ಬದಿಯಡ್ಕ: ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಮಾತೃಭಾಷಾ ಶಿಕ್ಷಣವು ಮಹತ್ವದ ಪಾತ್ರ ವಹಿಸುತ್ತದೆ. ಅರಿವಿನ ವಿಸ್ತಾರವನ್ನು ಗಟ್ಟಿಗೊಳಿಸಿ ಸುಲಭವಾಗಿ ವಿಷಯಗಳನ್ನು ಅರ್ಥೈಸಲು ಸಹಾಯಕವಾಗುತ್ತದೆ. ಮಾತ್ರವಲ್ಲದೆ ಭಾಷೆಯ ಮೇಲಿನ ಹಿಡಿತದಿಂದಾಗಿ ಹೆಚ್ಚಿನ ಆಲೋಚನೆ ಹಾಗೂ ಕ್ರಿಯಾಶೀಲ ಬರವಣೆಗೆಗಳಿಗೂ ಪ್ರೇರಣೆಯಾಗುತ್ತದೆ. ಮುಕ್ತ ಸಂವಹನ ಹಾಗೂ ಚರ್ಚೆಗಳಿಗೆ ಬೇಕಾದ ಧೈರ್ಯವನ್ನೂ ತುಂಬುತ್ತದೆ. ಮಕ್ಕಳಿಗೆ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸಲು ಇದು ಪ್ರೇರಣೆಯಾಗುತ್ತದೆ.
ಮಾನ್ಯದ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಧುರ ಕನ್ನಡ-2017ಕಾರ್ಯಕ್ರಮವು ಜರಗಿತು. ಇದರ ಅಂಗವಾಗಿ ಶಾಲಾ ಮಕ್ಕಳಿಗೆ ಪ್ರತಿದಿನ ಐದು ಉದಯವಾಣಿ ಕನ್ನಡ ದಿನಪತ್ರಿಕೆಗಳನ್ನು ಈ ಅಧ್ಯಯನ ವರ್ಷಪೂರ್ತಿ ನೀಡಲಾಗುವುದು ಎಂದು ಪ್ರಾಯೋಜಕರಾದ ಮಧುಚಂದ್ರ ಮಾನ್ಯ ಹೇಳಿದರು. ಸಮಾರಂಭವನ್ನು ಬದಿಯಡ್ಕ ಗ್ರಾಮ ಪಂಚಾಯತ್ ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಮಾನ್ಯ ಉದ್ಘಾಟಿಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಅಧ್ಯಾಪಿಕೆ ಆಶಾಕಿರಣ, ಮಾತೃ ಸಮಿತಿ ಅಧ್ಯಕ್ಷೆ ಎಲಿಜಾ ಡಿ’ಸೋಜಾ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಎನ್. ಗೋವಿಂದನ್ ನಂಬೂದಿರಿ ಸ್ವಾಗತಿಸಿದರು. ಶಿಕ್ಷಕ ವರ್ಗದ ಕಾರ್ಯದರ್ಶಿ ರಿಜು ಎಸ್.ಎಸ್. ವಂದಿಸಿದರು. ಅಧ್ಯಾಪಕರಾದ ಸುರೇಂದ್ರನ್ ಎಂ.ಎನ್. ಕಾರ್ಯಕ್ರಮ ನಿರೂಪಿಸಿದರು.
ಮಾನ್ಯ ಶಾಲೆಯು ಸದಾ ಯಾವುದಾದರೊಂದು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆಯಾಗುತ್ತಿರುವುದು ಸಂತೋಷದ ವಿಷಯ. ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯವು ಉತ್ತಮ ಗುಣಮಟ್ಟದಲ್ಲಿ ನಡೆಯುತ್ತಿದೆ. ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಪ್ರಿಯವಾಗುತ್ತಿರಲು ಅಧ್ಯಾಪಕ ವೃಂದದ ಸತತ ಶ್ರಮ, ವಿದ್ಯಾರ್ಥಿಗಳ ಹಾಗೂ ರಕ್ಷಕರ ಸಹಕಾರವೇ ಕಾರಣ. ಇದು ಒಂದು ಉತ್ತಮ ಮಾದರಿ ಶಾಲೆಯಾಗಿ ಬೆಳೆದು ಬರುತ್ತಿದೆ ಎನ್ನುವುದಕ್ಕೆ ಇತ್ತೀಚೆಗೆ ಶಾಲೆಯಲ್ಲಿ ನಡೆದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪಯಣದ ಉದ್ಘಾಟನಾ ಕಾರ್ಯಕ್ರಮವೇ ಸಾಕ್ಷಿ
– ಶ್ಯಾಮ್ ಪ್ರಸಾದ್ ಮಾನ್ಯ ಬದಿಯಡ್ಕ ಗ್ರಾ.ಪಂ.
ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ