Advertisement

ಉಡಾನ್‌: ಸ್ಪೈಸ್‌ಜೆಟ್‌ ವಿಮಾನಯಾನ ಆರಂಭ

06:40 AM May 15, 2018 | |

ಹುಬ್ಬಳ್ಳಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಉಡಾನ್‌ (ಉಡೇ ದೇಶ ಕಾ ಆಮ… ನಾಗರಿಕ) 2ನೇ ಹಂತದ ಅಡಿ ಸ್ಪೈಸ್‌ ಜೆಟ್‌ ಕಂಪೆನಿ ಸೋಮವಾರ ನಗರದಿಂದ ಬೆಂಗಳೂರು, ಮುಂಬಯಿ, ಚೆನ್ನೈ,ಹೈದರಾಬಾದ್‌ಗೆ ವಿಮಾನಯಾನ ಸೇವೆ ಆರಂಭಿಸಿತು.

Advertisement

ಉಡಾನ್‌ ಯೋಜನೆಯಡಿ ಬೆಳಗ್ಗೆ 9.05ಕ್ಕೆ  ಚೆನ್ನೈನಿಂದ ಹುಬ್ಬಳ್ಳಿಗೆ ಆಗಮಿಸಿದ ವಿಮಾನ 9.25ಕ್ಕೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿತು. ಕರ್ನಾಟಕ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರು ವಿಮಾನ ಹಾರಾಟಕ್ಕೆ ಚಾಲನೆ ನೀಡಲಿಲ್ಲ. ಅವರು ಚೆನ್ನೈ ನಗರದಿಂದ ಹುಬ್ಬಳ್ಳಿಗೆ ಬಂದ ಮೊದಲ ವಿಮಾನದ ಪ್ರಯಾಣಿಕರನ್ನು ಸಾಂಕೇತಿಕವಾಗಿ ಬರಮಾಡಿಕೊಂಡರು. ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಶುಭ ಕೋರಿದರು.

ಬೆಂಗಳೂರು, ಮುಂಬಯಿಯಂಥ ಮೆಟ್ರೋ ನಗರಗಳನ್ನು ಹೊರತುಪಡಿಸಿ ಎರಡನೇ ಹಂತದ (ಟು ಟೈರ್‌ ಸಿಟಿ) ವಾಣಿಜ್ಯ ಹಾಗೂ ಜಿಲ್ಲಾ ಕೇಂದ್ರಗಳನ್ನು ಬೆಸೆಯುವ ಪ್ರಾದೇಶಿಕ ಸಂಪರ್ಕ ಯೋಜನೆಯೆ ಉಡಾನ್‌. ಈ ಯೋಜನೆಯಡಿ ಆಯ್ಕೆಯಾದ ವಿಮಾನ ಸಂಸ್ಥೆಗಳಿಗೆ ಶೇ. 50ರಷ್ಟು ಪ್ರಯಾಣಿಕರ ಅರ್ಧ ಟಿಕೆಟ್‌ ವೆಚ್ಚವನ್ನು ಕೇಂದ್ರ ಸರಕಾರ ಭರಿಸಲಿದೆ. ಉಳಿದ ಶೇ. 50ರಷ್ಟು ಸೀಟುಗಳ ಟಿಕೆಟ್‌ ದರವನ್ನು ಸಂಸ್ಥೆಯೇ ನಿಗದಿಪಡಿಸುತ್ತದೆ. ಇದರಿಂದ ಎಲ್ಲ ವಿಮಾನಗಳು ಶೇ. ಅರ್ಧಕ್ಕಿಂತ ಹೆಚ್ಚು ಭರ್ತಿಯಾಗಿರುತ್ತವೆ. ಹಾಗಾಗಿ ಸೇವೆ ಸ್ಥಗಿತ ಸಾಧ್ಯತೆ
ಕಡಿಮೆಯಾಗಿರುತ್ತದೆ. ಮುಂಬರುವ ದಿನಗಳಲ್ಲಿ ಉಡಾನ್‌ ಯೋಜನೆಯಡಿ ಹುಬ್ಬಳ್ಳಿಯಿಂದ ವಿವಿಧ ನಗರಗಳ ನಡುವೆ 15 ಹೊಸ ವಿಮಾನಗಳು ಸಂಚರಿಸಲಿವೆ. ಸದ್ಯ ಸ್ಪೈಸ್‌ಜೆಟ್‌ ಹಾಗೂ ಇಂಡಿಗೋ ಸಂಸ್ಥೆಗಳು ಸಜ್ಜಾಗಿವೆ. 

ಪ್ರಯಾಣ ದರ
ಹುಬ್ಬಳ್ಳಿಯಿಂದ ಬೆಂಗಳೂರಿಗೆ 2,713 ರೂ., ಬೆಂಗಳೂರಿನಿಂದ ಹುಬ್ಬಳ್ಳಿಗೆ 2,963 ರೂ., ಹುಬ್ಬಳ್ಳಿಯಿಂದ ಮುಂಬಯಿಗೆ 3,240 ರೂ., ಮುಂಬಯಿಯಿಂದ ಹುಬ್ಬಳ್ಳಿಗೆ 3,326 ರೂ.,ಚೆನ್ನೈನಿಂದ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯಿಂದ ಚೆನ್ನೈಗೆ 2,970 ರೂ.,ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹಾಗೂ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ 2,329 ರೂ. ನಿಗದಿಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next