ವಾಮಂಜೂರು : ದಿ| ಮಾತೃಶ್ರೀ ರತ್ನಮ್ಮ ಹೆಗ್ಗಡೆ ಅವರ ಸ್ಮರಣಾರ್ಥ ವಾಮಂಜೂರು ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿಶೇಷ ಶಾಲೆಗಳಲ್ಲಿ ಕಲಿಯುತ್ತಿರುವ ವಿಕಲಚೇತನ ಮಕ್ಕಳಿಗೆ ಸಾಂಸ್ಕೃತಿಕ ಉತ್ಸವ ‘ಕಲೋತ್ಸವ 2017’ ಕಾರ್ಯಕ್ರಮವು ಡಿ. 8ರಂದು ಜರಗಿತು.
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ. ಆರ್. ರವಿ ಉದ್ಘಾಟಿಸಿ ಮಾತನಾಡಿ, ಶಿಕ್ಷಣವು ಹಣ ಮಾಡುವ ಕಲೆಯನ್ನು ಮಾತ್ರ ಕಲಿಸದೆ ಇತರರನ್ನು ಪ್ರೀತಿಸಿ ಬದುಕುವುದನ್ನೂ ಕಲಿಸಬೇಕು. ಸಮನ್ವಯ ಶಿಕ್ಷಣದ ಮೂಲಕ ವಿಶಿಷ್ಟಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿರುವ ಎಸ್‌ಡಿಎಂ ಮಂಗಳಜ್ಯೊತಿ ಸಮಗ್ರ ಶಾಲೆಯ ಕೆಲಸ ಅತಿ ಪವಿತ್ರವಾದದ್ದು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷೆ ವತಿಕಾ ಪೈ ಮಾತನಾಡಿ, ಕಲೋತ್ಸವಗಳಂತಹ ಕಾರ್ಯಕ್ರಮಗಳು ವಿಶಿಷ್ಟಚೇತನ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳೆಸಲು ಪೂರಕವಾಗಿದೆ ಎಂದರು.
ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಕಾರ್ಯದರ್ಶಿ ಪ್ರೊ| ಎ. ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಆಡಳಿತಾಧಿಕಾರಿ ಗಣೇಶ್ ಭಟ್ ವಿ., ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಮಾರ್ಯಟ್ ಮಸ್ಕರೇನ್ಹಸ್, ಐಟಿಐ ವಿಭಾಗದ ಪ್ರಾಂಶುಪಾಲ ರೇಂದ್ರ ವೇದಿಕೆಯಲ್ಲಿದ್ದರು.
ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥ ಅಶೋಕ್ ಕುಮಾರ್ ಸ್ವಾಗತಿಸಿ, ವಾಕ್ ಶ್ರವಣ ವಿಭಾಗದ ಮುಖ್ಯಸ್ಥ ಗುರು ಪ್ರಸಾದ್ ವಂದಿಸಿದರು. ರಮೇಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಉಭಯ ಜಿಲ್ಲೆಗಳ ವಿಶೇಷ ಮಕ್ಕಳ ಶಾಲೆಗಳಿಂದ ಬಂದ ನೂರಕ್ಕೂ ಹೆಚ್ಚಿನ ಮಕ್ಕಳು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.