ಉಡುಪಿ: ಕರಾವಳಿ ಬೈಪಾಸ್‌ನಲ್ಲಿ ರಚಿಸಿರುವ ಓವರ್‌ಪಾಸ್ ಮಾದರಿಯಲ್ಲಿ ವಾಹನ ಸಂಚಾರಕ್ಕೆ ಅಂಬಲಪಾಡಿ ಬೈಪಾಸ್‌ನಲ್ಲಿ ಓವರ್‌ಪಾಸ್ ನಿರ್ಮಿಸಲಾಗುತ್ತಿದ್ದು, ಇಂದಿನಿಂದ ಕಾಮಗಾರಿ ನಡೆಯಲಿದೆ.
ಅಂಬಲಪಾಡಿ ಜಂಕ್ಷನ್‌ನಿಂದ ಬಲಾಯಿಪಾದೆ ಕಡೆಗೆ 500 ಮೀಟರ್ ಹಾಗೂ ಕರಾವಳಿ ಬೈಪಾಸ್ ಕಡೆಗೆ 500 ಮೀಟರ್ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಹೆದ್ದಾರಿ ಬ್ಲಾಕ್ ಮಾಡಿ, ಸರ್ವೀಸ್ ರಸ್ತೆ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ವಾಹನಗಳ ಸುರಕ್ಷೆ ಹಾಗೂ ಭದ್ರತೆಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಟ್ರಾಫಿಕ್ ನಿರ್ವಹಣೆಗೆ ಅಗತ್ಯ ಬ್ಯಾರಿಕೇಡ್ ಮತ್ತು ಸೂಚನ ಫಲಕಗಳನ್ನು ಅಳವಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ನವೀನ್ ತಿಳಿಸಿದ್ದಾರೆ.
ಓವರ್‌ಪಾಸ್ ಒಳಭಾಗದಲ್ಲಿ ಎರಡು ಕಡೆ ತಲಾ 15 ಮೀಟರ್ ಅಗಲದ ರಸ್ತೆ ಬರಲಿದೆ. ರಸ್ತೆ ಪಕ್ಕದಲ್ಲಿ ಪಾದಚಾರಿಗಳ ಸಂಚಾರಕ್ಕೆ ಫುಟ್‌ಪಾತ್ ಕೂಡ ಬರಲಿದೆ.
ಮಳೆಗಾಲ ಹೊರತುಪಡಿಸಿ ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಪ್ರಾಧಿಕಾರ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.