ಉಡುಪಿ: ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ತೆಗೆದುಕೊಳ್ಳದೆ ಪ್ರತಿಭಟನೆ ನಡೆಸಿದ 11 ಮಂದಿ ಪಿಎಫ್ಐ ಕಾರ್ಯಕರ್ತರ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಡಯಾನ ಸರ್ಕಲ್‌ನ ಸಾರ್ವಜನಿಕ ರಸ್ತೆಯಲ್ಲಿ ಗುರುವಾರ ಪಿಎಫ್ಐ ಕಾರ್ಯಕರ್ತರು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದರು. ಘಟನ ಸ್ಥಳದಲ್ಲಿ 25ರಿಂದ 30 ಮಂದಿ ಸೇರಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಪಿಎಫ್ಐ ಪ್ರಮುಖರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿರುವ ವಿಚಾರದ ಕುರಿತು ಧಿಕ್ಕಾರ ಕೂಗಿ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ಮತ್ತು ಸಂಚರಿಸುವ ವಾಹನಗಳಿಗೆ ಅಡೆ ತಡೆ ಉಂಟು ಮಾಡುತ್ತಿದ್ದರು.
ಪ್ರತಿಭಟನ ನಿರತರನ್ನು ಸ್ಥಳದಿಂದ ತೆರಳುವಂತೆ ತಿಳಿಸಿದರೂ ಹೋಗಲಿಲ್ಲ. ಈ ಕಾರಣಕ್ಕೆ ಲಘು ಲಾಠಿ ಪ್ರಹಾರ ನಡೆಸಿ ಸಾದೀಕ್ ಅಹಮ್ಮದ್ (40), ಅಫೊಜ್ ಕೆ. (39), ಇಲಿಯಾಸ್ ಸಾಹೇಬ್ (46), ಇರ್ಷಾದ್ (37), ಫಯಾಜ್ ಅಹಮ್ಮದ್ (39), ಮಹಮ್ಮದ್ ಅಶ್ರಫ್ (43), ಎ. ಹಾರೂನ್ ರಶೀದ್ (42), ಮೊಹಮ್ಮದ್ ಜುರೈಜ್ (42), ಇಶಾಕ್ ಕಿದ್ವಾಯಿ (30), ಶೌಕತ್ ಅಲಿ (31), ಮಹಮ್ಮದ್ ಝಹೀದ್ (24) ಅವರನ್ನು ವಶಕ್ಕೆ ಪಡೆಯಲಾಗಿದೆ.
ಸುರತ್ಕಲ್‌ನಲ್ಲೂ
ಸುರತ್ಕಲ್: ವಿವಿಧೆಡೆ ಪಿಎಫ್‌ಐ ಎಸ್‌ಡಿಪಿಐ ಮುಖಂಡರು, ಕಾರ್ಯಕರ್ತರ ಮನೆ ಮೇಲೆ ಎನ್‌ಐಎ, ಪೊಲೀಸರು ದಾಳಿ ನಡೆಸಿರುವುದನ್ನು ಖಂಡಿಸಿ ಸುರತ್ಕಲ್‌ನಲ್ಲಿ ದಿಢೀರ್ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ಮಾಡಿದವರ ವಿರುದ್ಧ ಸುರತ್ಕಲ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ತನಿಖಾ ತಂಡಗಳು ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದಾದ ಹೊತ್ತಿನಲ್ಲೇ ವಿವಿಧೆಡೆ ಪ್ರತಿಭಟನೆ ಮಾಡಲಾಗಿತ್ತು. ಆದರೆ ಸುರತ್ಕಲ್‌ನಲ್ಲಿ ಸ್ಥಳೀಯರಲ್ಲದೆ ಬೇರೆಡೆಯಿಂದ ಬಂದು ಜಮಾಯಿಸಿದ ಕಾರ್ಯಕರ್ತರು ದಿಢೀರ್ ರಸ್ತೆ ತಡೆ ನಡೆಸಿದ್ದರು. ಇದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯವಸ್ತವಾಗಿತ್ತು. ಸುಮಾರು 60ಕ್ಕೂ ಮಿಕ್ಕಿ ಜನರ ಮೇಲೆ ಕೇಸು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.