Advertisement

ಫ್ರೂಟ್ಸ್‌ ತಂತ್ರಾಂಶ: ಉಡುಪಿ, ದ.ಕ.ದಲ್ಲಿ 10.23 ಲಕ್ಷ ರೈತರ ನೋಂದಣಿ ಬಾಕಿ

01:55 AM Dec 26, 2022 | Team Udayavani |

ಕುಂದಾಪುರ: ಫ್ರೂಟ್ಸ್‌ (ಫಾರ್ಮರ್‌ ರಿಜಿಸ್ಟ್ರೇಷನ್ ಆ್ಯಂಡ್‌ ಯೂನಿಫೈಡ್‌ ಬೆನಿಫಿಷಿಯರಿ ಇನ್ಫಾರ್ಮಷನ್‌ ಸಿಸ್ಟಂ) ತಂತ್ರಾಂಶದಲ್ಲಿ ಉಡುಪಿಯಲ್ಲಿ 4.63 ಲಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5.60 ಲಕ್ಷ ರೈತರು ಇನ್ನೂ ಸಹ ನೋಂದಾಯಿಸಲು ಬಾಕಿ ಉಳಿದಿದ್ದಾರೆ. ರೈತರು ಸಹಾಯಧನ ಸಹಿತ ಎಲ್ಲ ರೀತಿಯ ಸರಕಾರಿ ಸೌಲಭ್ಯಗಳನ್ನು ಪಡೆಯಲು ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

Advertisement

ಉಡುಪಿ ಜಿಲ್ಲೆಯಲ್ಲಿ 8,74,977 ಮಂದಿ ರೈತರಿದ್ದು, ಈ ಪೈಕಿ ಈವರೆಗೆ ಫ್ರೂಟ್ಸ್‌ ತಂತ್ರಾಂಶದಲ್ಲಿ 4,11,701 (ಶೇ.47.05) ಮಂದಿ ನೋಂದಾಯಿಸಿಕೊಂಡರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8,42,316 ಮಂದಿ ರೈತರಿದ್ದು, ಈ ಪೈಕಿ 2,81,883 (ಶೇ.33.46) ಮಂದಿ ರೈತರು ಮಾತ್ರ ನೋಂದಾಯಿಸಿಕೊಂಡಿದ್ದಾರೆ.

ಪ್ರಯೋಜನವೇನು?
ರೈತರು ಯಾವುದೇ ಸರಕಾರಿ ಸೌಲಭ್ಯ ಪಡೆಯಲು ಪ್ರತಿ ಬಾರಿ ಜಮೀನಿನ ಪಹಣಿ, ಆಧಾರ್‌, ಬ್ಯಾಂಕ್‌ ಖಾತೆ ವಿವರಗಳನ್ನು ಒದಗಿಸುವ ಅಗತ್ಯವಿಲ್ಲ. ಅದಕ್ಕಾಗಿಯೇ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯು ಫ್ರೂಟ್ಸ್‌ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದೆ. ಇದರಡಿ ರೈತರ ಎಲ್ಲ ಅಗತ್ಯ ವಿವರಗಳನ್ನು ಈ ತಂತ್ರಾಂಶದಲ್ಲಿ ದಾಖಲೀಕರಣ ಮಾಡಿಕೊಳ್ಳುತ್ತದೆ. ಇದರಲ್ಲಿ ನೋಂದಣಿ ಮಾಡಿಸಿಕೊಂಡವರು ಸರಕಾರದಿಂದ ಸಿಗುವಂತಹ ಸಹಾಯಧನ, ಬಿತ್ತನೆ ಬೀಜ, ಕೀಟನಾಶಕ, ಸಾವಯವ ಗೊಬ್ಬರ, ಕೃಷಿ ಉಪಕರಣ, ಸಸ್ಯ ಸಂರಕ್ಷಣಾ ಉಪಕರಣಗಳನ್ನೆಲ್ಲ ಪಡೆಯಲು ದಾಖಲೆಗಳನ್ನು ತರುವ ಅಗತ್ಯವಿಲ್ಲ. ನೋಂದಣಿ ರೈತರಿಗೆ ಯೂನಿಕ್‌ ನಂಬರ್‌ ಇರುವ ಕಾರ್ಡ್‌ ಸಿಗಲಿದ್ದು, ಆ ನಂಬರ್‌ ಹೇಳಿದರೆ ಸಾಕು.

ಏನೆಲ್ಲ ದಾಖಲೆಗಳು?
ರೈತರು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌ ಪ್ರತಿ, ಪಾಸ್‌ಪೋರ್ಟ್‌ ಅಳತೆಯ ಫೋಟೋ, ಪರಿಶಿಷ್ಟ ಜಾತಿ ಮತ್ತು ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಜೆರಾಕ್ಸ್‌ ಪ್ರತಿಯ ದಾಖಲೆಗಳನ್ನು ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ಬಾಕಿ ಇರುವವರು ನೋಂದಾಯಿಸಿ
ಯಾವುದೇ ಯೋಜನೆಯಡಿ ಸರಕಾರದಿಂದ ಸವಲತ್ತುಗಳನ್ನು ಪಡೆಯಲು ಫ್ರೂಟ್ಸ್‌ ಐಡಿ ಕಡ್ಡಾಯವಾಗಿದೆ. ಆದ್ದರಿಂದ ಇನ್ನು ಸಹ ಮಾಡಿಸದಿರುವ ರೈತರು ಆದಷ್ಟು ಬೇಗ ಅಗತ್ಯ ದಾಖಲೆಗಳನ್ನು ನೀಡಿ, ಈ ತಂತ್ರಾಂಶದಡಿ ಹೆಸರನ್ನು ನೋಂದಾಯಿಸಿಕೊಳ್ಳಿ. ಇದು ರೈತರಿಗೆ ಎಲ್ಲ ರೀತಿಯಿಂದಲೂ ಅನುಕೂಲವಾಗಲಿದೆ.
– ಕೆಂಪೇಗೌಡ ಉಡುಪಿ ಹಾಗೂ ಸೀತಾ ದ.ಕ. ಜಿಲ್ಲೆ, ಕೃಷಿ ಇಲಾಖೆ ಜಂಟಿ ನಿರ್ದೇಶಕರು

Advertisement

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next