ಕಾರ್ಕಳ: ದೇಶದ ಎಲ್ಲ ಆಗುಹೋಗುಗಳ ಹಿಂದೆ ನೇತೃತ್ವ, ಮಾರ್ಗ ದರ್ಶನವನ್ನು ವಿಪ್ರ ಸಮಾಜದ ಬಂಧುಗಳು ನೀಡುತ್ತ ಬಂದಿದ್ದಾರೆ. ವಿಶೇಷವಾಗಿ ಜ್ಞಾನ ಕ್ಷೇತ್ರದಲ್ಲಿ ಕೊಡುಗೆಗಳು ದೊಡ್ಡದಿವೆ. ಭಾರತೀಯ ಸಮಾಜ ಬೆಳವಣಿಗೆ ಹಾಗೂ ಜಗತ್ತು ಗುರುತಿಸುವ ಸೇವೆ ವಿಪ್ರರಿಂದ ಸಿಕ್ಕಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಕಾರ್ಕಳದ ಶ್ರೀ ರಾಧಾಕೃಷ್ಣ ಸಭಾಭವನ ದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಸಭಾ ವತಿಯಿಂದ ರವಿವಾರ ನಡೆದ ಉಡುಪಿ ಜಿಲ್ಲಾ ವಿಪ್ರ ಸಮ್ಮೇಳನ 2022ರ ಸಮಾರೋಪ ಸಮಾರಂಭದಲ್ಲಿ ಅವರು “ವಿಪ್ರ ಸ್ಪಂದನ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸಚ್ಚಿದಾನಂದ ಮೂರ್ತಿ ನೇಮಕವಾದ ಬಳಿಕ ಸಹಸ್ರಾರು ಮಂದಿಗೆ ಹಲವು ಯೋಜನೆಗಳ ಮೂಲಕ ಸೌಲಭ್ಯ ಕಲ್ಪಿಸಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಎಲ್ಲ ಸಹಕಾರವನ್ನು ಸರಕಾರದ ಕಡೆಯಿಂದ ನೀಡುವುದಾಗಿಯೂ ಕಾರ್ಕಳ ದಲ್ಲಿ ಸಮಾಜದ ಸಮುದಾಯ ಭವನಕ್ಕೆ ಅನುದಾನ ನೀಡುವುದಾಗಿಯೂ ಭರವಸೆ ನೀಡಿದರು.
ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೈ. ಸುಧಾಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಸಂಘದ ಕುರಿತು ಮಾತನಾಡಿದರು. ಮಂಡಳಿಯ ನಿರ್ದೇಶಕ ಶಿವರಾಮ ಉಡುಪ, ರಾಜೇಶ್ ನಡ್ಯಂತಿಲ್ಲಾಯ, ವತ್ಸಲಾ ನಾಗೇಶ್, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ವೇ| ಮೂ| ಎಸ್. ರಾಮ ಭಟ್, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ಕೆ. ಕೃಷ್ಣಾನಂದ ಚಾತ್ರ, ಕೋಶಾಧಿಕಾರಿ ಶ್ರೀಕಾಂತ ಕನ್ನಂತ, ಕಾರ್ಯದರ್ಶಿ ಸಂದೀಪ್ ಮಂಜ, ಜಿಲ್ಲಾ ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಶೋಭಾ ಕಲ್ಕೂರ, ಉಡುಪಿ, ಕಾರ್ಕಳ, ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕು ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಮಂಜುನಾಥ ಉಪಾಧ್ಯಾಯ, ಸೌಜನ್ಯಾ ಉಪಾಧ್ಯಾಯ, ಅನಂತ ಪದ್ಮನಾಭ ಬಾಯರಿ, ಅಶೋಕ್ ಭಟ್ ವೇದಿಕೆಯಲ್ಲಿದ್ದರು.
ಗೌರವಾಧ್ಯಕ್ಷ ಕೃಷ್ಣಾನಂದ ಚಾತ್ರ ಸ್ವಾಗತಿಸಿ,ಬಲ್ಲಾಡಿ ಚಂದ್ರಶೇಖರ ಭಟ್, ಬಾಲಕೃಷ್ಣ ರಾವ್
ನಿರೂಪಿಸಿದರು. ಕೃಷ್ಣ ಭಟ್ ವಂದಿಸಿದರು.ಬೇಡಿಕೆಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಲಾಯಿತು.
ಡಿಸೆಂಬರ್‌ನಲ್ಲಿ ಪರಶುರಾಮ ಪ್ರತಿಮೆ ಲೋಕಾರ್ಪಣೆ
ಕರಾವಳಿ ಪರಶುರಾಮನ ಸೃಷ್ಟಿ. ಕಾರ್ಕಳದ ಬೈಲೂರಿನಲ್ಲಿ ಪರಶುರಾಮ ಕಂಚಿನ ಪ್ರತಿಮೆ ಸ್ಥಾಪಿಸಿ ಮಂದಿರ ನಿರ್ಮಿಸುತ್ತಿದ್ದೇವೆ. ಡಿಸೆಂಬರ್‌ನಲ್ಲಿ ಉದ್ಘಾಟನೆ ನಡೆಯಲಿದ್ದು ಎಲ್ಲರ ಸಹಕಾರ ಅಗತ್ಯ ಎಂದು ಸಚಿವ ಸುನಿಲ್ ಕುಮಾರ್ ಮನವಿ ಮಾಡಿದರು.