Advertisement

Udupi Chikmagalur Lok Sabha Poll:ಪ್ರಧಾನಿ ಮೋದಿ ಪ್ರಬಲ ಅಲೆ ನಡುವೆ ಜಾತಿ ಲೆಕ್ಕಾಚಾರ

12:21 PM Apr 22, 2024 | Team Udayavani |

ಉಡುಪಿ:ಬಿಜೆಪಿಯ ಭದ್ರ ಕೋಟೆ ಎಂದೇ ಬಿಂಬಿತವಾದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು
ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಿರೀಕ್ಷೆ ಹೆಚ್ಚಾಗಿದೆ. ಜತೆಗೆ 2 ಪಕ್ಷಗಳಲ್ಲೂ ಜಾತಿ ಲೆಕ್ಕವೂ ನಡೆಯುತ್ತಿರುವಂತೆ ಭಾಸವಾಗಿದೆ. ಕಾಂಗ್ರೆಸ್‌ ಎಲ್ಲ ಆಯಾಮಗಳಲ್ಲೂ ಅಳೆದು ತೂಗಿ ಕೆ. ಜಯ ಪ್ರಕಾಶ್‌ ಹೆಗ್ಡೆಯವರಿಗೆ ಟಿಕೆಟ್‌ ನೀಡಿದರೆ, ಬಿಜೆಪಿ ಜಾತಿ ಲೆಕ್ಕಾಚಾರವನ್ನೇ ಪ್ರಧಾನವಾಗಿಟ್ಟುಕೊಂಡು ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್‌ ನೀಡಿದೆ. ಅವರಿಬ್ಬರೂ ದಶಕಗಳ ಬಳಿಕ ಲೋಕಸಭೆ ಕಣದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಈ ಹಿಂದೆ ಬ್ರಹ್ಮಾವರ ವಿಧಾನಸಭಾ ಕ್ಷೇತ್ರವಿದ್ದ ಸಂದರ್ಭದಲ್ಲಿ ಇಬ್ಬರೂ 2 ಚುನಾವಣೆಗಳಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು.

Advertisement

2019ರಲ್ಲೇ ಬಿಜೆಪಿ ಅಭ್ಯರ್ಥಿ ವಿರುದ್ಧ ಗೋ ಬ್ಯಾಕ್‌ ಘೋಷಣೆ ಇತ್ತಾದರೂ ಅಂದಿನ ವಿದ್ಯಮಾನಗಳು, ಮೋದಿ ಅಲೆ ಅದನ್ನು ತಣ್ಣಗೆ ಮಾಡಿತ್ತು. ಆದರೆ ಈ ಬಾರಿ ಆ ರಿಸ್ಕ್ ಅನ್ನು ತೆಗೆದುಕೊಳ್ಳುವ ಸಾಹಸಕ್ಕೆ ಕೈ ಹಾಕದ ಬಿಜೆಪಿ ಅಭ್ಯರ್ಥಿಯನ್ನು ಬದಲಿಸಿತು. ಇದೂ ಜಾಣ ನಡೆಯೇ. ಸಿ.ಟಿ. ರವಿ, ಪ್ರಮೋದ್‌ ಮಧ್ವರಾಜ್‌ ಆಕಾಂಕ್ಷಿಗಳಾಗಿದ್ದರೂ ಒಬ್ಬರ ಆಯ್ಕೆ ಮಾಡಿದರೆ  ಮತ್ತೊಂದು ಕಡೆ ವಿರೋಧ, ಅಸಮಾಧಾನ ಹೊಗೆಯಾಡಿದರೆ ಕಷ್ಟ ಎಂದುಕೊಂಡು ಕೋಟ ಶ್ರೀನಿವಾಸ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ. ಜಾತಿ ಲೆಕ್ಕಾಚಾರದಲ್ಲೂ ಹೊಂದಿಕೆಯಾಗುತ್ತದೆ. ಅದರೊಂದಿಗೆ ಆರ್‌ಎಸ್‌ಎಸ್‌ನ ಬೆಂಬಲ ಇರುವುದರಿಂದ ಕೋಟರನ್ನು ಆಯ್ಕೆ ಮಾಡಿದರೆ ಉಳಿದೆಲ್ಲವೂ ತಣ್ಣಗಾಗಬಹುದೆಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು.

ಕಾಂಗ್ರೆಸ್‌ ಕೂಡ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಪ್ರಬಲ ಸಮುದಾಯ, ಪರಿಚಿತ ಮುಖ, ಹಳೆಯ ಗರಡಿಯವರು-
ಹೀಗೆಲ್ಲ ಲಕ್ಷಣಗಳನ್ನು ಪಟ್ಟಿ ಮಾಡಿಕೊಂಡಿತ್ತು. ಆಗ 3 ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಒಮ್ಮೆ ಗೆದ್ದಿದ್ದ ಹೆಗ್ಡೆಯವರು ಅವೆಲ್ಲದಕ್ಕೂ ಹೊಂದುವಂತೆ ಕಂಡರು. ಅಷ್ಟು ಮಾತ್ರವಲ್ಲದೆ, ಕಾಂಗ್ರೆಸ್‌ನಲ್ಲೂ ಪ್ರಬಲ ಆಕಾಂಕ್ಷಿಗಳ ಪಟ್ಟಿ ಇರಲಿಲ್ಲ. ಚುನಾವಣೆಯಲ್ಲೂ ಕಾಂಗ್ರೆಸ್‌ ಸರಾಸರಿ 3.75 ಲಕ್ಷ ಮತ ಪಡೆದಿರುವುದು ಗಮನಾರ್ಹ. ಹಾಗಾಗಿ ಪಕ್ಷ ಹಾಗೂ ಅಭ್ಯರ್ಥಿಯ ವರ್ಚಸ್ಸಿನ ಮತಗಳು ಇನ್ನೂ ಕಾಂಗ್ರೆಸ್‌ನ ಬುಟ್ಟಿಯಲ್ಲೇ ಇದ್ದಂತಿವೆ. 2019ರಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ 3.69 ಲಕ್ಷ ಮತ ಪಡೆದಿದ್ದರು.

ಬದಲಾದ ರಾಜಕೀಯ ಚಿತ್ರಣ: 2019ರಲ್ಲಿ ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಕುಂದಾಪುರ ಹಾಗೂ ಕಾಪು ನಾಲ್ಕು ಕ್ಷೇತ್ರದಲ್ಲೂ ಬಿಜೆಪಿ ಶಾಸಕರಿದ್ದರೂ 2023ರ ಚುನಾವಣೆಯಲ್ಲೂ ಫ‌ಲಿತಾಂಶದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ 2019ರಲ್ಲಿ ಚಿಕ್ಕಮಗಳೂರಿನ ಶೃಂಗೇರಿ ಹೊರತು ಪಡಿಸಿ ಉಳಿದ ಮೂರು ಕ್ಷೇತ್ರದಲ್ಲಿ ಬಿಜೆಪಿ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ಶೃಂಗೇರಿ ಸಹಿತ ಚಿಕ್ಕಮಗಳೂರು, ತರೀಕೆರೆ, ಮೂಡಿಗೆರೆಯಲ್ಲೂ ಕಾಂಗ್ರೆಸ್‌ ಆಡಳಿತದಲ್ಲಿದೆ. ಹೀಗಾಗಿ ಉಡುಪಿ ಹಾಗೂ ಚಿಕ್ಕಮಗಳೂರು ಎರಡೂ ಕಡೆಗಳಲ್ಲೂ ಉಭಯ ಪಕ್ಷಗಳ ಸಮಬಲದ ಹೋರಾಟದ ನಿರೀಕ್ಷೆಯಿದೆ. ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಅನುಕೂಲ ತಂದುಕೊಡಬಹುದು.

Advertisement

ಜಾತಿ ಲೆಕ್ಕಾಚಾರ: ಬಿಜೆಪಿ ಜಾತಿ ಲೆಕ್ಕಾಚಾರದ ಆಧಾರದಲ್ಲಿ ಈ ಬಾರಿ ಬಿಲ್ಲವ ಸಮುದಾಯಕ್ಕೆ ಟಿಕೆಟ್‌ ನೀಡಿದೆ. ಶಿವಮೊಗ್ಗ, ದಕ್ಷಿಣ ಕನ್ನಡ ಕ್ಷೇತ್ರದ ಬಿಲ್ಲವ ಮತದ ಕ್ರೋಡೀಕರಣದ ಲೆಕ್ಕಾಚಾರ ಬಿಜೆಪಿಯದ್ದು. ಇದರೊಂದಿಗೆ ಸಂಘ ಸಂಪರ್ಕ ಹಾಗೂ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೂ ಸಂಪರ್ಕ ಹೊಂದಿರುವುದು ಮತ ಗಳಿಕೆಗೆ ಅನುಕೂಲವಾಗಬಹುದು ಎಂಬ ಗಣಿತವೂ ಬಿಜೆಪಿಯ ಆಯ್ಕೆಯ ಹಿಂದಿದೆ. ಜಯಪ್ರಕಾಶ್‌ ಹೆಗ್ಡೆಯವರು ಕಾಂಗ್ರೆಸ್‌ನಲ್ಲಿದ್ದು, 2019ರ ಅನಂತರದ ಬೆಳವಣಿಗೆಯಲ್ಲಿ ಬಿಜೆಪಿ ಸೇರಿದ್ದರು. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ವಾಪಸಾಗಿದ್ದು, ಸ್ಥಳೀಯವಾಗಿ ನಾಯಕತ್ವದ ಸಮಸ್ಯೆ ಎದುರಿಸುತ್ತಿದ್ದ ಪಕ್ಷಕ್ಕೆ ಹೊಸ ಚೈತನ್ಯ ತುಂಬಿದಂತಾಗಿದೆ. ಸಂಸದರಾಗಿ ಕೆಲಸ ಮಾಡಿದ್ದು, ವೈಯಕ್ತಿಕ ವರ್ಚಸ್ಸೂ ಸಹ ಅವರ ಬೆನ್ನಿಗಿದೆ.

*ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next