Advertisement

ಉಡುಪಿ: ಕಾಂಗ್ರೆಸ್‌ಗಿಂತ ಬಿಜೆಪಿ ಅಭ್ಯರ್ಥಿಯದ್ದೇ ಕುತೂಹಲ

10:14 AM Mar 09, 2023 | Team Udayavani |

ಉಡುಪಿ: ಜಿಲ್ಲಾ ಕೇಂದ್ರದ ಉಡುಪಿ ವಿಧಾನಸಭಾ ಕ್ಷೇತ್ರ ವಿಶಿಷ್ಟವಾದ ಕ್ಷೇತ್ರ. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡನ್ನೂ ಬೆಂಬಲಿಸಿದ ಕ್ಷೇತ್ರ. ಸದ್ಯಕ್ಕೆ ಬಿಜೆಪಿಯ ಕೋಟೆ. ದಕ್ಷಿಣ ಭಾರತದಲ್ಲಿ ಜನಸಂಘದ ಕಾಲದಲ್ಲಿ ಮೊದಲ ಪುರಸಭೆ ಗೆದ್ದು ಗದ್ದುಗೆ ಏರಿದ ಖ್ಯಾತಿಯೂ ಉಡುಪಿ ಬಿಜೆಪಿಯದ್ದು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸಾಕಷ್ಟು ಬಾರಿ ಈ ಕ್ಷೇತ್ರದ ಮತದಾರರು ಬೆಂಬಲಿಸಿದ್ದಾರೆ.

Advertisement

1962ರಿಂದ 78ರ ವರೆಗೂ ಕಾಂಗ್ರೆಸ್‌ನ ಮಲ್ಪೆ ಮಧ್ವರಾಜ್‌, ಮನೋರಮಾ ಮಧ್ವರಾಜ್‌, ಎಸ್‌.ಕೆ. ಅಮೀನ್‌ ಶಾಸಕರಾಗಿದ್ದರು. 1983ರಲ್ಲಿ ಕಾಂಗ್ರೆಸ್‌ನ ಈ ಸರಪಳಿಯನ್ನು ತುಂಡರಿಸಿದವರು ಬಿಜೆಪಿಯ ಡಾ| ವಿ.ಎಸ್‌. ಆಚಾರ್ಯ. ಅದೂ ಕಾಂಗ್ರೆಸೇತರ ಪಕ್ಷಗಳತ್ತ ಇಡೀ ರಾಜ್ಯದ ಗಾಳಿ ಬೀಸುತ್ತಿದ್ದ ಕಾಲ. ಈ ಖುಷಿ ಇದ್ದದ್ದು ಎರಡೇ ವರ್ಷ. 1985ರಲ್ಲಿ ನಡೆದ ಚುನಾವಣೆಯಲ್ಲಿ ಮತದಾರರು ಮತ್ತೆ ಕಾಂಗ್ರೆಸ್‌ ಬೆಂಬಲಿಸಿದ ಪರಿಣಾಮ ಮನೋರಮಾ ಮಧ್ವರಾಜ್‌ ಗೆದ್ದರು. ಅನಂತರದ ಚುನಾವಣೆಯಲ್ಲಿ ಮನೋರಮಾ ಗೆದ್ದರೆ, 1994ರಲ್ಲಿ ಎಸ್‌. ಬಂಗಾರಪ್ಪ ನೇತೃತ್ವದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಯು. ಸಭಾಪತಿ ವಿಜಯಶಾಲಿಯಾದರು. ಸಭಾಪತಿ ಕಾಂಗ್ರೆಸ್‌ಗೆ ಬಂದು 1999ರಲ್ಲೂ ಕ್ಷೇತ್ರವನ್ನು ಪ್ರತಿನಿಧಿಸಿದರು.

ಅದಾದ ಬಳಿಕ 2004, 2008ರಲ್ಲಿ ಬಿಜೆಪಿಯ ಕೆ. ರಘುಪತಿ ಭಟ್‌ ಕ್ಷೇತ್ರವನ್ನು ಗೆದ್ದರು. 2013 ರಲ್ಲಿ ಮತದಾರರು ಕಾಂಗ್ರೆಸ್‌ನ ಪ್ರಮೋದ್‌ ಮಧ್ವರಾಜ್‌ ಅವರಿಗೆ ಜಯದ ಮೊಹರು ಒತ್ತಿದರು. 2018ರಲ್ಲಿ ಮೋದಿ ಅಲೆಯೂ ರಾಜ್ಯಾದ್ಯಂತ ಭರ್ಜರಿಯಾಗಿದ್ದ ಪರಿಣಾಮ ಬಿಜೆಪಿಯ ಕೆ. ರಘುಪತಿ ಭಟ್‌ ಮತ್ತೆ ಆಯ್ಕೆಯಾದರು.

2023ರ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಕ್ಷೇತ್ರದಲ್ಲಿ ಹೊಸ ಮುಖವನ್ನು ಪರಿಚಯಿಸಬೇಕೆಂಬ ಒತ್ತಡವೂ ಸಾಕಷ್ಟಿದೆ. ಜತೆಗೆ ಕ್ಷೇತ್ರದ ವಿಶೇಷ ಗುಣವೆಂದರೆ ಮತದಾರರ ಒಲವು ವ್ಯಕ್ತಿಗಳಿಗಿಂತ ಪಕ್ಷಗಳ ಕಡೆಗೇ ಹೆಚ್ಚು. ಇದು ಈ ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿರುವ ಅಂಶ. ಇದು ಬಿಜೆಪಿಯ ಹೊಸ ಮುಖದ ಪ್ರಯೋಗಕ್ಕೆ ಹುಮ್ಮಸ್ಸು ತುಂಬಿದರೂ ಅಚ್ಚರಿಯಿಲ್ಲ. ಹಾಗೆಯೇ ಸಚಿವರೂ ಆಗಿದ್ದ ಕಾಂಗ್ರೆಸ್‌ನ ಪ್ರಮೋದ್‌ ಮಧ್ವರಾಜ್‌ ಈಗ ಬಿಜೆಪಿಯಲ್ಲಿದ್ದಾರೆ. ಆದ ಕಾರಣ ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದೆ.

ಬಿಜೆಪಿಯಲ್ಲಿ ಹಾಲಿ ಶಾಸಕ ಕೆ. ರಘುಪತಿ ಭಟ್‌ ವಿವಿಧ ಉತ್ಸವಗಳನ್ನು ಸಂಘಟಿಸುತ್ತಾ ಪಕ್ಷದ ವರಿಷ್ಠರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದರೆ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಕೂಡ ಸ್ಪರ್ಧಿಸುವ ಒಲವು ತೋರಿ ದ್ದಾರೆ ಎನ್ನಲಾಗಿದೆ. ಸಂಘ ಪರಿವಾರದ ಹಿನ್ನೆಲೆಯ ಗಣೇಶ್‌ ನಾಯಕ್‌ ಶಿರಿಯಾರ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ನಗರಸಭೆ ಸದಸ್ಯರಾದ ವಿಜಯ ಕೊಡ ವೂರು ಅವರೂ ಆನ್‌ಲೈನ್‌ನಲ್ಲಿ ಪ್ರಚಾರ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದಲ್ಲದೆ, ವಿವಿಧ ಕಾರ್ಯಕ್ರಮಗಳನ್ನು ವಾರ್ಡ್‌ ಮಟ್ಟದಿಂದ ಕ್ಷೇತ್ರಮಟ್ಟಕ್ಕೆ ವಿಸ್ತರಿಸಿ ಕ್ರಿಯಾಶೀಲರಾಗಿದ್ದಾರೆ.

Advertisement

ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಕೆ. ಉದಯ್‌ ಕುಮಾರ್‌ ಶೆಟ್ಟಿಯವರ ಹೆಸರೂ ಚಾಲ್ತಿಯಲ್ಲಿದೆ. ನಗರಸಭೆ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇವರಲ್ಲದೆ ಇನ್ನೂ ಹಲವರು ಕಾರ್ಯಶೀಲರಾಗಿದ್ದಾರೆ.

ಅನಿರೀಕ್ಷಿತ ಬದಲಾವಣೆಯಲ್ಲಿ ಮೊಗವೀರ ಸಮುದಾಯಕ್ಕೆ ಅವಕಾಶ ನೀಡಿದರೆ ಮಾಜಿ ಶಾಸಕ ಪ್ರಮೋದ್‌ ಮಧ್ವರಾಜ್‌, ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಎ. ಸುವರ್ಣ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್‌ ಅವರ ಹೆಸರೂ ಮುನ್ನೆಲೆಗೆ ಬರಬಹುದು.

ಕಾಂಗ್ರೆಸ್‌ ನಲ್ಲೂ ಪಟ್ಟಿ ದೊಡ್ಡದು
ಕಾಂಗ್ರೆಸ್‌ನಲ್ಲೂ ಆಕಾಂಕ್ಷಿಗಳ ಪಟ್ಟಿ ಚಿಕ್ಕದಿಲ್ಲ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮುಖಂಡರಾದ ಪ್ರಸಾದ್‌ರಾಜ್‌ ಕಾಂಚನ್‌, ರಮೇಶ್‌ ಕಾಂಚನ್‌, ಕೃಷ್ಣಮೂರ್ತಿ ಆಚಾರ್ಯ, ಅಮೃತ್‌ ಶೆಣೈ, ಪ್ರಖ್ಯಾತ್‌ ಶೆಟ್ಟಿ, ಶಂಕರ್‌ ಕುಂದರ್‌, ದಿವಾಕರ್‌ ಕುಂದರ್‌ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಟಿಕೆಟ್‌ ಆಕಾಂಕ್ಷಿ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಜಾತಿ, ವರ್ಚಸ್ಸು ಮತ್ತು ಸಂಘಟನ ಶಕ್ತಿ, ಪಕ್ಷ ನಿಷ್ಠೆ ಇತ್ಯಾದಿಗಳನ್ನು ಪರಿಗಣಿಸಿ ಟಿಕೆಟ್‌ ಹಂಚಿಕೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next