ಉಡುಪಿ: ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಜಲಾಶಯದಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೇಜ್‌ಗೆ ತಲುಪಿದ್ದು, ಈಗ ಅಲ್ಲಲ್ಲಿ ಡ್ರೆಜ್ಜಿಂಗ್ ಮಾಡಿ ನೀರು ಪೂರೈಸಲಾಗುತ್ತಿದೆ. ಸುಮಾರು 15 ದಿನಗಳ ವರೆಗೆ ಅಂದರೆ ಮೇ 20ರ ವರೆಗೆ ದಿನ ಬಿಟ್ಟು ದಿನ ನೀರು ಪೂರೈಸಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ನಡೆದ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.
ಮಾಯ ಗುಂಡಿ, ಶೀರೂರು ಮಠದ ಬಳಿ ಡ್ರೆಜ್ಜಿಂಗ್ ಮಾಡಲಾಗಿದ್ದು, ಅಲ್ಲಿಂದ ಭಂಡಾರಿ ಬೆಟ್ಟುವಿಗೆ ಅಲ್ಲಿಂದ ಪುತ್ತಿಗೆಯಲ್ಲಿ ಡ್ರೆಜ್ಜಿಂಗ್ ಮಾಡಿ ಅಲ್ಲಿಂದ ಬಜೆ ಜಲಾಶಯಕ್ಕೆ ನೀರು ಪಂಪಿಂಗ್ ಮಾಡಲಾಗುತ್ತಿದೆ. ಈಗ ಮಾಣಾಯಿ ಯಲ್ಲಿ ಡ್ರೆಜ್ಜಿಂಗ್ ಮಾಡಲಾಗುತ್ತಿದೆ. ನಗರಕ್ಕೆ ಒಟ್ಟು 23 ದಶಲಕ್ಷ ಲೀಟರ್ ನೀರು ಅಗತ್ಯವಿದ್ದು, ಈಗ 10 ಗಂಟೆ ಪಂಪಿಂಗ್ ಮಾಡಿ 10 ದಶಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ. ಡ್ರೆಜ್ಜಿಂಗ್ ಮಾಡಿ 300ರಿಂದ 350 ಲೀಟರ್ ನೀರು ಸಿಗಲಿದ್ದು, ದಿನಕ್ಕೆ ಸುಮಾರು 10 ದಶಲಕ್ಷ ಲೀಟರ್ ಹಾಗೆ ಜೂ. 5ರ ವರೆಗೂ ಮಳೆ ಬರದಿದ್ದರೆ ಕೊಡುವ ಪ್ರಯತ್ನ ಮಾಡಲಾಗುವುದು ಎಂದು ಅಧಿ ಕಾರಿಗಳು ತಿಳಿಸಿದರು.
ನೀರಿನ ಗುಣಮಟ್ಟ ಪರಿಶೀಲಿಸಿ: ಟ್ಯಾಂಕರ್‌ಗಳಿಂದ ಪೂರೈಕೆ ಮಾಡುತ್ತಿರುವ ನೀರಿನ ಗುಣಮಟ್ಟ ಪರಿಶೀಲಿಸಿ. ಪ್ರತಿಯೊಂದು ಟ್ಯಾಂಕರ್‌ಗೂ ಒಬ್ಬ ಅಧಿಕಾರಿ ನೇಮಿಸಿ. ನೀರು ಪೂರೈಕೆ ಸರಿಯಾಗುತ್ತಿದೆಯೇ ಎನ್ನುವುದರ ಕುರಿತು ನಿಗಾವಹಿಸಿ. ಸದ್ಯ ನಗರಸಭೆ ಟೆಂಡರ್ ಮೂಲಕ 13 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗು ತ್ತಿದ್ದು, ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಟ್ಯಾಂಕರ್ ಬಳಸಿ. ಈ ವರ್ಷ 12 ಸಾವಿರ ಲೀ.ನ ಒಂದು ಟ್ಯಾಂಕರ್‌ಗೆ 1,400 ರೂ. ಹಣ ನೀಡಲಾಗುತ್ತಿದೆ. ಕೊಳವೆ ಮೂಲಕ ನೀರು ಪೂರೈಕೆ ಮಾಡ ಲಾಗದ ಕಡೆಗೆ ಟ್ಯಾಂಕರ್‌ನಲ್ಲಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚನೆ ನೀಡಿದರು.
ಬಜೆ ಅಣೆಕಟ್ಟಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಸುಮಾರು 1.5 ಮೀ. ನಷ್ಟು ಕಡಿಮೆ ನೀರು ಸಂಗ್ರಹ ಮಟ್ಟ ತಲುಪಿದೆ. ಹಾಗಾಗಿ ಹೆಚ್ಚಿನ ಮುತುವರ್ಜಿಯಿಂದ ಅಗತ್ಯವಿರುವೆಡೆ ನೀರು ಪೂರೈಸಲಾಗುತ್ತಿದೆ. ನೀರು ಪೂರೈಕೆಗೆ ಹಣದ ಸಮಸ್ಯೆ ಇಲ್ಲ. ಕುಡಿಯುವ ನೀರಿಗಾಗಿ ತಮ್ಮ ಸರಕಾರ ಪ್ರಥಮ ಆದ್ಯತೆ ನೀಡುತ್ತಿದೆ ಎಂದರು.
ಎ, ಬಿ, ಸಿ. ಯಂತೆ ವಿಂಗಡಿಸಿ ನಗರಕ್ಕೆ ತೀವ್ರತರದ ಕುಡಿಯುವ ನೀರಿನ ತೊಂದರೆ ಎದುರಾಗಿರುವುದರಿಂದ ಈ ಸಮಸ್ಯೆ ನಿವಾರಿಸಲು ಪೂರಕವಾಗುವಂತೆ ನೀರಿನ ತೀವ್ರ ಅಭಾವಕ್ಕೆ ಅನುಸಾರವಾಗಿ ನಗರಸಭಾ ವಾರ್ಡ್‌ಗಳನ್ನು ಎ, ಬಿ ಮತ್ತು ಸಿ ಎಂದು ವಿಂಗಡಣೆ ಮಾಡಿ, ಟ್ಯಾಂಕರ್ ಮೂಲಕ ನೀರು ಪೂರೈಸಿ. ಅದಕ್ಕಾ ಗಿಯೇ ವಾರ್ಡ್‌ಗೊಬ್ಬ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಅವರ ಮೊಬೈಲ್ 24 ಗಂಟೆ ಕೂಡ ಚಾಲ್ತಿಯಲ್ಲಿರಲಿ ಎಂದು ಸೂಚನೆ ನೀಡಿದರು. ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪೌರಾಯುಕ್ತ ಡಿ. ಮಂಜುನಾಥಯ್ಯ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ, ಸದಸ್ಯರು ಉಪಸ್ಥಿತರಿದ್ದರು.
ವಾರಾಹಿ ಅಥವಾ ಶಿಂಬ್ರಾ ಅಣೆಕಟ್ಟು ನಿರ್ಮಾಣ
ಸ್ವರ್ಣ ನದಿಯಲ್ಲಿ ವರ್ಷಪೂರ್ತಿ ನೀರು ಸಿಗುವುದು ಕಷ್ಟ. ಹೀಗಾಗಿ 102 ಕೋ. ರೂ. ಕುಡ್ಸೆಂಪ್ ಯೋಜನೆಯಡಿ ಶಿಂಬ್ರಾ ಅಣೆಕಟ್ಟು ನಿರ್ಮಿಸಿ ಅಲ್ಲಿ ಹಾಗೂ ಬಜೆ ಅಣೆಕಟ್ಟಿನಲ್ಲಿ ನೀರು ನಿಲ್ಲುವ ಯೋಜನೆ ಇದೆ. 6 ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಲಿದೆ. ಅದಲ್ಲದೆ ವರ್ಷ ಪೂರ್ತಿ ನೀರಿರುವ ವಾರಾಹಿ ಯೋಜನೆ ಈಗ ಉಡುಪಿ ನಗರದ ಸಮೀಪದ ವರೆಗೆ ಬಂದಿದ್ದು, ಅದನ್ನು ತೆಂಕನಿಡಿಯೂರು ಹಾಗೂ ಚಾಂತಾರು ಗ್ರಾ.ಪಂ.ನ ಬಹುಗ್ರಾಮ ಯೋಜನೆ 82 ಕೋ. ರೂ. ಹಾಗೂ ಕುಡ್ಸೆಂಪ್‌ವಿನ 102 ಕೋ. ರೂ. ಒಟ್ಟು ಸೇರಿಸಿ ನಗರಕ್ಕೆ ನೀರು ಪೂರೈಸುವ ಯೋಜನೆಯಿದೆ. ಈಗ ನೀರಿನ ಸಮಸ್ಯೆ ಇರುವ 110 ದಿನಗಳಿಗೆ ಈ 2 ಯೋಜನೆಗಳಲ್ಲಿ ಯಾವುದು ಹೆಚ್ಚು ಅನುಕೂಲ ಅದನ್ನು ಹೈಡ್ರೋಲಾಜಿಕಲ್ ಸರ್ವೇ ಮಾಡಿ ನಿರ್ಧರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.