Advertisement

Kambala: ಹಲವು ವರ್ಷಗಳ ಬಳಿಕ ಪುನರಾರಂಭ; ಮಿಯ್ಯಾರಿನಲ್ಲಿ ಕಂಬಳ ಕೋಣಗಳಿಗೆ ತರಬೇತಿ

03:17 AM Nov 01, 2024 | Team Udayavani |

ಕಾರ್ಕಳ: ಕಂಬಳ ಹಬ್ಬಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಿಯ್ಯಾರಿನಲ್ಲಿ ಕೋಣಗಳ ತರಬೇತಿ (ಕುದಿ ಕಂಬಳ) ಭರದಿಂದ ಸಾಗುತ್ತಿದೆ.

Advertisement

ಜಿಲ್ಲಾ ಕಂಬಳ ಸಮಿತಿಯಡಿ ಈ ಬಾರಿ ಮೊದಲ ಕಂಬಳ ಪಿಲಿಕುಳದಲ್ಲಿ ನ.17ರಂದು ನಡೆಯಲಿದೆ. ಹಲವು ವರ್ಷಗಳ ಬಳಿಕ ಪುನರ್‌ ಆರಂಭಗೊಂಡಿರುವ ಈ ಕಂಬಳಕ್ಕೆ ಸಕಲ ಸಿದ್ಧತೆಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ. ಇದಕ್ಕೂ ಮೊದಲು ಜೂನಿಯರ್‌, ಸಬ್‌ ಜೂನಿಯರ್‌ ವಿಭಾಗದ ಕಂಬಳ ನ.9ರಂದು ಪಣಪಿಲದಲ್ಲಿ ನಡೆಯಲಿದೆ.

ನೇಗಿಲು ಮತ್ತು ಹಗ್ಗ ವಿಭಾಗದಲ್ಲಿ ಜೂನಿಯರ್‌, ಸೀನಿಯರ್‌ ಕೋಣಗಳು ಮಿಯ್ಯಾರಿನ ಲವ ಕುಶ ಕಂಬಳ ಕೆರೆಯಲ್ಲಿ ತರಬೇತಿ ಪಡೆಯುತ್ತಿವೆ. ಆಗಸ್ಟ್‌ನಲ್ಲಿ ಜೂನಿ ಯರ್‌ ಕೋಣಗಳ ತರಬೇತಿ ಆರಂಭವಾದರೆ, ಆಗಸ್ಟ್‌ ಕೊನೆ – ಸೆಪ್ಟಂಬರ್‌ ಮೊದಲ ವಾರದಿಂದ ಸೀನಿಯರ್‌ ಕೋಣಗಳ ತರಬೇತಿ ಆರಂಭಿಸಲಾಗುತ್ತದೆ. ವಾರಾಂತ್ಯ ಶನಿವಾರ, ರವಿವಾರ ಮಾತ್ರವಲ್ಲದೆ ವಾರದ ದಿನಗಳಲ್ಲೂ ತರಬೇತಿ ಇರಲಿದೆ.

ಮಂಗಳೂರು, ಕುಂದಾಪುರ, ಬೈಂದೂರು, ಬೆಳ್ತಂಗಡಿ, ಬಂಟ್ವಾಳ, ಮಾಣಿ ಸಹಿತ ದೂರದ ಊರುಗಳಿಂದಲೂ ಕೋಣಗಳನ್ನು ಇಲ್ಲಿಗೆ ತರಲಾಗುತ್ತಿದೆ. ಮಿಯ್ಯಾರಿನ ಜತೆಯಲ್ಲಿ ಮೂಡುಬಿದಿರೆ, ಕೊಡಂಗೆಯಲ್ಲೂ ತರಬೇತಿ ನಡೆಯುತ್ತಿದೆ. ವಾರಾಂತ್ಯದಲ್ಲಿ 40ಕ್ಕೂ ಅಧಿಕ ಜೋಡಿ ಕೋಣಗಳು ಮಿಯ್ಯಾರಿನಲ್ಲಿ ತರಬೇತಿ ಪಡೆಯುತ್ತವೆ. ಬೇರೆ ದಿನಗಳಲ್ಲಿ 8ರಿಂದ 10 ಜೋಡಿ ಕೋಣಗಳು ತರಬೇತಿಯಲ್ಲಿರುತ್ತವೆ.

ಮಿಯ್ಯಾರಿನಲ್ಲಿ ಸಕಲ ವ್ಯವಸ್ಥೆ
ಮಿಯ್ಯಾರಿನ ಲವಕುಶ ಕಂಬಳ ಕರೆಯಲ್ಲಿ ಉತ್ತಮವಾದ ಸ್ವತ್ಛ ಕರೆ, ಪ್ರೇಕ್ಷಕರಿಗೆ ಪೆವಿಲಿಯನ್‌, ಕೋಣಗಳ ವಿಶ್ರಾಂತಿಗೆ ವಿಶಾಲವಾದ ಪ್ರದೇಶ, ನಿರಂತರ ನೀರು ಪೂರೈಕೆ ಮೊದಲಾದ ಸೌಕರ್ಯಗಳಿವೆ. ತರಬೇತಿಯಲ್ಲಿ ಸೆನ್ಸಾರ್‌ ಟೈಮರ್‌ ವ್ಯವಸ್ಥೆಯೂ ಇರುವುದರಿಂದ ಕೋಣಗಳ ಓಟದ ನಿಖರ ಮಾಹಿತಿ ಯಜಮಾನರಿಗೆ ತಿಳಿಯುತ್ತದೆ.

Advertisement

“ಮಿಯ್ಯಾರಿನಲ್ಲಿ ಕುದಿ ಕಂಬಳ ಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೋಣ ಓಡಿಸುವ ತರಬೇತಿಗೆ ಆಗಮಿಸುತ್ತಾರೆ. ಸಮಿತಿಯು ಈ ಬಾರಿ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ನಿಖರ ಮತ್ತು ಸ್ಪಷ್ಟ ಫ‌ಲಿತಾಂಶಕ್ಕಾಗಿ ತಂತ್ರಜ್ಞಾನಗಳನ್ನೂ ಬಳಸಿಕೊಳ್ಳಲಾಗುತ್ತದೆ.” -ವಿಜಯ್‌ಕುಮಾರ್‌ ಕಂಗಿನಮನೆ, ಸಂಚಾಲಕರು, ಕಂಬಳ ತೀರ್ಪುಗಾರರ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next