ಉಡುಪಿ: ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥಶ್ರೀಪಾದರ ಚತುರ್ಥ ಆರಾಧನೋತ್ಸವದ ಪ್ರಯುಕ್ತ ಪೇಜಾವರ ಮಠದಲ್ಲಿ ರವಿವಾರ ಗುರುಸಂಸ್ಮರಣೆ ಜರಗಿತು.
ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದಿವ್ಯ ಪಾದುಕೆ ಮತ್ತು ಸಾಲಂಕೃತ ಭಾವಚಿತ್ರಕ್ಕೆ ಮಂಗಳಾರತಿ ಬೆಳಗಿದರು.
ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹಿಸಿ, ವಿಶ್ವೇಶತೀರ್ಥ ಶ್ರೀಪಾದರು ನಡೆಸಿದ ಲೋಕೋತ್ತರ ಕಾರ್ಯಗಳು ಮತ್ತು ಆ ನೆಲೆಯಲ್ಲೇ ಪಡೆದ ಅಪಾರ ಮನ್ನಣೆಗಳನ್ನು ಸ್ಮರಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಿಂದೆ ಅವರ ದೂರದೃಷ್ಟಿ ಮತ್ತು ಕ್ರತುಶಕ್ತಿಯ ಪರಿಣಾಮದಿಂದ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇಂತಹ ಮಹಾನುಭಾವರ ಸ್ಮರಣೆ ಅತ್ಯಂತ ಶ್ರೇಯಸ್ಕರ. ದೇಶ ಸೇವೆ ಈಶ ಸೇವೆಯಲ್ಲಿ ಸಾರ್ಥಕ್ಯ ಕಂಡ ಶ್ರೇಷ್ಠ ತಪಸ್ವಿಗಳು ಎಂದು ತಿಳಿಸಿ ಹತ್ತು ಬಾರಿ ರಾಮತಾರಕ ಮಂತ್ರವನ್ನು ಸಾಮೂಹಿಕವಾಗಿ ಬೋಧಿಸಿದರು.
ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚಿಸಿ, ಶ್ರೀಪಾದರು ಪರಮಕಾರುಣ್ಯಮೂರ್ತಿ ಯಾಗಿದ್ದು ಸಜ್ಜನ ಮತ್ತು ವಿದ್ವತ್ಪಕ್ಷಪಾತಿಯಾಗಿದ್ದರು. ಕಿರಿಯರು ಹಿರಿಯರ ಮೇಲೆ ಏಕಪ್ರಕಾರದ ಪ್ರೀತಿ, ಅಭಿಮಾನಗಳನ್ನು ಧಾರೆಯೆರೆದಿರುವುದಕ್ಕೆ ತಾನೇ ಸಾಕ್ಷಿ ಎಂದರು.
ಮಠದ ದಿವಾನರಾದ ಎಂ. ರಘುರಾಮಾಚಾರ್ಯ, ಸಿಇಒ ಸುಬ್ರಹ್ಮಣ್ಯ ಭಟ್, ಮಠದ ವಿದ್ಯಾರ್ಥಿಗಳು ಶ್ರೀಪಾದರಿಗೆ ಭಕ್ತಿ ಗೌರವ ಸಮರ್ಪಿಸಿದರು. ವಿದ್ವಾಂಸರಾದ ರಾಮಚಂದ್ರ ಭಟ್, ಗೋಪಾಲ ಜೋಯಿಸ್, ಬಾಲಕೃಷ್ಣ ಭಟ್ ನೀರೆ, ಹೆರ್ಗ ಹರಿಪ್ರಸಾದ, ನರಸಿಂಹ ಭಟ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಹಿಂಪ ಮುಖಂಡ ಪ್ರೊ| ಎಂ.ಬಿ. ಪುರಾಣಿಕ್, ಮಾಜಿ ಶಾಸಕ ರಘುಪತಿ ಭಟ್, ಪ್ರಮುಖರಾದ ಉಮೇಶ್ ರಾವ್, ಮುರಲಿ ಕಡೆಕಾರ್, ಎಸ್.ವಿ.ಭಟ್, ಗಂಗಾಧರ ರಾವ್, ಪದ್ಮನಾಭ ಭಟ್, ರಾಘವೇಂದ್ರ ಕಿಣಿ, ಮಠದ ಕೊಟ್ಟಾರಿ ಸಂತೋಷ ಭಟ್, ವ್ಯವಸ್ಥಾಪಕ ಇಂದುಶೇಖರ, ವೇದವ್ಯಾಸ ಭಟ್, ಕೃಷ್ಣ ಸಾಮಗ, ಸುಬ್ರಹ್ಮಣ್ಯ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು.