Advertisement
ಪೇಪರ್ ವಿಜೇಂದ್ರ (ಕೆ. ವಿಜೇಂದ್ರ ಕಾಮತ್) ಎಂದರೆ ಕಲ್ಯಾಣಪುರದಲ್ಲಿ ಪತ್ರಿಕೆ ಓದುವ ಪ್ರತಿಯೊಬ್ಬರಿಗೂ ಪರಿಚಿತ. ಬಡ ಕುಟುಂಬದಲ್ಲಿ ಜನಿಸಿದ ಅವರು ಓದಬೇಕು ಎನ್ನುವ ಆಸೆ ಕೈಬಿಟ್ಟು, ಜೀವನೋಪಾಯಕ್ಕಾಗಿ ತಂದೆ ಮಾಧವ ಕಾಮತ್ ಅವರ ಉದಯವಾಣಿ ವಿತರಣೆ ಏಜೆನ್ಸಿಯಲ್ಲಿ ಪತ್ರಿಕಾ ವಿತರಕ ವೃತ್ತಿಯನ್ನು ಪ್ರಾರಂಭಿಸಿದರು. ಇದೀಗ ಏಜೆನ್ಸಿಗೆ 50ರ ಸಂಭ್ರಮ. ಕಾಮತ್ ಅವರು “ಉದಯವಾಣಿ’ ಆರಂಭ ವಾದಂದಿನಿಂದ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದು “ಉದಯವಾಣಿ’ಗೂ ಈಗ ಸುವರ್ಣ ಸಂಭ್ರಮ.
ಎಲ್ಲರೂ ಮುಂಜಾನೆ ಸವಿಗನಸು ಕಾಣುತ್ತಾ ಸಿಹಿ ನಿದ್ದೆಯಲ್ಲಿರುವಾಗ 65 ವರ್ಷದ ಕೆ.ವಿಜೇಂದ್ರ ಕಾಮತ್ ಮಾತ್ರ ಪತ್ರಿಕೆ ವಿತರಣೆಯ ಕಾಯಕದಲ್ಲಿ ತೊಡಗಿಸಿಕೊಂಡಿರುತ್ತಾರೆ. ಚಳಿ,ಗಾಳಿ, ಮಳೆ ಯಾವುದು ಇವರ 50 ವರ್ಷದ ಪತ್ರಿಕೆ ವಿತರಣೆಗೆ ಅಡ್ಡಿಯಾಗಿಲ್ಲ. ಮನೆಯಲ್ಲಿ ಅಥವಾ ಊರಿನಲ್ಲಿ ಹಬ್ಬ, ಉತ್ಸವ ಏನೇ ಇದ್ದರೂ ತಮ್ಮ ಕಾಯಕದಿಂದ ತಪ್ಪಿಸಿಲ್ಲ. 40 ಕಿ.ಮೀ. ಸಂಚಾರ
ಮಳೆ, ಚಳಿ, ಗಾಳಿ ಲೆಕ್ಕಿಸದೆ ಸಮಯಕ್ಕೆ ಸರಿಯಾಗಿ ಓದುಗರ ಕೈಗೆ ಪತ್ರಿಕೆ ತಲುಪಿಸುವುದೇ ಇವರ ಗುರಿ. ಮುಂಜಾನೆ 3.30ಕ್ಕೆ ಎದ್ದು, 4ಗಂಟೆ ವರೆಗೆ ಪತ್ರಿಕೆ ಜೋಡಿಸುವ ಕೆಲಸ ಮಾಡುತ್ತಾರೆ. ಅನಂತರ ಕಲ್ಯಾಣಪುರ ಸುತ್ತಮತ್ತಲಿನ ಮನೆಗಳಿಗೆ ಬೆಳಕು ಹರಿಯುವ ಮುನ್ನವೇ ಪೇಪರ್ ಸೇರಿಸುತ್ತಾರೆ. ಪರಿಸರದ ಮೂಲೆ ಮೂಲೆಗಳ ಮನೆಗಳಿಗೆ ಪತ್ರಿಕೆಯನ್ನು ವಿತರಿಸುವಾಗ ಇವರ ನಿತ್ಯ ಸಂಚಾರ ಸುಮಾರು 40 ಕಿ.ಮೀ. ಆಗುತ್ತದೆ.
ಪಾದಚಾರಿಯಾಗಿ ಪತ್ರಿಕೆ ವಿತರಣೆ
ವಿಜೇಂದ್ರರಿಗೆ 18 ವರ್ಷ ಆಗಿರುವಾಗ ತಂದೆಯ ಜತೆಗೆ ಪೇಪರ್ ವಿತರಣೆಯಲ್ಲಿ ಸಹಾಯ ಮಾಡುತ್ತಿದ್ದರು. ಆಗ ಈಗಿನಂತೆ ವಿತರಕರ ಮನೆ ಎದುರು ಪೇಪರ್ ಬಂಡಲ್‌ಗಳನ್ನು ಹಾಕುವ ವ್ಯವಸ್ಥೆ ಇರಲಿಲ್ಲ. ಮುಂಜಾನೆ 3 ಗಂಟೆಗೆ ಸಂತೆಕಟ್ಟೆ ಬಸ್ ನಿಲ್ದಾಣದಿಂದ ಪತ್ರಿಕೆಗಳನ್ನು ಪಡೆದುಕೊಂಡು ಪೇಟೆಯಿಂದ ಹೊಳೆ ಬಾಗಿಲಿನವರೆಗೆ ಎಲ್ಲ ಮನೆಗಳಿಗೆ ಮಾಧವ ಕಾಮತ್ ನಡೆದುಕೊಂಡು ಹೋಗಿ ಪೇಪರ್ ಹಾಕುತ್ತಿದ್ದರು.
Related Articles
1970ರ ಅಸುಪಾಸಿನ ಸಮಯ ಡಾಮರು ಕಾಣದ ರಸ್ತೆ, ಆಕಾಶದಲ್ಲಿ ಕಾಣುವ ಚಂದ್ರನೇ ಬೀದಿ ದೀಪ, ಮನೆಯಿಂದ ಸಂತೆಕಟ್ಟೆಗೆ ತಂದೆ- ಮಗ ನಡೆದುಕೊಂಡು ಹೋಗುವುದಿತ್ತು. ಆಗ ತಂದೆಗೆ ಮೂರು ಬಾರಿ ಅಪಘಾತ ಸಂಭವಿಸಿದೆ. ಆದರೂ ಪೇಪರ್ ವಿತರಣೆ ಮಾತ್ರ ಎಂದಿಗೂ ನಿಲ್ಲಿಸಿರಲಿಲ್ಲ. ಪ್ರಾರಂಭದಲ್ಲಿ ಲೆಕ್ಕವನ್ನು ನೋಡುತ್ತಿದ್ದ ವಿಜೇಂದ್ರರು, ತಂದೆ ಆನಾರೋಗ್ಯದ ಬಳಿಕ ಪೇಪರ್ ವಿತರಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.
Advertisement
ಸೈಕಲ್‌ನಿಂದ ಮೋಟಾರ್‌ಸೈಕಲ್‌ಗೆ…ತಂದೆ ಅನಂತರ ಪೇಪರ್ ವಿತರಣೆಯ ಮಾಧ್ಯಮ ಕಾಲು ನಡಿಗೆಯಿಂದ ಸೈಕಲ್‌ಗೆ ಬದಲಾಯಿತು. ಓದುಗರೀಗ ಪತ್ರಿಕೆಗಳನ್ನು ಆದಷ್ಟು ಬೇಗ ಅಪೇಕ್ಷಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ಕಾಮತ್ ಅವರು ಬೈಕ್ ಮೂಲಕ ವಿತರಿಸುತ್ತಿದ್ದಾರೆ. ಸುವರ್ಣ ಸಂಭ್ರಮದ ಸಭೆ
“ಉದಯವಾಣಿ’ ಪತ್ರಿಕೆಯ ಪ್ರಸಾರದ ಸುವರ್ಣ ಸಂಭ್ರಮದ ಸಭಾ ಕಾರ್ಯಕ್ರಮವನ್ನು ಕಲ್ಯಾಣಪುರ ಶ್ರೀವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಫೆ. 24ರ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಕೆ.ಶಾಂತಾರಾಮ ಬಾಳಿಗರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ ಟಿ.ಸತೀಶ್ ಯು. ಪೈ, “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ|ಸಂಧ್ಯಾ ಎಸ್. ಪೈ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ|ವಿನ್ಸೆಂಟ್ ಆಳ್ವ, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ದೇವಸ್ಥಾನದ ಆಡಳಿತೆ ಮೊಕ್ತೇಸರ ಕೆ. ಅನಂತಪದ್ಮನಾಭ ಕಿಣಿ ಅತಿಥಿಗಳಾಗಿ ಪಾಲ್ಗೊಳ್ಳುವರು. ವೇ| ಮೂ| ಕೆ. ಕಾಶೀನಾಥ ಭಟ್ ಕಲ್ಯಾಣಪುರ, ಕೆ. ವಾಮನ ಕಾಮತ್ ಬ್ರಹ್ಮಾವರ, ಕೆ. ಬಾಬುರಾಯ ಶೆಣೈ ಕಟಪಾಡಿ ಅವರನ್ನು ಸಮ್ಮಾನಿಸಲಾಗುವುದು. “ಉದಯವಾಣಿ’- ಸಂತೃಪ್ತಿ
ಉದಯವಾಣಿ ದಿನಪತ್ರಿಕೆ ಆರಂಭವಾಗಿ 50 ದಿನ ಕಳೆದಿತ್ತು. ನನ್ನ ತಂದೆ ದಿ| ಮಾಧವ ಕಾಮತ್ ಅವರು ಕೇಶವ ಪೈ ಹಾಗೂ ವಿಟuಲ್ ಪೈ ಅವರು ಸಹಾಯದಿಂದ ಉದಯವಾಣಿ ಪತ್ರಿಕೆ ವಿತರಣೆ ಏಜೆನ್ಸಿಯನ್ನು ಪಡೆದುಕೊಂಡಿದ್ದರು. ಅಂದಿನಿಂದ ಇಂದಿನವರೆಗೆ ಉದಯವಾಣಿ ಪ್ರತಿಕೆಯೊಂದಿಗೆ ಉತ್ತಮವಾದ ಸಂಬಂಧ ಹೊಂದಿದ್ದೇವೆ. ಇದರಿಂದಲೇ ನಾವು ಸಂತೃಪ್ತಿಯನ್ನು ಕಾಣುತ್ತಿದ್ದೇವೆ.
– ವಿಜೇಂದ್ರ ಕಾಮತ್ ತಡವಾದ ನಿದರ್ಶನವೇ ಇಲ್ಲ
ನಾವು ಬೆಳಗ್ಗೆ ಏಳುವ ಮೊದಲೇ ವಿಜೇಂದ್ರ ಕಾಮತ್ ಅವರ ಪೇಪರ್ ಮನೆಯಲ್ಲಿ ಇರುತ್ತದೆ. ಕಳೆದ 35 ವರ್ಷಗಳಿಂದ ಮನೆಗೆ ನಿತ್ಯವೂ ಪೇಪರ್ ಹಾಕುತ್ತಿದ್ದಾರೆ. ಎಂದೂ ಸಹ ತಡವಾಗಿ ಬಂದಿರುವ ನಿದರ್ಶನವೇ ಇಲ್ಲ.
-·ಪುಂಡಲೀಕ ನಾಯಕ್, ಪತ್ರಿಕೆ ಓದುಗ ಕಲ್ಯಾಣಪುರ