Advertisement

Udayavani Campaign: ಬಸ್‌ ಬೇಕೇ, ಬೇಕು- ಆ ಊರಿನ ಬಸ್‌ ಕೊರೊನಾಗೆ ಬಲಿಯಾಗಿದೆ!

03:38 PM Jun 21, 2024 | Team Udayavani |

ಕೋಟ,: ನಮ್ಮೂರಿಗೆ ಬಸ್ಸಿನ ವ್ಯವಸ್ಥೆ ಇಲ್ಲ. ಹಣ ಇದ್ದವರು ರಿಕ್ಷಾದಲ್ಲಿ ಹೋಗುತ್ತಾರೆ; ನಮ್ಮಲ್ಲಿ ಅಷ್ಟು ಅನುಕೂಲ ಇಲ್ಲ. ಹೀಗಾಗಿ ಪ್ರತಿ ದಿನ ಮೂರ್‍ನಾಲ್ಕು ಕಿ.ಮೀ. ನಡದೇ ಶಾಲೆಗೆ ಹೋಗುತ್ತೇವೆ: ಇದು ಕಾರ್ಕಡ,ಕಾವಡಿ ಭಾಗದಲ್ಲಿ ಕಾಲ್ನಡಿಗೆಯಲ್ಲಿ ಶಾಲೆಗೆ ಸಾಗುತ್ತಿದ್ದ ವಿದ್ಯಾರ್ಥಿನಿ ಉದಯವಾಣಿ ಜತೆ ತೋಡಿ ಕೊಂಡ ನೋವು. ವಿಶ್ವದಲ್ಲಿ ಹಲವಾರು ಮಂದಿಯನ್ನು ಸಾಯಿಸಿದ ಕೊರೊನಾ ಇಲ್ಲಿ ಒಂದು ಬಸ್ಸನ್ನೂ ಬಲಿ ಪಡೆದಿದೆ ಅಂದರೆ ನೀವು ನಂಬಲೇಬೇಕು!

Advertisement

ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಕಾರ್ಕಡದಿಂದ ಸಾಲಿಗ್ರಾಮಕ್ಕೆ ಬರ ಲು 2-3 ಕಿ.ಮೀ. ಇದೆ. ಇಲ್ಲಿಂದ 8.40ಕ್ಕೆ ಹೊರಟು ಕೋಟ ತಲುಪುವ ಖಾಸಗಿ ಬಸ್‌ ಇತ್ತು ಹಾಗೂ ಏಳೆಂಟು ವರ್ಷದ ಹಿಂದೆ ಕಾರ್ಕಡ-ಕಾವಡಿ ಮಾರ್ಗವಾಗಿ ಮಂದಾರ್ತಿಗೆ ಹೋಗುವ ಬಸ್ಸೂ ಇತ್ತು. ಆದರೆ ಎರಡೂ ಬಸ್‌ ಗಳು ಕೊರೊನಾ ಬಳಿಕ ಸ್ಥಗಿತಗೊಂಡಿದೆ. ಕಾರ್ಕಡ ಗ್ರಾಮದಲ್ಲಿ ನೂರಾರು ಮನೆ ಗ ಳಿವೆ. ಕಾರ್ಮಿಕ ವರ್ಗ ಕೂಡ ದೊಡ್ಡದಿದೆ. ಕೋಟ ವಿದ್ಯಾಸಂಸ್ಥೆ, ಬ್ರಹ್ಮಾವರ, ಕುಂದಾಪುರ ಖಾಸಗಿ ಕಾಲೇಜುಗಳಲ್ಲಿ ಓದುವ 100ಕ್ಕೂ ಅಧಿಕ ಮಕ್ಕಳಿದ್ದಾರೆ. ಇಲ್ಲಿನ ಮಕ್ಕಳು ಶಾಲೆ ತಲುಪಬೇಕಿದ್ರೆ ಒಂದೋ ರಿಕ್ಷಾ ಹಿಡಿಯಬೇಕು ಅಥವಾ ಕಾಲ್ನಡಿಗೆ ಇಲ್ಲವೇ ಸೈಕಲ್‌ ಸವಾರಿ ನಡೆಸಬೇಕು.

ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಕಾವಡಿಯಲ್ಲಿ ಹೈಸ್ಕೂಲ್‌ ಇದ್ದು ಇಲ್ಲಿಗೆ ವಿದ್ಯಾರ್ಥಿಗಳು ಶಿಕ್ಷಕರು ಬರಬೇಕಾದರೆ ಬಸ್ಸು ಇಳಿದು 1.5 ಕಿ.ಮೀ. ನಡೆದೇ ಬರಬೇಕು ಹೀಗಾಗಿ ಬಹುತೇಕ ಮಕ್ಕಳು ಸೈಕಲ್‌ ಮೂಲಕ ಅಥವಾ ನಡೆದೇ ಶಾಲೆ ತಲುಪುತ್ತಾರೆ ಮತ್ತು ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಟ ವಿವೇಕ ವಿದ್ಯಾಸಂಸ್ಥೆ, ಬಾರ್ಕೂರು ಪದವಿ ಕಾಲೇಜು, ಬ್ರಹ್ಮಾವರ ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಕಲಿಯುತ್ತಾರೆ. ಇವರೆಲ್ಲರೂ ಒಂದೋ ಕಾಲ್ನಡಿಗೆ ಮೂಲಕ ಅಥವಾ ರಿಕ್ಷಾದಲ್ಲಿ ಯಡ್ತಾಡಿಗೆ ತಲುಪಿ ಅಲ್ಲಿಂದ ಬಸ್‌ಗಳಲ್ಲಿ ತೆರಳಬೇಕು.

ಸೇತುವೆ, ರಸ್ತೆ ಆಯ್ತು ಬಸ್‌ ಮಾತ್ರ ಇಲ್ಲ
ಕಾರ್ಕಡ-ಕಾವಡಿ ಮಧ್ಯ ದೊಡ್ಡ ಹೊಳಗೆ ಸೇತುವೆ ಕಟ್ಟಿ, ರಸ್ತೆ ಸಂಪರ್ಕ ಕಲ್ಪಿಸುವ ಸಂದರ್ಭ ಈ ಮಾರ್ಗದಲ್ಲಿ ಬಸ್‌ ಸಂಚಾರ ಆರಂಭವಾಗಬೇಕು. ಘನ ವಾಹನಗಳ ಓಡಾಡಬೇಕು ಎನ್ನುವ ಘನ ಉದ್ದೇಶ ಅಂದಿನ ಜನಪ್ರತಿನಿಧಿಗಳಿಗಿತ್ತು. ಇದೀಗ
ಸೇತುವೆ-ರಸ್ತೆ ನಿರ್ಮಾಣಗೊಂ ಎರಡು ದಶಕ ಕಳೆದಿವೆ. ಆದರೆ ಬಸ್ಸು ಮಾತ್ರ ಓಡಾಡುತ್ತಲೇ ಇಲ್ಲ ಎನ್ನುತ್ತಾರೆ ರಿಕ್ಷಾ ಚಾಲಕರಾದ ಸುಭಾಷ್‌ ಕಾರ್ಕಡ.

ಉಳ್ಳವರು ರಿಕ್ಷಾದಲ್ಲಿ ಪೋಗುವರು ನಾನೇನ ಮಾಡಲಿ !
ಈ ಎರಡು ಊರುಗಳಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಹೆತ್ತವರು ಒಂದೋ ಕೆಲಸಕ್ಕೆ ಹೋಗುವ ಮೊದಲು ತಮ್ಮ ವಾಹನದಲ್ಲಿ ಶಾಲೆಗೆ ಬಿಟ್ಟು ಬರಬೇಕು. ಅಥವಾ ಖಾಸಗಿ ರಿಕ್ಷಾವನ್ನು ಒಂದು ತಿಂಗಳಿಗೆ ಇಂತಿಷ್ಟು ಮೊತ್ತ ಎಂದು ಬುಕ್‌ ಮಾಡಬೇಕು. ಇಲ್ಲಿ ಬಹುತೇಕ ಕೂಲಿ ಮಾಡಿ ಜೀವನ ಸಾಗಿಸುವವರೇ ಹೆಚ್ಚು. ಮಕ್ಕಳನ್ನು ಶಾಲೆಗೆ ಬಿಡಲು ಬೆಳಗ್ಗೆ 8.30 ತನಕ ಕಾಯಲು ಕೆಲವರಿಗೆ ಸಾಧ್ಯವಾಗುವುದಿಲ್ಲ, ಹಾಗಂತ ರಿಕ್ಷಾದಲ್ಲಿ ಕಳುಹಿಸಲು ಎಲ್ಲ ರಿಗೂ ಆಗ ದು. ಆದ್ದರಿಂದ ನಡೆದುಕೊಂಡೇ ಹೋಗುವಂತೆ ತಿಳಿಸಲಾಗುತ್ತದೆ. ಹಣ ಇದ್ದವರು ರಿಕ್ಷಾದಲ್ಲಿ ಹೋಗುತ್ತಾರೆ. ನಮ್ಮಲ್ಲಿ ದುಡ್ಡಿಲ್ಲ, ನಡೆಯುತ್ತೇವೆ ಎಂದು ಆಕ್ರೋಶ ದಿಂದ ಹೇಳಿದ ಹುಡುಗಿಯ ಮಾತು ಬಡ ಕುಟುಂಬದ ಮಕ್ಕಳ ನಿಟ್ಟುಸಿರು, ಅಸಹನೆಯನ್ನು ಪ್ರತಿಬಿಂಬಿಸುವಂತಿತ್ತು.

Advertisement

ಉಚಿತ ಬಸ್‌ಗೆ ಶಕ್ತಿ ಹೇಗೆ?
ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ಬಂದಿದೆ ಎನ್ನುತ್ತದೆ ಸರಕಾರ. ಆದರೆ ಉಡುಪಿ ಜಿಲ್ಲೆಯಲ್ಲಿ ಈ ಯೋಜ ನೆಯ ಲಾಭ ಕೇವಲ ಹೆದ್ದಾರಿಯಲ್ಲಿ ಓಡಾಡುವ ಅನುಕೂಲಸ್ಥರಿಗೆ ಮಾತ್ರ ಸಿಕ್ಕಿದೆ. ನಮ್ಮೂರಿನಂತಹ ಗ್ರಾಮಾಂತರ ಭಾಗದಲ್ಲಿ ಸರಕಾರಿ ಬಸ್ಸುಗಳ ಓಡಾಟ ಆರಂಭಿಸಿದರೆ ನಮ್ಮಂತಹ ಕೂಲಿ ಕಾರ್ಮಿಕರು, ಕಾರ್ಖಾನೆಗಳಲ್ಲಿ ಬೆವರು ಹರಿಸುವ ಮಹಿಳೆಯರು, ಬಡ ವರ್ಗದವರ ಮಕ್ಕಳಿಗೆ ಯೋಜನೆಯ ಪ್ರಯೋಜನ ಸಿಕ್ಕಿದರೆ ಅದುವೇ ನಿಜವಾದ ಶಕ್ತಿ. ನಮ್ಮ ಮಾತನ್ನೆಲ್ಲ ಯಾರು ಕೇಳ್ತಾರೆ? ಎಂದು ಕೂಲಿ ಕೆಲಸ ಮಾಡುವ ಜಲಜಾ ಪೂಜಾರ್ತಿ ಹೇಳಿದರು.

ಯಾವ ಮಾರ್ಗದಲ್ಲಿ ಬಸ್‌ ಬೇಕು?
01 ಕಾರ್ಕಡ- ಕಾವಡಿ ಸಾಲಿಗ್ರಾಮ ನೇರ ಮಾರ್ಗವಾಗಿದ್ದು, ಮಂದಾರ್ತಿಯಿಂದ ಹೊರಟು ಅಲ್ತಾರು ಮಾರ್ಗವಾಗಿ ಯಡ್ತಾಡಿ, ಕಾವಡಿ, ಕಾರ್ಕಡ, ಸಾಲಿಗ್ರಾಮದ ಮೂಲಕ ಕೋಟ ಮೂರ್ಕೈ ತಲುಪುವಂತೆ ಬಸ್‌ ವ್ಯವಸ್ಥೆ ಮಾಡಿದರೆ ವಿದ್ಯಾರ್ಥಿಗಳು, ಕಾರ್ಮಿಕರ ಜತೆಗೆ ಈ ಭಾಗದಿಂದ ಮಂದಾರ್ತಿ ದೇವಸ್ಥಾನಕ್ಕೆ ತೆರಳುವವರಿಗೂ ಅನುಕೂಲ.

02 ಇನ್ನೊಂದು ಬಸ್ಸನ್ನು ಬ್ರಹ್ಮಾವರ-ಬಾರಕೂರು, ಯಡ್ತಾಡಿ, ಕಾವಡಿ-ಕಾರ್ಕಡ, ಕೋಟ, ಕುಂದಾಪುರ ಮಾರ್ಗವಾಗಿ ವ್ಯವಸ್ಥೆ ಮಾಡಿದರೆ ಹೆಚ್ಚು ಅನುಕೂಲವಿದೆ.

03 ಇಲ್ಲಿನ ಜನರಲ್ಲಿ ಸರಕಾರಿ ಬಸ್ಸಿನ ಬೇಡಿಕೆ ಕೂಡ ಬಲವಾಗಿದ್ದು, ಮನವಿ ಕೂಡ ನೀಡಿದ್ದೇವೆ ಎನ್ನುತ್ತಾರೆ ಸ್ಥಳೀಯರಾದ ಗುರುರಾಜ್‌ ಕಾಂಚನ್‌ ಅವರು

*ರಾಜೇಶ್‌ ಗಾಣಿಗ, ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next