Advertisement

ಮಣಿಪಾಲ: ಪಾಕಶಾಲೆ ಪರಿಕರಗಳ ಮ್ಯೂಸಿಯಂ ಲೋಕಾರ್ಪಣೆ

02:22 PM Apr 06, 2018 | Team Udayavani |

ಉಡುಪಿ: ಮಣಿಪಾಲ ‘ಮಾಹೆ’ಯ WGSHA (ವೆಲ್‌ಕಮ್‌ ಗ್ರೂಪ್‌ ಗ್ರಾಜುವೇಟ್‌ ಸ್ಕೂಲ್‌ ಆಫ್ ಹೊಟೇಲ್‌ ಅಡ್ಮಿನಿಸ್ಟ್ರೇಶನ್‌) ಸಂಸ್ಥೆಯ ಅಡುಗೆ ಕಲೆ ಪರಿಕರಗಳ ವಿಭಾಗ (ಕಲಿನರಿ ಆರ್ಟ್ಸ್) ಮತ್ತು ಮ್ಯೂಸಿಯಂ ಅನ್ನು ಅಂತಾರಾಷ್ಟ್ರೀಯ ಖ್ಯಾತಿಯ ಬಾಣಸಿಗ (ಚೆಫ್) ಹಾಗೂ WGSHA ಸಂಸ್ಥೆಯ ಹಳೆ ವಿದ್ಯಾರ್ಥಿ ವಿಕಾಸ್‌ ಖನ್ನಾ ಅವರು ಎ. 5ರಂದು ಉದ್ಘಾಟಿಸಿದರು.

Advertisement

ಭಾರತದ ಅತ್ಯಂತ ಪುರಾತನ ಅಡುಗೆ ಪರಿಕರಗಳ ಸಂಗ್ರಹಾಲಯ ಇದಾಗಿದ್ದು ಇಲ್ಲಿ 2,000ಕ್ಕೂ ಅಧಿಕ ಪರಿಕರಗಳಿವೆ. ಜಮ್ಮು, ಕೇರಳ, ನಾಗಲ್ಯಾಂಡ್‌, ಮಿಜೋರಾಂ, ಹಂಪಿ, ಕೊಡಗು, ತಿರುಪತಿ, ಜೋಧ್‌ಪುರ, ಮಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳ ಅಪರೂಪದ ಮತ್ತು ಅತ್ಯಂತ ಹಳೆಯ ಕಾಲದ ಅಡುಗೆ ಪರಿಕರಗಳನ್ನು ಇಲ್ಲಿ ಸಂಗ್ರಹಿಸಡಲಾಗಿದೆ. ಈ ವಸ್ತು ಸಂಗ್ರಹಾಲಯವನ್ನು ತನ್ನ ತಂದೆಯವರಿಗೆ ಸಮರ್ಪಿಸುವುದಾಗಿ ಖನ್ನಾ ತಿಳಿಸಿದರು.

ಬಕೆಟ್‌ನಿಂದ ಗಾಣದವರೆಗೆ…
700 ವರ್ಷಗಳ ಹಿಂದಿನ ಕೊಡಪಾನ, 600 ವರ್ಷಗಳ ಹಿಂದೆ ಬಳಕೆಯಾಗಿರುವ ಎಣ್ಣೆ ಗಾಣ, ಈಶಾನ್ಯ ರಾಜ್ಯಗಳ ಹಳೆಯ ಕಾಲದ ಬಿದಿರಿನ ಅಡುಗೆ ಪರಿಕರಗಳು, ಜೋಧಪುರ ರಾಜರು ಬಳಕೆ ಮಾಡುತ್ತಿದ್ದ ಪರಿಕರಗಳು, ತೂಕ, ಅಳತೆ ಮಾಪಕಗಳು, 400 ವರ್ಷ ಹಳೆಯದಾದ ಬಕೆಟ್‌ಗಳು, ಸಾಂಬಾರು ಪುಡಿ ಮಾಡುವ ಸಲಕರಣೆಗಳು, ಕಾಶ್ಮೀರ ಪಂಡಿತರು ಬಳಕೆ ಮಾಡಿರುವ ಪುರಾತನ ಸಾಮಗ್ರಿಗಳು ಹೀಗೆ ದೇಶದ ವಿವಿಧೆಡೆಗಳ ಪುರಾತನ ಅಡುಗೆ ಪರಿಕರಗಳ ಕುರಿತು ಖನ್ನಾ ಅವರು ವಿವರಿಸಿದರು.

ನಮ್ಮ ಪೂರ್ವಜರು ಅಡುಗೆ ಸಲಕರಣೆಗಳನ್ನು ಕೂಡ ಅತ್ಯಂತ ಕಲಾತ್ಮಕವಾಗಿ ತಯಾರು ಮಾಡಿದ್ದರು. ಅವುಗಳಲ್ಲಿ ಕೆಲವೊಂದನ್ನಾದರೂ ಮುಂದಿನ ಜನಾಂಗಕ್ಕೆ ಉಳಿಸಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಮ್ಯೂಸಿಯಂನ್ನು ‘ಟ್ರಾವೆಲಿಂಗ್‌ ಮ್ಯೂಸಿಯಂ’ ಆಗಿ ಉಳಿಸಿಕೊಳ್ಳಲಾಗುವುದು. ಅಗತ್ಯವಿದ್ದರೆ ಬೇರೆ ಕಡೆ ಪ್ರದರ್ಶನಕ್ಕೂ ಇವುಗಳನ್ನು ಬಳಸಲಾಗುವುದು ಎಂದು ಖನ್ನಾ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಈ ಮ್ಯೂಸಿಯಂ WGSHAದ ಹಳೆ ವಿದ್ಯಾರ್ಥಿಯಾಗಿರುವ ವಿಕಾಸ್‌ ಖನ್ನಾ ಅವರ ಕನಸಿನ ಕೂಸಾಗಿದೆ ಎಂದರು. ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಸಹಕುಲಪತಿ ಪೂರ್ಣಿಮಾ ಬಾಳಿಗಾ, ಇಂದಿರಾ ಬಲ್ಲಾಳ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next