Advertisement

ಉದ್ಯಾವರ: ಗುಂಡಿಗೆ ಕಲ್ಲು, ವಾಹನ ಸವಾರರಿಗೆ ಸಂಕಟ

08:21 PM Nov 08, 2021 | Team Udayavani |

ಕಟಪಾಡಿ: ಉದ್ಯಾವರ ಪೇಟೆಯಿಂದ ಪಿತ್ರೋಡಿ ಸಂಪರ್ಕದ ಮುಖ್ಯ ರಸ್ತೆಯಲ್ಲಿನ ಹೊಂಡ ಗುಂಡಿಗಳ ಪೈಕಿ ಶಾಂತಿ ನಗರದ ಬಳಿಯಲ್ಲಿ ಬೃಹತ್‌ ಗಾತ್ರದ ಹೊಂಡವನ್ನು ಮುಚ್ಚುವ ಉದ್ದೇಶದಿಂದ ಕಳೆದ ಕೆಲವು ದಿನಗಳ ಹಿಂದೆ ಕಲ್ಲುಗಳನ್ನು ತಂದು ಸುರಿಯಲಾಗಿದೆ. ಆದರೆ ಇದೀಗ ಆ ಕಲ್ಲುಗಳ ರಾಶಿಯಿಂದಾಗಿ ವಾಹನ ಸವಾರರು ಸಂಕಟ ಪಡುವಂತಾಗಿದೆ.

Advertisement

ಗುಂಡಿಗೆ ತಂದು ಸುರಿಯಲಾಗಿರುವ ಕಲ್ಲುಗಳನ್ನು ಮಣ್ಣು ಹಾಕಿ ಸಮತಟ್ಟು ಮಾಡದೇ ಇದ್ದು, ಮಳೆಯ ಸಂದರ್ಭ ನೀರು ತುಂಬಿ ಅಂದಾಜು ತಪ್ಪಿದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅಂತೂ ದಿನವಹಿ ಅವಾಂತರ ಸೃಷ್ಟಿಸುತ್ತಿರುವ ಈ ಗುಂಡಿಗಳಿಗೆ ಮುಕ್ತಿಯನ್ನು ಯಾವಾಗ ಕಲ್ಪಿಸುತ್ತಾರೆ ಎಂಬುದು ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿದ್ದು, ನಿತ್ಯ ಈ ಭಾಗದಲ್ಲಿ ಸಂಚರಿಸುವ ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಜನತೆ ಆಗ್ರಹಿಸುತ್ತಿದ್ದಾರೆ

ಜನಾಕ್ರೋಶ
ಪಂಚಾಯತ್‌ ಕಚೇರಿ, ಖಾಸಗಿ ಅನುದಾನಿತ ಶಾಲೆಗಳು, ಮೀನು ಮಾರುಕಟ್ಟೆಗಳು, ರಿಕ್ಷಾ ತಂಗುದಾಣ, ಜನವಸತಿ ಪ್ರದೇಶಗಳು, ಮೆಸ್ಕಾಂ ಸಬ್‌ಸ್ಟೇಶನ್‌, ಪಶು ಚಿಕಿತ್ಸಾಲಯಗಳ ನಿತ್ಯ ಸಂಪರ್ಕಕ್ಕೆ ಅಗತ್ಯ ರಸ್ತೆಯಾಗಿ ಬಳಕೆಯಾಗುತ್ತಿದ್ದು, ಸದಾ ವಾಹನ ದಟ್ಟಣೆ ಮತ್ತು ಜನ ನಿಬಿಡ ಸಂಚಾರವನ್ನು ಹೊಂದಿರುತ್ತದೆ. ಪ್ರಯಾಣಿಕರ ಬಸ್‌ ಕೂಡ ನಿಗದಿತ ವೇಳೆಯಂತೆ ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿದೆ. ಇಷ್ಟೊಂದು ಅತ್ಯಾವಶ್ಯಕ ಬಳಕೆಯುಳ್ಳ ರಸ್ತೆಯ ಅವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಶಾಸಕರಾದಿ ಜನಪ್ರತಿನಿಧಿಗಳು ಎಚ್ಚೆತ್ತು ಕೂಡಲೇ ಸ್ಪಂದಿಸ ಬೇಕಾದ ಆವಶ್ಯಕತೆ ಇದೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಚನ ಬಿಡುಗಡೆ ಮಾಡಿದ ಸಿಎಂ

Advertisement

ನಿತ್ಯ ಸಂಕಷ್ಟ
ಈ ಅವ್ಯವಸ್ಥೆಯ ವಿರುದ್ಧ ಜನಾಕ್ರೋಶ ಇದೆ. ಕೂಡಲೇ ಕಾಮಗಾರಿಯನ್ನು ಪೂರೈಸಿ ಹಾಗೂ ಗುಂಡಿ ಬಿದ್ದಿರುವ ರಸ್ತೆಯ ಭಾಗಗಳನ್ನು ಕೂಡಲೇ ಇಲಾಖೆಯು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿ ಇಲಾಖೆಯ ಅಧಿಕಾರಿಗಳದ್ದು. 2019ರಲ್ಲಿ ಕಾಪು ಕ್ಷೇತ್ರದ ಶಾಸಕರು ಗುದ್ದಲಿ ಪೂಜೆಯನ್ನು ನಡೆಸಿ 7 ಲಕ್ಷ ರೂ. ಪ್ಯಾಚ್‌ವರ್ಕ್‌ ಕಾಮಗಾರಿ ನಡೆದಿದ್ದು, ಒಂದೆರೆಡು ಮಳೆಗೆ ಮತ್ತೆ ಹೊಂಡಗುಂಡಿ ಕಾಡುತ್ತಿತ್ತು. ಇದೀಗ 1.5 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಇದೇ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಕೇವಲ ಸೇತುವೆ ನಿರ್ಮಾಣ ಹಂತಕ್ಕೆ ನಿಂತಿದ್ದು ಗ್ರಾಮಸ್ಥರ ನಿತ್ಯ ಸಂಕಷ್ಟ ಮುಕ್ತಿ ಕಾಣದಂತಾಗಿದೆ.
– ಲಾರೆನ್ಸ್‌ ಡೇಸಾ, ಉದ್ಯಾವರ ಗ್ರಾ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next