Advertisement
ವಿವಿಧ ಎಕ್ಸಿಟ್ ಪೋಲ್ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಗೆ ಸ್ಪಷ್ಟ ಜಯವನ್ನು ಸೂಚಿಸಿದ್ದ ಹೊರತಾಗಿಯೂ, ರಾಜ್ಯದ 48 ಲೋಕಸಭಾ ಕ್ಷೇತ್ರಗಳಲ್ಲಿ 29 ರಲ್ಲಿ ಮಹಾ ವಿಕಾಸ್ ಅಘಾಡಿ (MVA) ಜಯ ಸಾಧಿಸಿದೆ.
Related Articles
Advertisement
ಬಿಜೆಪಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಮಿತ್ರಪಕ್ಷಗಳಾದ ಶಿಂಧೆ ಶಿವಸೇನೆ 14 ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಐದರಲ್ಲಿ ಸ್ಪರ್ಧಿಸಿತ್ತು.
ಮತ್ತೊಂದೆಡೆ, ಮಹಾ ವಿಕಾಸ್ ಅಘಾಡಿ ಶಿವಸೇನೆ (ಯುಬಿಟಿ) 21 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 17 ಮತ್ತು ಎನ್‌ಸಿಪಿ (ಶರದ್ ಪವಾರ್) 10 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಮಹಾರಾಷ್ಟ್ರದಲ್ಲಿ ಐದು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಇಂಡಿಯಾ ಮೈತ್ರಿಕೂಟ ಆಡಳಿತಾರೂಢ ಮೈತ್ರಿ ಕೂಟಕ್ಕೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದೆ.
2019 ರಲ್ಲಿ ಎನ್ ಡಿಎ 41 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅಖಂಡ ಶಿವಸೇನೆ 18 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 23 ಸ್ಥಾನ ತನ್ನದಾಗಿಸಿಕೊಂಡಿತ್ತು. ಈ ಬಾರಿ ಭಾರೀ ನಷ್ಟ ಅನುಭವಿಸಿದೆ. 1 ಸ್ಥಾನ ಗೆದ್ದಿದ್ದ ಕಾಂಗ್ರೆಸ್ 11 ಕ್ಕೇರಿದೆ.
ಮೋದಿಯವರಿಗೆ ಬೀಳ್ಕೊಡುಗೆ: ಸಂಜಯ್ ರಾವತ್ ಕಿಡಿ
ಶಿವಸೇನೆ ಯುಬಿಟಿ ಬಣದ ನಾಯಕ ಸಂಜಯ್ ರಾವತ್ ಮಾತನಾಡಿ “ಜನರು ನರೇಂದ್ರ ಮೋದಿಯನ್ನು ಕಳೆದುಕೊಂಡಿದ್ದಾರೆ. ಬಿಜೆಪಿಗೆ ಬಹುಮತವಿಲ್ಲ. ಬಿಜೆಪಿ ಸೋತಿದೆ. ಕಳೆದ 10 ವರ್ಷಗಳಿಂದ ಸಾರ್ವಜನಿಕರನ್ನು ಅವರು ಮೂರ್ಖರನ್ನಾಗಿಸಿದ್ದಾರೆ. ಅಯೋಧ್ಯೆಯಲ್ಲಿ ಬಿಜೆಪಿ ಸೋತಿದೆ. ಮೋದಿಯವರು ಇಷ್ಟು ದೊಡ್ಡ ಕಾರ್ಯಕ್ರಮ ಮಾಡಿದ ಕಡೆ ಬಿಜೆಪಿ ಸೋತಿದೆ. ದೇಶದ ಜನರಿಂದ ಮೋದಿಯವರಿಗೆ ಬೀಳ್ಕೊಡುಗೆ ನೀಡಲಾಗಿದೆ. 2014, 2019ರಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದಿತ್ತು. ಆದರೆ 2024 ರಲ್ಲಿ ಬಿಜೆಪಿಗೆ ಬಹುಮತ ಬರಲಿಲ್ಲ, ಇದು ಮೋದಿ ಮತ್ತು ಅಮಿತ್ ಶಾ ಅವರ ಸೋಲು’ ಎಂದು ಹೇಳಿಕೆ ನೀಡಿದ್ದಾರೆ.
ಸುಪ್ರಿಯಾ ಸುಳೆಗೆ ಜಯ
ಬಾರಾಮತಿಯಲ್ಲಿ ‘ಪವಾರ್’ಗಳ ಕದನದಲ್ಲಿ ಎನ್‌ಸಿಪಿ (ಶರದ್ ಪವಾರ್) ನಾಯಕಿ ಸುಪ್ರಿಯಾ ಸುಳೆ ಅವರು ಬಾರಾಮತಿ ಕ್ಷೇತ್ರದಿಂದ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ವಿರುದ್ಧ 20,000 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.