Advertisement

Udupi: ಕೊರಗ ಸಮುದಾಯಕ್ಕೆ ಸಮಸ್ಯೆಗಳ ಸರಣಿ

04:33 PM Dec 28, 2024 | Team Udayavani |

ಉಡುಪಿ: ಭೂಮಿ, ಉದ್ಯೋಗ, ಹಕ್ಕುಪತ್ರಕ್ಕಾಗಿ ಕೊರಗರ ಸಮುದಾಯದವರು ಅದೆಷ್ಟೊ ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಕೊರಗರ ಬೇಡಿಕೆಗಳು ಇನ್ನೂ ಈಡೇರದೆ ಬಾಕಿ ಉಳಿದಿವೆ.

Advertisement

ಜಿಲ್ಲೆಯಲ್ಲಿ 4500 ಕೊರಗ ಕುಟುಂಬಗಳಿವೆ. 400 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. 1500 ಮಂದಿ ಉದ್ಯೋಗಕಾಂಕ್ಷಿಗಳಿದ್ದಾರೆ. ದ.ಕ 1500 ಕುಟುಂಬವಿದ್ದು, 200 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. 1000ದಷ್ಟು ಮಂದಿ ಉದ್ಯೋಗ ಆಕಾಂಕ್ಷಿಗಳಿದ್ದಾರೆ. ಕಾಸರಗೋಡು 500 ಕುಟುಂಬಗಳಿವೆ. 200 ಹಕ್ಕುಪತ್ರ ವಿತರಣೆಯಾಗಿದೆ. 80 ಮಂದಿ ಉದ್ಯೋಗ ಆಕಾಂಕ್ಷಿಗಳಿದ್ದಾರೆ, ಎಸ್‌ಎಸ್‌ಎಲ್‌ಸಿಯಿಂದ ಪದವಿ ಮೇಲಿನ ತನಕವೂ ವಿದ್ಯಾಭ್ಯಾಸ ಪಡೆದವರಿದ್ದಾರೆ.

ಸರಕಾರಿ ಉದ್ಯೋಗ ನೀಡುವಲ್ಲಿ ನಿರ್ಲಕ್ಷ್ಯ
ಸಮುದಾಯದಲ್ಲಿ ಸಾಕಷ್ಟು ಬದ ಲಾವಣೆಗಳಾಗಿವೆ. ಯುವಕರು ಶಿಕ್ಷಣ, ಉನ್ನತ ಉದ್ಯೋಗ ಪಡೆದಿದ್ದಾರೆ. ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಆದರೂ ಭೂಮಿ, ಉದ್ಯೋಗ, ಮೂಲ ಸೌಕರ್ಯ ಸಮಸ್ಯೆಗಳಿವೆ. ಸರಕಾರಿ ಉದ್ಯೋಗ ನೀಡುವಲ್ಲಿ ಸರಕಾರ ಈ ಸಮುದಾಯವನ್ನು ನಿರ್ಲಕ್ಷಿಸಿದೆ ಎನ್ನುವ ಆರೋಪವಿದೆ.

ವರದಿ ಜಾರಿಗೆ ಒತ್ತಾಯ
ಕೊರಗ ಸಮುದಾಯದ ನೇರ ನೇಮಕಾತಿ ಮೂಲಕ ಸರಕಾರಿ ಉದ್ಯೋಗ ಹಾಗೂ ಡಾ| ಮಹಮ್ಮದ್‌ ಪೀರ್‌ ವರದಿಯಂತೆ ಪ್ರತಿ ಕುಟುಂಬಕ್ಕೆ 2.5 ಎಕರೆ ಕೃಷಿ ಭೂಮಿ ನೀಡಬೇಕು ಎಂಬ ಒತ್ತಾಯವನ್ನು ಕೊರಗ ಸಮುದಾಯವು ಹಲವು ವರ್ಷಗಳಿಂದ ಸರಕಾರದ ಮುಂದಿಡುತ್ತ ಬಂದಿದೆ.

ರಾಷ್ಟ್ರಪತಿ ಆದೇಶ ಪಾಲನೆಯಾಗಿಲ್ಲ
2023.ಜು. 3ರಂದು ಬೆಂಗಳೂರಿಗೆ ಭೇಟಿ ನೀಡಿದ್ದ ಬುಡಕಟ್ಟು ಜನಾಂಗದವರೇ ಆದ ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಸಂಘಟನೆ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿತ್ತು. ಇದಕ್ಕೆ ಸ್ಪಂದಿಸಿದ ರಾಷ್ಟ್ರಪತಿ ಅವರು ಕೊರಗ‌ ಯುವ ಜನರಿಗೆ ಶೇ.100 ಉದ್ಯೋಗ ಭದ್ರತೆಗೆ ಕಾಲಬದ್ಧ ಕ್ರಿಯಾಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರವಂತೆ ಸಿಎಂ ಸಿದ್ಧರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ನಿರ್ದೇಶನ ನೀಡಿದ್ದರು. ಬಳಿಕ ಇಲಾಖೆಯ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್‌ ಅವರು ಶೇ. 100 ಉದ್ಯೋಗಕ್ಕೆ ಸಂಬಂದಿಸಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅವರು ವರ್ಗಾವಣೆ ಬಳಿಕ ಅದು ನಿಧಾನಗತಿಗೆ ಜಾರಿದ್ದು, ರಾಷ್ಟ್ರಪತಿಗಳ ನಿರ್ದೇಶನ ಪಾಲನೆಯಾಗಿಲ್ಲ.

Advertisement

ಅದೆಷ್ಟು ಬಾರಿ ಅಧಿಕಾರ ಅನುಭವಿಸಿಯೂ ಸುಖವಿಲ್ಲ
ನಮಗೆ ಹತ್ತಾರು ಎಕರೆ ಜಮೀನು ಕೊಡಿ ಎಂದು ಕೇಳುತ್ತಿಲ್ಲ. ತಲೆ ಮೇಲೊಂದು ಸೂರು. ಯುವಜನರಿಗೆ ಜೀವನೋಪಾಯಕ್ಕೊಂದು ಉದ್ಯೋಗ ನೀಡಿ ಎಂದಷ್ಟೆ ಕೇಳುತ್ತಿದ್ದೇವೆ. ನಮ್ಮ ಕೂಗು ಸರಕಾರಕ್ಕೆ ಕೇಳಿಸುತ್ತಲೇ ಇಲ್ಲ. ಅದೆಷ್ಟು ಬಾರಿ ಈ ನೆಲದಿಂದ ಶಾಸಕರಾದಿಯಾಗಿ ಸಂಸದರ ತನಕ, ಗ್ರಾ. ಪಂ. ಸದಸ್ಯರಾದಿಯಾಗಿ ಜಿ.ಪಂ ಅಧ್ಯಕ್ಷರ ತನಕ ಗೆದ್ದು ಅಧಿಕಾರ ಅನುಭವಿಸಿ ಹೋಗಿದ್ದಾರೋ ಲೆಕ್ಕವಿಲ್ಲ. ಆದರೂ ಒಬ್ಬರೆ ಒಬ್ಬರಾದರೂ ಕೊರಗರಿಗೆ ಭೂಮಿ, ಉದ್ಯೋಗ ಕೊಡಿಸುವಲ್ಲಿ ಪೂರ್ಣ ಪ್ರಮಾಣದ ಪ್ರಯತ್ನ ನಡೆಸಿಲ್ಲ ಎನ್ನುವ ಅಸಮಧಾನ ಅವರಲ್ಲಿದೆ.

2023ರಲ್ಲಿ ನಡೆದಿತ್ತು ಅಹೋರಾತ್ರಿ ಧರಣಿ
ಜಿಲ್ಲೆಯಲ್ಲಿ ಕೊರಗ ಸಮುದಾಯದ ಬೇಡಿಕೆಗಳಿಗೆ ಆಗ್ರಹಿಸಿ ಹಕ್ಕೊತ್ತಾಯ ಅರ್ಜಿ ಸಲ್ಲಿಸಿದ ಹಲವು ವರ್ಷಗಳಾದರೂ ಬೇಡಿಕೆ ಈಡೇದರೆ ಇದ್ದಾಗ, 2023ರಲ್ಲಿ ಡಿಸಿ ಕಚೇರಿ ಬಳಿ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಬೇಡಿಕೆ ಈಡೇರಿಕೆಯ ಭರವಸೆಯೂ ದೊರಕಿತ್ತು. ಆದರೆ ಬೇಡಿಕೆ ಪೂರ್ಣವಾಗಿ ಈಡೇರಿಲ್ಲ.

ಅವಕಾಶ ಇದ್ದಲ್ಲಿ ಕಲ್ಪಿಸಿದ್ದೇವೆ
ಸರಕಾರದ ಸೂಚನೆಯನ್ವಯ ಜಿಲ್ಲಾಧಿಕಾರಿಗಳು ಈ ಹಿಂದೆ ಖಾಸಗಿ ಉದ್ಯೋಗ ಕಲ್ಪಿಸುವಂತೆ ಆದೇಶ ನೀಡಿದ್ದರು. ಸರಕಾರಿ, ಖಾಸಗಿ ಎರಡೂ ರಂಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದೇವೆ. ಶೇ.100 ಸರಕಾರಿ ಉದ್ಯೋಗ ಅವರ ಮೂಲ ಬೇಡಿಕೆ. ಇದು ಸರಕಾರ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ.
– ನಾರಾಯಣ ಸ್ವಾಮಿ, ಯೋಜನಾ ಸಮನ್ವಯಾಧಿಕಾರಿ ಐಟಿಡಿಪಿ

ಆಲಿಸಿದರೆ ಸಾಲದು ಆಗಬೇಕು
ಕೊರಗರ ಬೇಡಿಕೆ ಈಡೇರಿಕೆಗೆ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಈಡೇರಿಕೆ ಭರವಸೆ ಸರಕಾರದಿಂದ ಲಭಿಸುತ್ತದೆ. ಆದರೇ ಈಡೇರುತಿಲ್ಲ. ಸುಶಿಕ್ಷಿತ ಮಕ್ಕಳಿಗೆ ಸರಕಾರದಿಂದ ಉದ್ಯೋಗ ದೊರಕುವಂತಾಗಬೇಕು. ಕೂಗು ಸರಕಾರ ಆಲಿಸಿದರೆ ಸಾಲದು, ಈಡೇರಿಸಬೇಕು.
-ಸುಶೀಲಾ ನಾಡ, ಅಧ್ಯಕ್ಷೆ. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ-ಕೇರಳ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next