Advertisement

ಗಾಂಧೀಜಿ ಚಿತಾಭಸ್ಮ ವಿರುವ ಸ್ಮಾರಕಕ್ಕೆ ಹೈಟೆಕ್‌ ಸ್ಪರ್ಶ

06:50 PM Aug 26, 2021 | Team Udayavani |

„ಕೆ.ನಾಗರಾಜ್‌

Advertisement

ಕೂಡ್ಲಿಗಿ: 6 ದಶಕ ಕಳೆದರೂ ಅನಾಥವಾಗಿದ್ದ ಹುತಾತ್ಮರ ಸ್ಮಾರಕಕ್ಕೆ ಈಗ ಹೈಟೆಕ್‌ ಸ್ಪರ್ಶ. ಆಧುನಿಕ ಮೇಲ್ಛಾವಣಿ, ಅಕ್ಕಪಕ್ಕದ ಜಾಗದಲ್ಲಿ ಪಾರ್ಕ್‌ ನಿರ್ಮಾಣ ಮಾಡಲಾಗಿದೆ. ಸ್ಥಳೀಯ ಗಾಂಧಿವಾದಿಗಳು, ಪಟ್ಟಣದ ಪ್ರಮುಖರು, ಸಂಘ -ಸಂಸ್ಥೆಯವರ ಹೋರಾಟದ ಫಲವಾಗಿ ಗಾಂಧೀಜಿಯವರ ಚಿತಾಭಸ್ಮವಿರುವ ಸ್ಮಾರಕವನ್ನು ಕಾಪಾಡಿಕೊಂಡು ಬಂದಿದ್ದಾರೆ.

ಸ್ಮಾರಕದ ಸೌಂದರ್ಯ ಹೆಚ್ಚಿಸಲು ಇತ್ತೀಚೆಗೆ ಅಭಿವೃದ್ಧಿ ಮಾಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಗಾಂಧೀಜಿಯವರು ಹುತಾತ್ಮರಾದಾಗ ಅವರ ಚಿತಾಭಸ್ಮವನ್ನು ದೇಶದ ನಾನಾ ಭಾಗಗಳಿಗೆ ಕೊಂಡೊಯ್ದು ಗಂಗೆಗೆ ಅರ್ಪಿಸುವ ಮೂಲಕ ಧನ್ಯತಾಭಾವ ಮೆರೆದಿದ್ದರು.

ಅದೇ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಸದಸ್ಯರಾಗಿದ್ದ ಟೇಕೂರು ಸುಬ್ರಹ್ಮಣ್ಯ ಅವರೂ ಅಲ್ಲಿದ್ದರು. ಅವರ ಜೊತೆ ಕೂಡ್ಲಿಗಿಯಲ್ಲಿ ಶಿಕ್ಷಕರಾಗಿದ್ದ ಅಪ್ಪಟ ಗಾಂಧಿವಾದಿ ಬಿಂಧು ಮಾಧವರೂ ಇದ್ದರು. ಗಾಂಧೀಜಿಯವರ ಚಿತಾಭಸ್ಮವನ್ನು ದೆಹಲಿಯ ರಾಜಘಾಟ್‌ನಿಂದ ಬಳ್ಳಾರಿಗೆ ತಂದು ಅಲ್ಲಿಯ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಅಲ್ಲಿಂದ ಬಿಂಧು ಮಾಧವ ಮಾಸ್ಟರ್‌ ನೇತೃತ್ವದಲ್ಲಿ ಕೂಡ್ಲಿಗಿಗೆ ತಂದು ಗುಡೇಕೋಟೆ ರಸ್ತೆಯ ಪಕ್ಕದ ಹೈಸ್ಕೂಲ್‌ ಮೈದಾನದ ಬದಿಯಲ್ಲಿ ತಾತ್ಕಾಲಿಕ ಕಟ್ಟೆ ನಿರ್ಮಿಸಿ ಇಡಲಾಯಿತು. ಚಿತಾಭಸ್ಮವನ್ನು ಅಂದಿನ ಹೈದರಾಬಾದ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ರಮಾನಂದ ತೀರ್ಥರ ಸಮ್ಮುಖದಲ್ಲಿ 1948ರಲ್ಲಿ ಇಡಲಾಗಿತ್ತು.

Advertisement

ಆನಂತರ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆಂಗಲ್‌ ಹನುಮಂತಯ್ಯ ಅವರು ಕೂಡ್ಲಿಗಿಗೆ ಭೇಟಿ ನೀಡಿ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ ವೀಕ್ಷಿಸಿದ ನಂತರ ತಮ್ಮ ಮುಖ್ಯಮಂತ್ರಿ ಅನುದಾನ ಬಿಡುಗಡೆ ಮಾಡಿ ಅಮೃತ ಶಿಲೆಯ ಮಂಟಪವನ್ನು ಕೂಡ್ಲಿಗಿಯಲ್ಲಿ ನಿರ್ಮಿಸಿದ್ದರು. ಆ ಸ್ಮಾರಕದ ಕಟ್ಟೆಯು ಈಗಲೂ ಹಾಗೆ ಇದೆ.

ಆದರೆ ಗಾಂಧೀಜಿ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ನಮನ ಸಲ್ಲಿಸುವ ಪವಿತ್ರ ಸ್ಥಳವನ್ನು ಅವರ ಮೌಲ್ಯವನ್ನು ಬಿಂಬಿಸುವ ನೆಲೆಯಲ್ಲಿ ಅಭಿವೃದ್ಧಿ ನಡೆದಿಲ್ಲ ಎನ್ನುವ ಆರೋಪವೂ ಇದೆ. ಅಲ್ಲದೇ ಇತ್ತೀಚೆಗೆ ನಡೆದ ಕಾಮಗಾರಿಯೂ ಕಳಪೆಯಾಗಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಪಟ್ಟಣದ 4 ಕಡೆಗಳಲ್ಲಿಯೂ ಸಹ ಸ್ಥಳೀಯ ಆಡಳಿತ ಗಾಂಧೀಜಿ ಚಿತಾಭಸ್ಮವಿರುವ ಬಗ್ಗೆ ನಾಮಫಲಕಗಳನ್ನು ಹಾಕುವ ಮೂಲಕ ಇಲ್ಲಿಯ ಮಹತ್ವವನ್ನು ತಿಳಿಸಿಕೊಡುವ ಕಾರ್ಯ ಆಗಬೇಕಿದೆ ಎಂಬುದು ದೇಶಪ್ರೇಮಿಗಳ ಮನವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next