Advertisement

Udupi: ಅಂಬಲಪಾಡಿ ಓವರ್‌ಪಾಸ್‌ ಕಾಮಗಾರಿ ಆರಂಭ

03:53 PM Dec 17, 2024 | Team Udayavani |

ಉಡುಪಿ: ಅಂಬಲಪಾಡಿ ಬೈಪಾಸ್‌ನಲ್ಲಿ ಓವರ್‌ಪಾಸ್‌ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿ ಸೋಮವಾರ ಆರಂಭವಾಗಿದ್ದು, ಈ ಮಧ್ಯೆ ಸ್ಥಳೀಯರು ವಾಹನ ದಟ್ಟಣೆ ಸಮರ್ಥ ನಿರ್ವಹಣೆ ಆಗಬೇಕು ಮತ್ತು ಅಗತ್ಯ ಸಂಚಾರ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದು ಘಟನೆ ಸ್ಥಳಕ್ಕೆ ಭೇಟಿ ನೀಡಿ ಆಗ್ರಹಿಸಿದರು.

Advertisement

ಗುತ್ತಿಗೆ ಪಡೆದ ಸಂಸ್ಥೆಯು ಬೆಳಗ್ಗೆಯಿಂದಲೇ ಹೆದ್ದಾರಿಯಲ್ಲಿ ಜೆಸಿಬಿ ಮೂಲಕ ಅಗೆಯುವ ಕಾರ್ಯ ನಡೆಸಿದೆ. ಹೆದ್ದಾರಿಯ ಚತುಷ್ಪಥ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಎರಡು ಕಡೆಗಳಲ್ಲಿ ಸರ್ವಿಸ್‌ ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾಗಿದೆ. ಕಾಮಗಾರಿ ಆರಂಭದ ಮೊದಲ ದಿನವೇ ಸರ್ವಿಸ್‌ ರಸ್ತೆಯಲ್ಲಿ ಟ್ರಾಫಿಕ್‌ ಉಂಟಾಗಿದೆ.

ಅಂಬಲಪಾಡಿ ಜಂಕ್ಷನ್‌ನಿಂದ ಬಲಾಯಿಪಾದೆ ಕಡೆಗೆ 500 ಮೀಟರ್‌ ಹಾಗೂ ಕರಾವಳಿ ಬೈಪಾಸ್‌ ಕಡೆಗೆ 500 ಮೀಟರ್‌ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಹೆದ್ದಾರಿ ಬ್ಲಾಕ್‌ ಮಾಡಿ, ಸರ್ವೀಸ್‌ ರಸ್ತೆ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಾಹನ ದಟ್ಟಣೆ ಆಗದಂತೆ ವಿಶೇಷ ಕ್ರಮ ತೆಗೆದುಕೊಳ್ಳುವ ಅಗತ್ಯವೂ ಇದೆ. ಅಲ್ಲಲ್ಲಿ, ಸೂಚನ ಫ‌ಲಕಗಳನ್ನು ಅಳವಡಿಸಿ, ಹೆಚ್ಚುವರಿ ಸಿಬಂದಿ ನಿಯೋಜನೆಯೂ ಮಾಡಬೇಕಾಗುತ್ತದೆ. ಕೆಲವು ದಿನಗಳ ಮಟ್ಟಿಗೆ ಹೆಚ್ಚುವರಿ ಸಂಚಾರಿ ಪೊಲೀಸರ ನಿಯೋಜನೆಯೂ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹೇಗಿರಲಿದೆ ಓವರ್‌ಪಾಸ್‌?
ಈ ಓವರ್‌ ಪಾಸ್‌ ಮೇಲೆ ವಾಹನ ಸಂಚಾರಿಸುವ ಹೆದ್ದಾರಿ ಇರಲಿದೆ. ಓವರ್‌ಪಾಸ್‌ ಒಳಭಾಗದಲ್ಲಿ ಎರಡು ಕಡೆ ತಲಾ 15 ಮೀಟರ್‌ ಅಗಲದ ರಸ್ತೆ ಬರಲಿದೆ. ರಸ್ತೆ ಪಕ್ಕದಲ್ಲಿ ಪಾದಚಾರಿಗಳ ಸಂಚಾರಕ್ಕೆ ಫ‌ುಟ್‌ಪಾತ್‌ ಕೂಡ ಬರಲಿದೆ. 23.53 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, 1.28 ಕಿ.ಮೀ.ಉದ್ದ ಮೇಲ್ಸೇತುವೆ ಇದಾಗಿದೆ. 5.5ಮೀ. ಎತ್ತರದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ ಕಾರ್ಲ ಕನ್‌ಸ್ಟ್ರಕ್ಷನ್‌ ಇದರ ಗುತ್ತಿಗೆ ವಹಿಸಿಕೊಂಡಿದೆ. ಮಳೆಗಾಲ ಹೊರತುಪಡಿಸಿ ಒಂದುವರೆ ವರ್ಷದ ಅವಧಿಯಲ್ಲಿ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ.

ಸಮರ್ಪಕ ನಿರ್ವಹಣೆ ಅಗತ್ಯ
ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಅದರ ಸಮರ್ಪಕ ನಿರ್ವಹಣೆ ಆಗಬೇಕು. ತಿರುವು ಎಲ್ಲಿ ಎನ್ನುವುದರ ಮಾರ್ಗಸೂಚಿ ಫ‌ಲಕಗಳನ್ನು ಅಳವಡಿಸಬೇಕು. ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಖುದ್ದು ಹಾಜರಿದ್ದು ಕಾಮಗಾರಿ ಪರಿಶೀಲಸಬೇಕು. ಸ್ಥಳೀಯರಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂಬುದು ಸೇರಿದಂತೆ ಸ್ಥಳೀಯ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next