ಮುಂಬೈ: ಮಹಾರಾಷ್ಟ್ರದಲ್ಲಿ ಅಪರಾಧ ಪ್ರಕರಣಗಳ ತನಿಖೆಗಾಗಿ ಕೇಂದ್ರ ತನಿಖಾ ದಳಕ್ಕೆ(ಸಿಬಿಐ) ನೀಡಿದ ಸಾಮಾನ್ಯ ಒಪ್ಪಿಗೆಯನ್ನು ಉದ್ಧವ್ ಠಾಕ್ರೆ ಸರ್ಕಾರ ಬುಧವಾರ ಹಿಂತೆಗೆದುಕೊಂಡಿದೆ. ಹೀಗಾಗಿ ಇನ್ನು ಮುಂದೆ ಸಿಬಿಐ ಯಾವುದೇ ತನಿಖೆ ನಡೆಸಬೇಕಾದರೂ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ.
ಈಗಾಗಲೇ ಬಿಜೆಪಿ ಅಧಿಕಾರದಲ್ಲಿಲ್ಲದ ಮೂರು ರಾಜ್ಯಗಳಾದ ರಾಜಸ್ಥಾನ, ಛತ್ತಿಸ್ ಗಡ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಬಿಐಗೆ ಪ್ರಕರಣಗಳನ್ನು ತನಿಖೆ ನಡೆಸಲು ಅವಕಾಶ ನೀಡುವ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯಲಾಗಿದೆ.
ಆದರೇ ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಸಿಬಿಐ ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿದು ಬಂದಿದೆ. ಈ ತನಿಖೆ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ನಡೆಯುತ್ತಿದ್ದು, ರಾಜ್ಯವು ತನ್ನ ಒಪ್ಪಿಗೆಯನ್ನು ನೀಡುವ ಅಗತ್ಯವಿರುವ ನಿಬಂಧನೆಗಳ ಅಡಿಯಲ್ಲಿ ಅಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: ಉದಯವಾಣಿ ಸಂದರ್ಶನ: ಶಕ್ತಿ ತುಂಬಿದವರ ಕತ್ತು ಕೊಯ್ಯುವುದು ಕಾಂಗ್ರೆಸ್ ಚಾಳಿ!
ಲಖನೌದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಜಾಹೀರಾತು ಏಜೆನ್ಸಿಯೊಂದು ಟಿಆರ್‌ಪಿ ಹಗರಣದ ಕುರಿತು ದೂರು ದಾಖಲಿಸಿದ ನಂತರ ಉತ್ತರ ಪ್ರದೇಶ ಪೊಲೀಸರು ಶಿಫಾರಸ್ಸಿನ ಹಿನ್ನಲೆಯಲ್ಲಿ ಸಿಬಿಐ ತಂಡ ಪ್ರಕರಣದ ತನಿಖೆಗಿಳಿದಿತ್ತು. ಇದರ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರ ಹೊರಬಿದ್ದಿದೆ.