Advertisement

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

12:56 AM Nov 29, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 36.66 ಕಿ.ಮೀ. ಕರಾವಳಿ ಪ್ರದೇಶದಲ್ಲಿ 17.74 ಕಿ.ಮೀ. ವ್ಯಾಪ್ತಿಯಲ್ಲಿ ಕಡಲ್ಕೊರೆತ ಸಂಭವಿಸುತ್ತಿರುವುದಾಗಿ ಕೇಂದ್ರ ಪರಿಸರ ಖಾತೆ ಸಚಿವ ಕೀರ್ತಿವರ್ಧನ್‌ ಸಿಂಗ್‌ ಅವರು ಹೇಳಿದ್ದಾರೆ.

Advertisement

ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಸಂಸತ್‌ನ ಚಳಿಗಾಲದ ಅಧಿವೇಶದಲ್ಲಿ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಸಚಿವರು, ದಕ್ಷಿಣ ಕನ್ನಡದ ಸಮುದ್ರ ತೀರದ ಶೇ.48.4ರಷ್ಟು ಭಾಗದಲ್ಲಿ ಸಮುದ್ರ ಕೊರೆತ ಉಂಟಾಗುತ್ತಿದೆ. ಭಾರತೀಯ ರಾಷ್ಟ್ರೀಯ ಸಮುದ್ರ ಮಾಹಿತಿ ಹಾಗೂ ಸೇವಾ ಕೇಂದ್ರ 1990ರಿಂದ 2018ರ ವರೆಗೆ ಸಂಗ್ರಹಿಸಿರುವ ಉಪಗ್ರಹ ಆಧಾರಿತ ಮಾಹಿತಿ ಅನ್ವಯ ವಿವರಣೆ ನೀಡಿದ್ದಾರೆ.

ಅದರಂತೆ ದ.ಕ. ಹಾಗೂ ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ಕಡಲ್ಕೊರೆತ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಕೇವಲ 8.02 ಕಿ.ಮೀ. ದೂರ ಮಾತ್ರ ಕೊರೆತ ಇಲ್ಲದೆ ಸುರಕ್ಷಿತವಾಗಿದೆ.

ಉಡುಪಿ ಜಿಲ್ಲೆಯ 100.71 ಕಿ.ಮೀ. ಸಮುದ್ರ ತೀರದಲ್ಲಿ 34.96 ಕಿ.ಮೀ. ಉದ್ದಕ್ಕೆ ಕಡಲ್ಕೊರೆತ ಉಂಟಾಗಿದೆ. ಉತ್ತರ ಕನ್ನಡ ಒಳಗೊಂಡಂತೆ ಕರ್ನಾಟಕದ 313 ಕಿ.ಮೀ. ಕರಾವಳಿ ತೀರ ಪ್ರದೇಶದ ಪೈಕಿ ಒಟ್ಟು 74.34 ಕಿ.ಮೀ. ಸಹಿತ ಒಟ್ಟು ತೀರ ಪ್ರದೇಶದ ಶೇ.23.7ರಷ್ಟು ಭಾಗವು ಕಡಲ್ಕೊರೆತದ ಹೊಡೆತಕ್ಕೆ ಸಿಲುಕಿರುವುದಾಗಿ ಸಚಿವರು ವಿವರಿಸಿದ್ದಾರೆ.

ರಾಜ್ಯದ ಕರಾವಳಿಯಲ್ಲಿ ಉಂಟಾಗುತ್ತಿರುವ ಕಡಲ್ಕೊರೆತ ತಡೆಯುವುದಕ್ಕೆ ಸಾಕಷ್ಟು ಕ್ರಮ ಗಳನ್ನು ತೆಗೆದುಕೊಳ್ಳಲಾಗಿದೆ. 2023ರ ಕೇಂದ್ರ ಬಜೆಟ್‌ನಲ್ಲಿ ಕಾಂಡ್ಲಾ ವನ ಬೆಳೆಯುವುದಕ್ಕೆ ಮಿಸ್ಟಿ ಯೋಜನೆ ಘೋಷಿಸಲಾಗಿತ್ತು. ಅಲ್ಲದೆ ಕರಾವಳಿ ಪ್ರದೇಶದಲ್ಲಿ ವ್ಯಾಪಕವಾಗುತ್ತಿರುವ ಸಮುದ್ರ ಕೊರೆತ ತಡೆಗಟ್ಟಲು ರಾಜ್ಯ ಸರಕಾರಕ್ಕೂ ಕೇಂದ್ರ ದಿಂದ ತಾಂತ್ರಿಕ ನೆರವು ಹಾಗೂ ಅಗತ್ಯ ಸಲಹೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Advertisement

ಕರಾವಳಿಯಲ್ಲಿ ಸಮುದ್ರ ಕೊರೆತ ಸಹಿತ ವಿವಿಧ ರೀತಿಯ ಪ್ರಾಕೃತಿಕ ವಿಕೋಪಗಳಿಂದ ಸಮುದ್ರದ ನೀರಿನ ಮಟ್ಟ ಜಾಸ್ತಿಯಾಗುತ್ತಿದೆಯೇ? ಈ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಲಾಗಿದೆಯೇ ಅಥವಾ ನಿರಂತರವಾಗಿ ಸಂಭವಿಸುತ್ತಿರುವ ಕಡಲ್ಕೊರೆತದಿಂದ ಕರಾವಳಿ ತೀರವನ್ನು ರಕ್ಷಿಸಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಚೌಟರು ಪ್ರಶ್ನೆ ಕೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next