲಾಗಿದೆ.
ಸೋಂಕಿತ ವಿದ್ಯಾರ್ಥಿಯೊಂದಿಗೆ ಸತತ 6ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಉಳಿದ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆದ ಕಾರಣ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದು. ಇಂದು ಪರೀಕ್ಷೆಗೆ ಕೇಂದ್ರದ ಎಲ್ಲ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಇದೇ ವೇಳೆ ಕಾರ್ಕಳ ಕೋವಿಡ್ ಆಸ್ಪತ್ರೆಯಲ್ಲಿ ಆರೋಗ್ಯದಿಂದಿರುವ ಸೋಂಕಿತ ವಿದ್ಯಾರ್ಥಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ವಿದ್ಯಾರ್ಥಿನಿಗೆ ಧೈರ್ಯ ತುಂಬಿದರು. ಆಕೆಗೆ ಮಗದೊಮ್ಮೆ ಪರೀಕ್ಷೆಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖಾ ಉಪನಿರ್ದೇಶಕ ಶೇಷಶಯನ ಕಾರಿಂಜೆ, ಸಬೆjಕ್ಟ್ ಇನ್ಸ್‌ಪೆಕ್ಟರ್ ಎಂ.ನಾಗರಾಜ್, ಹೆಜಮಾಡಿ ಗ್ರಾ. ಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಪಿಡಿಒ ಮಮತಾ ವೈ.ಶೆಟ್ಟಿ, ಗ್ರಾಮ ಕರಣಿಕ ಅರುಣ್ ಕುಮಾರ್, ಪಡುಬಿದ್ರಿ ಎಎಸ್‌ಐಗಳಾದ ದಿವಾಕರ್ ಮತ್ತು ಸುರೇಶ್ ಭಟ್ ಉಪಸ್ಥಿತರಿದ್ದರು.