Advertisement

ಉಡುಪಿ ಡಿಸಿ, ಎಸಿ ಮೇಲೆ ಹಲ್ಲೆ  ಪ್ರಕರಣಕ್ಕೆ 1 ವರ್ಷ

08:32 AM Apr 02, 2018 | Team Udayavani |

ಕುಂದಾಪುರ: ರಾಜ್ಯ ಮಾತ್ರವಲ್ಲದೆ ರಾಷ್ಟ್ರದ ಗಮನ ಸೆಳೆದ ಕಂಡ್ಲುರಿನ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಲು ತೆರಳಿದ್ದ ಇಬ್ಬರು ಐಎಎಸ್‌ ಅಧಿಕಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಇಂದಿಗೆ (ಎ. 2) ಒಂದು ವರ್ಷ. ಇನ್ನೂ ಆರೋಪ ಪಟ್ಟಿ ಸಲ್ಲಿಕೆಯಾಗಿ ಪರಿಶೀಲನೆಯಾಗದ ಕಾರಣ ಪ್ರಕರಣದ ವಿಚಾರಣೆ ಆರಂಭವೇ ಆಗಿಲ್ಲ.

Advertisement

ಕಳೆದ ವರ್ಷದ ಎ. 2ರ ಮಧ್ಯರಾತ್ರಿ ಖಚಿತ ಮಾಹಿತಿ ಮೇರೆಗೆ ಸುಮಾರು 12 ಗಂಟೆಯ ವೇಳೆಗೆ ಕಂಡ್ಲುರು ಸೇತುವೆ ಬಳಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಯನ್ನು ತಡೆಯಲು ತೆರಳಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಆಗಿನ ಕುಂದಾಪುರ ವಿಭಾಗ ಸಹಾಯಕ ಆಯುಕ್ತೆ ಶಿಲ್ಪಾ ನಾಗ್‌, ಅಂಪಾರು ಗ್ರಾಮ ಲೆಕ್ಕಿಗ ಕಾಂತರಾಜು ಮೇಲೆ ಮರಳುಗಾರಿಕೆ ನಿರತ ತಂಡದಿಂದ ಹಲ್ಲೆ ನಡೆದಿತ್ತು.

ಡಿಸಿ ನೇತೃತ್ವದ ತಂಡ ಸ್ಥಳಕ್ಕೆ ತೆರಳಿದಾಗ ಉತ್ತರ ಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡು ಬಂದಿತ್ತು. ಮರಳು ಕೂಡ ಸಾಕಷ್ಟು ದಾಸ್ತಾನು ಮಾಡಲಾಗಿತ್ತು. ಅಧಿಕಾರಿಗಳ ಆಗಮನವಾಗುತ್ತಿದ್ದಂತೆ ಕಾರ್ಮಿಕರು ದೋಣಿಗಳನ್ನು ಬಿಟ್ಟು ಓಡಿ ಹೋಗಿದ್ದರು. ಅಕ್ಕಪಕ್ಕದಲ್ಲಿಯೇ ಕಾರ್ಮಿಕರ ಗುಡಿಸಲುಗಳಿದ್ದು, ಅಲ್ಲಿದ್ದ ಮಹಿಳೆಯರು ಮತ್ತು ವೃದ್ಧರನ್ನು ಮುಂದಿಟ್ಟುಕೊಂಡು ಅಧಿಕಾರಿಗಳ ಮೇಲೆಯೇ ಅಲ್ಲಿದ್ದ ಗುಂಪು ಹಲ್ಲೆ ನಡೆಸಿತ್ತು. 

ಡಿಸಿ ಎಂದು ಹೇಳಿದರೂ ಬಗ್ಗದೆ ಹಲ್ಲೆ
ಕುಂದಾಪುರ ತಾಲೂಕಿನಲ್ಲಿ ವ್ಯಾಪಕವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಕುರಿತಂತೆ ಹೆಚ್ಚಿನ ದೂರುಗಳು ಬಂದಿದ್ದರಿಂದ ಡಿಸಿ ಹಾಗೂ ಎಸಿ ದಾಳಿ ನಡೆಸಿದ್ದರು. ಅಲ್ಲಿದ್ದ ಗುಂಪಿಗೆ ತಾನು ಡಿಸಿ ಎಂದು ಪರಿಚಯ ಮಾಡಿಸಿಕೊಂಡರೂ ಕೇಳದೆ ಹಲ್ಲೆಗೆ ಮುಂದಾಗಿದ್ದರು. ಡಿಸಿ ಜತೆಗಿದ್ದ ಅಂಪಾರು ವಿ.ಎ. ಕಾಂತರಾಜು ಅವರು ತಂಡದ ಕೈಗೆ ಸಿಲುಕಿ ಬಿದ್ದಿದ್ದರು. ಅವರ ಮೇಲೆ ತಂಡವು ಗಂಭೀರ ಹಲ್ಲೆ ನಡೆಸಿತ್ತು. 

26 ಮಂದಿಯ ಬಂಧನ
ಈ ಘಟನೆ ಸಂಬಂಧ ಉಡುಪಿಯ ನಗರ ಪೊಲೀಸ್‌ ಠಾಣೆಯಲ್ಲಿ ಡಿಸಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. 50 ಮಂದಿಯ ವಿರುದ್ಧ ದೂರು ನೀಡಿದ್ದು, ಅವರಲ್ಲಿ 26 ಮಂದಿಯನ್ನು ಬಂಧಿಸಲಾಗಿತ್ತು. ಆ ಪೈಕಿ ಒಬ್ಬ ಬಾಲಾಪರಾಧಿಯೂ ಇದ್ದ. ಈಗ ಬಂಧಿತ
ರಾದ ಎಲ್ಲರಿಗೂ ಜಾಮೀನು ದೊರೆತಿದೆ. ಪ್ರಕರಣ ಸಂಬಂಧ ಉತ್ತರ ಪ್ರದೇಶ ಮೂಲದ ಐವರನ್ನು ಗಡೀಪಾರು ಮಾಡಲು ಆದೇಶಿಸಲಾಗಿತ್ತು. ಉಡುಪಿ ಡಿವೈಎಸ್‌ಪಿ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. 

Advertisement

ಹಲ್ಲೆ ಪ್ರಕರಣ ಬಳಿಕ 40ಕ್ಕೂ ಹೆಚ್ಚು ದೂರು
ಡಿಸಿ, ಎಸಿ ಮೇಲಿನ ಹಲ್ಲೆ ಪ್ರಕರಣದ ಬಳಿಕ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತಂತೆ 40ಕ್ಕೂ ಹೆಚ್ಚು ದೂರುಗಳು ಬಂದಿವೆ. ದೂರು ಬಂದ ಕಡೆಗಳಲ್ಲೆಲ್ಲ ದಾಳಿ ನಡೆಸಿ, ಸ್ಥಗಿತಗೊಳಿಸಿದ್ದೇವೆ. ಕುಂದಾಪುರ ಭಾಗದಲ್ಲಿಯೇ ಹೆಚ್ಚಿನ ಮರಳುಗಾರಿಕೆ ದೂರುಗಳು ಬಂದಿದ್ದು, ಮೊಳಹಳ್ಳಿ, ಅಂಪಾರು, ಉಳ್ಳೂರು-74  ಪ್ರದೇಶ ಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಅಧಿಕಾರಿ ಮಹೇಶ್‌ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ. 

ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ
ಈಗ ಕರಾವಳಿ ತೀರದ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಅನುಮತಿ ಇದ್ದರೂ, ನಾನ್‌ ಸಿಆರ್‌ಝಡ್‌ ವಲಯದಲ್ಲಿ ಮರಳು ತೆಗೆಯಲು ಅನುಮತಿ ಇಲ್ಲ. ಆದರೂ ಕುಂದಾಪುರ ಭಾಗದಲ್ಲಿ ಈಗಲೂ ನಿರಾತಂಕವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಆಗೊಮ್ಮೆ, ಈಗೊಮ್ಮೆ ದಾಳಿ ನಡೆದಾಗ ಸುಮ್ಮನಿದ್ದು, ಮತ್ತೆ ಅಕ್ರಮ ಮರುಳಗಾರಿಕೆ ನಡೆಯುತ್ತಲೇ ಇರುತ್ತದೆ. ಇಬ್ಬರು ಉನ್ನತ ದರ್ಜೆ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣದ ತನಿಖೆಯು ನಿಧಾನಗತಿಯಲ್ಲಿ ನಡೆಯುತ್ತಿರುವುದು ಕೂಡ ಇಂತಹ ಅಕ್ರಮಗಳಿಗೆ ಸರಕಾರಿ ಅಧಿಕಾರಿಗಳೇ ಪ್ರೋತ್ಸಾಹ ಕೊಟ್ಟಂತಾಗಿದೆ. ತನಿಖೆ  ನಡೆದು, ತಪ್ಪಿತಸ್ಥರಿಗೆ ಕಠಿನ ಶಿಕ್ಷೆ ನೀಡಿದಲ್ಲಿ ಅಕ್ರಮ ಎಸಗುವವರಿಗೆ ಬಲವಾದ ಸಂದೇಶ ರವಾನಿಸಿದಂತಾಗುತ್ತದೆ. 

ಪ್ರಕರಣದ ತನಿಖಾ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಗೊತ್ತಿಲ್ಲ. ಇತ್ತೀಚೆಗೆ ಎಸ್‌ಪಿಯವರಲ್ಲಿ ಕೇಳಿದಾಗ ಚಾರ್ಜ್‌ ಶೀಟ್‌ ಸಲ್ಲಿಸಿ ಪರಿಶೀಲನೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ಆ ಬಳಿಕ ವಿಚಾರಣೆ ನಡೆಯಬಹುದು. ಈ ಸಂಬಂಧ ಉಡುಪಿಯಲ್ಲಿ ಮಾತ್ರ ದೂರು ನೀಡಲಾಗಿದ್ದು, ಮೇಲಾಧಿಕಾರಿ ಅಥವಾ ಬೇರೆಲ್ಲೂ ದೂರು ನೀಡಿಲ್ಲ. 
 – ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌,  ಉಡುಪಿ ಜಿಲ್ಲಾಧಿಕಾರಿ

ಪ್ರಕರಣದ ಕುರಿತಂತೆ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಪರಿಶೀಲನೆಯ ಹಂತದಲ್ಲಿದೆ. ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪರಿಶೀಲನೆ ಬಳಿಕ ಕೇಸ್‌ ಸಂಖ್ಯೆ ಸಿಗಲಿದೆ. ಆ ಬಳಿಕ ವಿಚಾರಣೆ ನಡೆಯಲಿದೆ. 
 – ಲಕ್ಷ್ಮಣ್‌ ನಿಂಬರಗಿ, ಉಡುಪಿ ಎಸ್ಪಿ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next