ಚಿಕ್ಕವಯಸ್ಸಿನವರು ಬಲಿಯಾಗುತ್ತಿರೋದನ್ನು ನೋಡಿ ಗಾಬರಿಯಾಗುತ್ತಿದೆ
ಕೋರೊನಾ ಸೋಂಕಿಗೆ ಬಹಳ ಚಿಕ್ಕ ವಯಸ್ಸಿನವರು ಬಲಿಯಾಗುತ್ತಿರುವುದನ್ನು ನೋಡಿದ್ರೆ ಗಾಬರಿಯಾಗುತ್ತದೆ. ಕಲಾವೃತ್ತಿಯ ಜೊತೆಗೆ ಇಂಥ ಸಂಕಷ್ಟದ ಸಮಯದಲ್ಲಿ ನಮ್ಮ ಕೈಯಲ್ಲಿ ಆಗಿದ್ದು, ಏನಾದ್ರೂ ಮಾಡೋದು ನಮ್ಮ ನಮ್ಮ ಕರ್ತವ್ಯ. ಹೀಗಾಗಿ ನನ್ನ ಕೈಯಲ್ಲಿ, ಸಮಾಜಕ್ಕೆ ಏನು ಮಾಡಬಹುದು ಅದನ್ನ ಮಾಡುತ್ತಿದ್ದೀನಿ. ಬಹುಶಃ ನನ್ನ ಹೆಸರಿನಲ್ಲೇ “ಸಂಚಾರಿ’ ಅಂಥ ಇರುವುದರಿಂದಲೋ ಏನೋ, ಎಲ್ಲೂ ನಾನು ಹೆಚ್ಚು ಹೊತ್ತು ಕೂತಿರಲಾರೆ. ಮೊದಲು ನಮ್ಮ ಸಿನಿಮಾದವರಿಗಾದರೂ ನಮ್ಮ ಕೈಲಾದ ಸಹಾಯ ಮಾಡಬೇಕು ಅಂಥ ಯೋಚಿಸಿ ಒಂದಷ್ಟು ಕೆಲಸ ಶುರು ಮಾಡಿದೆ. ಆನಂತರ ನಮ್ಮ ಒಂದಷ್ಟು ಸ್ನೇಹಿತರ ಜೊತೆ ಸೇರಿಕೊಂಡು ಆ ಕೆಲಸವನ್ನು ಇನ್ನಷ್ಟು ವಿಸ್ತರಿಸಿದೆವು. ಎಷ್ಟು ದಿನ ಈ ಕೆಲಸ ಮಾಡುತ್ತೇವೆ, ನಮಗೆ ಎಷ್ಟು ಕೆಲಸ ಮಾಡೋದಕ್ಕೆ ಸಾಮರ್ಥ್ಯವಿದೆ ಅಂಥ ಗೊತ್ತಿಲ್ಲ. ಆದ್ರೆ, ಎಲ್ಲೋ ಒಳ್ಳೆಯ ಕೆಲಸ ಮಾಡಿದ್ದೇವೆ ಅನ್ನೋದು ನಮ್ಮ ಮನಸ್ಸಿಗೆ ತೃಪ್ತಿ ಕೊಟ್ಟರೆ ಸಾಕು.
“ತಲೆದಂಡ’ದಲ್ಲಿ ಪ್ರಸ್ತುತ ಸ್ಥಿತಿಗತಿ
ಸದ್ಯ ನಮ್ಮ ತಂಡಕ್ಕೆ ಆಕ್ಸಿಜನ್, ಬೆಡ್, ಔಷಧಿಯ ಸಹಾಯಕ್ಕಾಗಿ ಬರುವ ವಿಚಾರಣೆ ಕಡಿಮೆಯಾಗುತ್ತಿದೆ. ಎಲ್ಲರೂ ಗುಣಮುಖರಾಗುತ್ತಿರೋ ಅಥವಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆಯೋ, ಎಲ್ಲರಿಗೂ ಔಷಧಿ ಮತ್ತಿತರ ಸೌಲಭ್ಯ ಸಿಗುತ್ತಿದೆಯೋ ಗೊತ್ತಿಲ್ಲ. ಏನೇ ಆಗಲಿ, ಎಲ್ಲರೂ ಈ ಅಪಾಯದಿಂದ ಹೊರಬರಲಿ ಅನ್ನೋದಷ್ಟೇ ನಮ್ಮ ಆಶಯ. ಇದಕ್ಕೆಲ್ಲ ಮನುಷ್ಯನೇ ಕಾರಣ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನೂ ಹಾಳು ಮಾಡುತ್ತಿದ್ದಾನೆ. ಹಾಗೇ ಪ್ರಕೃತಿ ಯನ್ನು ಹಾಳು ಮಾಡಿದ್ದಾನೆ. ಅದರ ಪ್ರತಿಫಲವನ್ನು ಇವತ್ತು ಎಲ್ಲರೂ ಅನುಭವಿಸಬೇಕಾಗಿದೆ. ಇಂಥದ್ದೇ ಕಥೆಇರುವ “ತಲೆದಂಡ’ ಅನ್ನೋ ಸಿನಿಮಾ ದಲ್ಲಿ ನಾನು ಅಭಿನಯಿಸಿ ದ್ದೇನೆ. ಗ್ಲೋಬಲ್ ವಾರ್ಮಿಂಗ್ ವಿಷಯದ ಕುರಿತಾದ ಸಿನಿಮಾವದು.
ಕಮರ್ಷಿಯಲ್ ಸಿನಿಮಾ ನನ್ನೊಳಗೆ ಇಳಿಯಲೇ ಇಲ್ಲ
ನಾನು ಕೂಡ ಕಮರ್ಷಿಯಲ್ ಸಿನಿಮಾಗಳನ್ನು ಮಾಡಲು ಟ್ರೈ ಮಾಡಿದೆ, ಆದ್ರೆ ಅದೇಕೋ ನನ್ನ ಒಳಗೆ ಇಳಿಯಲಿಲ್ಲ. ಅದು ನನಗೆ ಸೂಟ್ ಆಗಲಿಲ್ಲ. ಹಾಗಾಗಿ ನನಗೆ ಒಪ್ಪಿಗೆಯಾಗುವಂಥ ಸಿನಿಮಾ ಗಳನ್ನಷ್ಟೇ ಮಾಡಲು ಮುಂದಾಗಿದ್ದೇನೆ. ನಾನು ಸಮಾಜಕ್ಕೆ ಏನಾದ್ರೂ ಸಂದೇಶ ಕೊಡಬೇಕು, ಹೊಸ ಥರದ ಸಿನಿಮಾಗಳಿಗೆ ತೆರೆದುಕೊಳ್ಳಬೇಕು ಅನ್ನೋ ಕಾರಣಕ್ಕೆ ಬೇರೆ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳು ತ್ತಿದ್ದೇನೆ. ಈಗಾಗಲೇ ಅಂಥದ್ದೇ ಕಥಾಹಂದರವಿರುವ “ತಲೆತಂಡ’, “ಮೇಲೊಬ ಮಾಯಾವಿ’, “ಪುಕ್ಸಟೆ ಲೈಫ್’ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಈಗ ಇಂಥದ್ದೇ ಪಾತ್ರಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಈ ಲಾಕ್‌ಡೌನ್‌ನಲ್ಲಿ ಒಂದಷ್ಟು ಕಥೆಗಳನ್ನು ಕೇಳಿದ್ದೇನೆ. ಇನ್ನಷ್ಟೇ ಆ ಕಥೆಗಳನ್ನು ಫೈನಲ್ ಮಾಡಬೇಕಿದೆ.
ನಾವೆಲ್ಲರೂ ಓಟಿಟಿ ಹಿಂದೆ ಬಿದ್ದಿದ್ದೀವಿ..
ಲಾಕ್‌ಡೌನ್‌ನಿಂದಾಗಿ ಥಿಯೇಟರ್‌ಗಳು ಇಲ್ಲದಿರೋ ದ್ರಿಂದ ಸಹಜವಾಗಿಯೇ ಎಲ್ಲರೂ ಓಟಿಟಿ ಕಡೆಗೆ ಮುಖ ಮಾಡುತ್ತಿದ್ದಾರೆ. ಆದ್ರೆ ಓಟಿಟಿಗಳು ಯಾವತ್ತೂ ಥಿಯೇಟರ್‌ಗಳು ಕೊಡುವ ಅನುಭವ ಕೊಡಲಾರವು ಅನ್ನೋದು ನನ್ನ ವೈಯಕ್ತಿಕ ಅನುಭವ. ಸಿನಿಮಾ ಅನ್ನೋ ಕಲಾ ಪ್ರಕಾರವನ್ನು ಎಲ್ಲಾ ಪ್ರೇಕ್ಷಕರು ಒಂದು ಕುಟುಂಬವಾಗಿ ಕುಳಿತು ಥಿಯೇಟರ್‌ನಲ್ಲಿ ದೊಡ್ಡ ಪರದೆಯಲ್ಲಿ ನೋಡುವ ಅನುಭವವೇ ಬೇರೆ. ಥಿಯೇಟರ್‌ನಲ್ಲಿ ಪ್ರೇಕ್ಷಕ ತನಗಾದ ಅನುಭವ ವ್ಯಕ್ತಪಡಿಸುತ್ತಾನೆ. ಥಿಯೇಟರ್‌ನಲ್ಲಿ ನೋಡುವ ತೃಪ್ತಿ ಖಂಡಿತಾ ಮನೆಯಲ್ಲಿ ಸಿಗುವುದಿಲ್ಲ.
ಈಗಿನ ಪರಿಸ್ಥಿತಿಯಲ್ಲಿ ಬಹಳಷ್ಟು ಜನ ಓಟಿಟಿಯನ್ನು ಕೇಂದ್ರಿಕರಿಸಿ ಮಾತನಾಡುತ್ತಿದ್ದಾರೆ. ಓಟಿಟಿಕೇಂದ್ರಿಕರಿಸಿ ಸಿನಿಮಾ ಮಾಡುತ್ತಿದ್ದಾರೆ. ವ್ಯಾಪಾರ, ವ್ಯವಹಾರದ ದೃಷ್ಟಿಯಿಂದ ಇದನ್ನು ಒಪ್ಪಬಹುದಾದರೂ, ಇದರಿಂದ ನಿಜವಾಗಿಯೂ ಸಿನಿಮಾ ಮಾಡುವವರಿಗೆ, ಪ್ರೇಕ್ಷಕರಿಗೆ ಆಗುವ ಅನುಕೂಲ, ಅನಾನುಕೂಲಗಳು ಏನು ಎಂಬುದರ ಬಗ್ಗೆ ಬೇರೆಯದ್ದೇ ಚರ್ಚೆ ನಡೆಯಬೇಕಾಗಿದೆ. ಓಟಿಟಿ ಡಿಮ್ಯಾಂಡ್ ಮಾಡುವ ಕಂಟೆಂಟ್, ಅಲ್ಲಿರುವ ಪ್ರೇಕ್ಷಕರ ಸಂಖ್ಯೆ, ಅದರಿಂದ ಬರುವ ಆದಾಯ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ವಸ್ತುನಿಷ್ಠವಾಗಿ ಚರ್ಚಿಸಿದ ಮೇಲಷ್ಟೇ ಓಟಿಟಿ ನಮಗೆ ಅನುಕೂಲವೋ, ಅನಾನುಕೂಲವೋ ಎಂಬ ನಿರ್ಧಾರಕ್ಕೆ ಬರಬಹುದು. ನನ್ನ ಪ್ರಕಾರ ಈಗಿನ ಪರಿಸ್ಥಿತಿಯಲ್ಲಿ, ನಮ್ಮಲ್ಲಿ ಪ್ರಾದೇಶಿಕ ಓಟಿಟಿಗಳು ಅಷ್ಟೊಂದು ಪ್ರಬಲವಾಗಿಲ್ಲ. ಹಾಗಾಗಿ ಕನ್ನಡದ ಸಿನಿಮಾಗಳಿಗೆ ಇಲ್ಲಿ ಸರಿಯಾದ ಮಾರುಕಟ್ಟೆ ಸಿಗುವುದಿಲ್ಲ. ಹೀಗಾಗಿ ಕನ್ನಡದ ಮಟ್ಟಿಗೆ ಮೊದಲನೆಯದಾಗಿ ಸಿನಿಮಾಗಳು ಥಿಯೇಟರ್‌ನಲ್ಲಿ ಬರಬೇಕು. ಆ ನಂತರ ಅದು ಓಟಿಟಿಯಲ್ಲಿ ಬಿಡುಗಡೆಯಾಗಬೇಕು ಹಾಗಾದಾಗ ಮಾತ್ರ ನಾವು ಮಾಡಿದ ಸಿನಿಮಾಕ್ಕೆ ಒಳ್ಳೆಯ ಬೆಲೆ ಸಿಗುವುದರ ಜೊತೆಗೆ ಎಲ್ಲರನ್ನೂ ತಲುಪುತ್ತದೆ ಅನ್ನುವುದು ನನ್ನ ಭಾವನೆ.
ಓಟಿಟಿ ರಿಲೀಸ್‌ಗೆ ಸಿದ್ಧತೆ ಬೇಕು
ಕನ್ನಡ ಚಿತ್ರೋದ್ಯಮದಲ್ಲಿ ಓಟಿಟಿಯಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಬೇಕಾದರೆ, ಅದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕು. ತೆಲುಗು, ತಮಿಳು, ಮಲೆಯಾಳಂ ನಲ್ಲಿರುವಂತೆ ಕನ್ನಡದಲ್ಲೂ ಕೂಡ ಇಲ್ಲಿನ ಪ್ರೇಕ್ಷಕ ವರ್ಗವನ್ನು ಪರಿಣಾಮಕಾರಿಯಾಗಿ ತಲುಪುವಂಥ ಓಟಿಟಿ ವ್ಯವಸ್ಥೆಯನ್ನು ಮೊದಲು ನಾವೇ ರೂಪಿಸಿಕೊಳ್ಳಬೇಕು. ಅದು ನಮ್ಮ ನಿಯಂತ್ರಣದಲ್ಲಿ, ನಮ್ಮ ಸ್ವಾಯತ್ತತೆಯಲ್ಲೇ ಇರಬೇಕು. ಹಾಗಾದಾಗ ಮಾತ್ರ ಅದರ ಪೂರ್ಣ ಪ್ರಯೋಜನ ಇಲ್ಲಿನ ಸಿನಿಮಾಗಳಿಗೆ, ಪ್ರೇಕ್ಷಕರಿಗೆ, ಚಿತ್ರೋದ್ಯಮಕ್ಕೆ ಆಗುತ್ತದೆ. ಇಲ್ಲದಿದ್ದರೆ ಓಟಿಟಿ ಯಾವುದೋ ಕಂಪೆನಿಗಳ ಕೈಯಲ್ಲಿ ಸಿಲುಕಿ ಪ್ರೇಕ್ಷಕರ ಆಸಕ್ತಿ, ಅಭಿರುಚಿಗಳಿಗಿಂತ, ಕಂಪೆನಿಗಳ ಆಸಕ್ತಿ, ಅಭಿರುಚಿಕೆ ತಕ್ಕಂತೆ ಸಿನಿಮಾಗಳನ್ನು ಮಾಡ ಬೇಕಾಗುತ್ತದೆ. ಈ ಬಗ್ಗೆ ನಾನೂ ಅಧ್ಯಯನ ಮಾಡುತ್ತಿದ್ದೇನೆ. ಸಾಧ್ಯವಾದರೆ ಮುಂದೆ ಚಿತ್ರೋದ್ಯಮದಲ್ಲಿ ಈ ಬಗ್ಗೆ ಚರ್ಚೆಗೆ ಬೇಕಾದ ಒಂದಷ್ಟು ವಿಷಯಗಳನ್ನು ಸಂಗ್ರಹಿಸಿ ಓದಗಿಸುತ್ತೇನೆ.
ರವಿ ರೈ/ ಜಿ.ಎಸ್.ಕೆ.ಸುಧನ್