Advertisement

ಕುಂದಾ ನಗರಿಯಿಂದ ವಾಣಿಜ್ಯ ನಗರಕ್ಕೆ ಉಡಾನ್‌!

05:05 PM Jun 28, 2018 | Team Udayavani |

ಬೆಳಗಾವಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮತ್ತೆ ಗರ ಬಡಿದಿದೆ. ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಉಡಾನ್‌ ಯೋಜನೆಯಡಿ ದೇಶದ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಂಸದರು ಹಾಗೂ ಶಾಸಕರು ಹೇಳುತ್ತ ಬಂದಿದ್ದರೆ ಈ ಕಡೆ ಬೆಳಗಾವಿಗೆ ಬರಬೇಕಾದ ವಿಮಾನಗಳು ಸದ್ದಿಲ್ಲದೆ ಹುಬ್ಬಳ್ಳಿ ನಿಲ್ದಾಣಕ್ಕೆ ಹಾರಿಹೋಗಿವೆ.

Advertisement

ಸಾಂಬ್ರಾ ವಿಮಾನ ನಿಲ್ದಾಣ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣ ಬಹುತೇಕ ಏಕಕಾಲಕ್ಕೆ ನವೀಕರಣಗೊಂಡು ಹೊಸ ರನ್‌ವೇ ಮೂಲಕ ಹೆಚ್ಚಿನ ವಿಮಾನ ಸಂಚಾರಕ್ಕೆ ಸಿದ್ಧಗೊಂಡಿದ್ದವು. ಆದರೆ ಈ ನಿಲ್ದಾಣಗಳ ಉದ್ಘಾಟನೆ ನಂತರ ಬೆಳಗಾವಿ ನಿಲ್ದಾಣದ ಸ್ಥಿತಿ ಸುಧಾರಣೆಯಾಗಲಿಲ್ಲ. ಬದಲಾಗಿ ಇಲ್ಲಿಗೆ ಬಂದಿದ್ದ ವಿಮಾನಗಳು ಆರ್ಥಿಕ ವಹಿವಾಟು ಹಾಗೂ ನಷ್ಟದ ನೆಪವೊಡ್ಡಿ ಹುಬ್ಬಳ್ಳಿಗೆ ಸ್ಥಳಾಂತರವಾದವು. ಕೇಂದ್ರದ ಉಡಾನ್‌ ಯೋಜನೆಯ ಲಾಭ ಸಹ ಹುಬ್ಬಳ್ಳಿಗೆ ಮೊದಲು ದೊರೆಯಿತು. ಪರಿಣಾಮ ಈಗ ಅಲ್ಲಿಂದ ಪ್ರತಿನಿತ್ಯ 12 ವಿಮಾನಗಳು ಸಂಚರಿಸುತ್ತಿವೆ.

ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಲ್ಲಿ ರಾಜಕೀಯ ಇಚ್ಛಾಶಕ್ತಿ ಇದ್ದರೂ ಕೇಂದ್ರದ ಮೇಲೆ ಪರಿಣಾಮಕಾರಿ ಒತ್ತಡ ತರುತ್ತಿಲ್ಲ. ಅನೇಕ ರಾಜಕಾರಣಿಗಳಿಗೆ ಹುಬ್ಬಳ್ಳಿಗೆ ಹೋಗಿ ವಿಮಾನ ಹತ್ತುವ ಆಸಕ್ತಿ ಇಲ್ಲಿಂದಲೇ ಹೋಗಲು ಕಾಣುತ್ತಿಲ್ಲ. ಇದರಿಂದ ದಿನನಿತ್ಯ ಕನಿಷ್ಠ ಹತ್ತು ವಿಮಾನಗಳನ್ನು ಕಾಣಬೇಕಿದ್ದ ಸಾಂಬ್ರಾ ವಿಮಾನ ನಿಲ್ದಾಣ ಈಗ ವಿಮಾನಗಳಿಲ್ಲದೆ ಬಿಕೋ ಎನ್ನಬೇಕಾಗಿದೆ. ಉಡಾನ್‌ ಯೋಜನೆ ಬರುವವರೆಗೆ ಬೆಳಗಾವಿ ನಿಲ್ದಾಣದಿಂದ ವಿಮಾನಗಳ ಹಾರಾಟ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಈಗ ಪ್ರತಿನಿತ್ಯ ಬೆಂಗಳೂರಿಗೆ ತೆರಳುತ್ತಿರುವ ಸ್ಪೈಸ್‌ ಜೆಟ್‌ ಸಂಸ್ಥೆಯ ಏಕಮಾತ್ರ ವಿಮಾನ ಜೂ.30 ರ ನಂತರ ಹುಬ್ಬಳ್ಳಿಗೆ ಸ್ಥಳಾಂತರವಾಗಲಿದೆ. ಹೀಗಾಗಿ ಜೂನ್‌ 30ರ ನಂತರ ಬೆಳಗಾವಿಯಿಂದ ಯಾವುದೇ ವಿಮಾನ ಹಾರಾಟ ಇಲ್ಲ. ಸಾಂಬ್ರಾ ವಿಮಾನ ನಿಲ್ದಾಣ ಖಾಲಿ ಖಾಲಿ. ಈಗಾಗಲೇ ಇಲ್ಲಿಂದ ಚೆನ್ನೈ, ಹೈದರಾಬಾದ್‌ಗೆ ಹೋಗುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನಗಳು ಮೇ ತಿಂಗಳಿಂದಲೇ ಇಲ್ಲಿಯ ಬದಲಾಗಿ ಹುಬ್ಬಳ್ಳಿಯಿಂದ ಹಾರುತ್ತಿವೆ. ಈಗಿನ ಮಾಹಿತಿ ಪ್ರಕಾರ ಸ್ಪೈಸ್‌ ಜೆಟ್‌ ವಿಮಾನ ಸಂಚಾರ ಸ್ಥಗಿತವಾದ ನಂತರ ಜು.11 ರಿಂದ ವಾರದಲ್ಲಿ ಮೂರು ದಿನ ಅಂದರೆ ಮಂಗಳವಾರ, ಬುಧವಾರ ಹಾಗೂ ಶನಿವಾರ ಏರ್‌ ಇಂಡಿಯಾ ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನ ಸಂಚಾರ ಆರಂಭ ಮಾಡಲಿದೆ. ಮಂಗಳವಾರ ಸಂಜೆ 5.05 ಕ್ಕೆ ಬೆಳಗಾವಿಗೆ ಬರುವ ವಿಮಾನ ಸಂಜೆ 5.35 ಕ್ಕೆ ಬೆಂಗಳೂರಿಗೆ, ಬುಧವಾರ ಹಾಗೂ ಶನಿವಾರ ಮಧ್ಯಾಹ್ನ 3.35 ಕ್ಕೆ ಬೆಳಗಾವಿಗೆ ಬರುವ ವಿಮಾನ ನಂತರ 4.05 ಕ್ಕೆ ಬೆಂಗಳೂರಿಗೆ ತೆರಳಲಿದೆ.

ಬೆಳಗಾವಿ ಹಾಗೂ ಹುಬ್ಬಳ್ಳಿ ನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಕೋಟಿಗಟ್ಟಲೇ ಹಣ ವೆಚ್ಚಮಾಡಿದೆ. ಆದರೆ ಹುಬ್ಬಳ್ಳಿಗೆ ಇದ್ದ ಸೌಲಭ್ಯ ಬೆಳಗಾವಿಗೆ ಇಲ್ಲ. ಆರ್ಥಿಕವಾಗಿ ಹಾಗೂ ಉದ್ಯಮಗಳಿಗೆ ಸಾಕಷ್ಟು ಅವಕಾಶಗಳಿದ್ದರೂ ಬೆಳಗಾವಿಯನ್ನು ನಿರ್ಲಕ್ಷಿಸಲಾಗಿದೆ. ಉಡಾನ್‌ ಯೋಜನೆ ಬರದೇ ಇರುವುದರಿಂದ ಬೆಳಗಾವಿ, ನೆರೆಯ ಕೊಲ್ಲಾಪುರ, ಮೀರಜ ಮೊದಲಾದ ಪ್ರಮುಖ ನಗರಗಳ ಉದ್ಯಮಿಗಳಿಗೆ ನಿರಾಸೆಯಾಗಿದೆ ಎಂಬುದು ಫೌಂಡ್ರಿ ಉದ್ಯಮಿ ರಾಜೇಂದ್ರ ಹರಕುಣಿ ಹೇಳಿಕೆ.

Advertisement

ಬೆಳಗಾವಿ ವಿಮಾನ ನಿಲ್ದಾಣ ಬಂದ್‌ ಆದ ಹಾಗೆ. ಅದೇ ಹುಬ್ಬಳ್ಳಿಯಿಂದ ದಿನನಿತ್ಯ 12 ವಿಮಾನ ಸಂಚಾರಗಳನ್ನು ನೋಡಿದರೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂಬ ಭಾವನೆ ಜನರಲ್ಲಿ ಬರುತ್ತದೆ. ಕಾರಣ ಕೇಂದ್ರ ಸರಕಾರ ಕೂಡಲೇ ವಿಶೇಷ ಆಸಕ್ತಿ ವಹಿಸಿ ಉಡಾನ್‌ ಮೂರನೇ ಹಂತದಲ್ಲಿ ಬೆಳಗಾವಿಯಿಂದ ವಿಮಾನ ಸಂಚಾರ ಆರಂಭ ಮಾಡಬೇಕು ಎಂಬುದು ಉದ್ಯಮಿಗಳ ಒತ್ತಾಯ.

ನಿಲ್ದಾಣ ಅಭಿವೃದ್ಧಿ: ಬ್ರಿಟಿಷರ ಆಡಳಿತದ ಸಮಯದಲ್ಲಿ ನಿರ್ಮಾಣವಾಗಿದ್ದ ವಿಮಾನ ನಿಲ್ದಾಣ ಆರಂಭದಲ್ಲಿ ರಕ್ಷಣಾ ಇಲಾಖೆ ನಂತರ ಗಣ್ಯ ವ್ಯಕ್ತಿಗಳ ಸೇವೆಗೆ ಮಾತ್ರ ಸೀಮಿತವಾಗಿತ್ತು. ದಿನಗಳು ಕಳೆದಂತೆ ಸಾರ್ವಜನಿಕರ ಸೇವೆಗೆ ಬದಲಾದ ನಿಲ್ದಾಣ ಈಗ ಒಟ್ಟು 370 ಎಕರೆ ವಿಸ್ತೀರ್ಣ ಹೊಂದಿದೆ. ರನ್‌ವೇ ಗಾತ್ರ ಹೆಚ್ಚಾಗಿ ದೊಡ್ಡ ಸಾಮರ್ಥ್ಯದ ಅಂದರೆ ಕಾರ್ಗೋ ವಿಮಾನಗಳು ಸಹ ಇಲ್ಲಿ ಬಂದಿಳಿಯುವಷ್ಟು ಪ್ರಗತಿಯಾಗಿದೆ.

ವಿಮಾನ ನಿಲ್ದಾಣದ ಅಭಿವೃದ್ಧಿಗೆ ಕೇಂದ್ರ ಸರಕಾರ 141 ಕೋಟಿ ರೂ. ಯೋಜನೆಗೆ ಒಪ್ಪಿಗೆ ಸೂಚಿಸಿತ್ತು. ಆದರಂತೆ ಎರಡು ವರ್ಷಗಳ ಹಿಂದೆ ಯೋಜನೆಯ ಕಾಮಗಾರಿ ಆರಂಭವಾಗಿತ್ತು. ಆದರಲ್ಲಿ ಈಗಿರುವ 1830 ಮೀಟರ್‌ ರನ್‌ವೇ ಯನ್ನು 2300 ಮೀಟರ್‌ವರೆಗೆ ವಿಸ್ತರಿಸಲಾಗಿದೆ. ಇಷ್ಟೆಲ್ಲಾ ಸೌಲಭ್ಯ ಹಾಗೂ ಅವಕಾಶಗಳಿದ್ದರೂ ಅದಕ್ಕೆ ತಕ್ಕಂತೆ ವಿಮಾನಗಳ ಹಾರಾಟ ಇಲ್ಲಿಂದ ನಡೆದಿಲ್ಲ. ವಿಮಾನ ಸಂಚಾರ ಆರಂಭಕ್ಕೆ ಗಂಭೀರ ಪ್ರಯತ್ನಗಳು ಆಗದೇ ಇರುವುದು ಉದ್ಯಮಿಗಳಲ್ಲಿ ನಿರಾಸೆ ಉಂಟುಮಾಡಿದೆ.

ಹೆಚ್ಚಿನ ಸಂಚಾರ ನಿರೀಕ್ಷೆ 
ಅರ್ಥಿಕವಾಗಿ ಹೊರೆಯಾಗುತ್ತಿದೆ ಎಂಬ ಕಾರಣದಿಂದ ಸ್ಪೈಸ್‌ಜೆಟ್‌ ಬೆಳಗಾವಿಯಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಮುಂದಿನ ವಾರದಿಂದ ಯಾವುದೇ ವಿಮಾನ ಸಂಚಾರ ಇರುವುದಿಲ್ಲ. ಆದರೆ ಉಡಾನ್‌ ಮೂರನೇ ಯೋಜನೆಯ ಮೂರನೇ ಹಂತದಲ್ಲಿ ಬೆಳಗಾವಿ ಸೇರ್ಪಡೆಯಾಗುವ ಸಾಧ್ಯತೆ ಇದ್ದು ನವೆಂಬರ್‌ ವೇಳೆಗೆ ಇಲ್ಲಿಂದ ಹೆಚ್ಚಿನ ವಿಮಾನ ಸಂಚಾರ ಆರಂಭವಾಗುವ ವಿಶ್ವಾಸ ಇದೆ.
ರಾಜೇಶ ಕುಮಾರ ಮೌರ್ಯ
ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ

ಜು.11ರಿಂದ ವೈಮಾನಿಕ ಸೇವೆ 
ಬೆಳಗಾವಿ ವಿಮಾನ ನಿಲ್ದಾಣದಿಂದ ಸಂಪೂರ್ಣವಾಗಿ ಸಂಚಾರ ಸ್ಥಗಿತವಾಗಿಲ್ಲ. ಜು.11 ರಿಂದ ಮತ್ತೆ ಬೆಂಗಳೂರಿಗೆ ಏರ್‌ ಇಂಡಿಯಾ ವಿಮಾನಸೇವೆ ಆರಂಭಿಸಲಿದೆ. ಇದಕ್ಕಾಗಿ ಈಗಾಗಲೇ ಬುಕಿಂಗ್‌ ಸಹ ಆರಂಭವಾಗಿದೆ. ಉಡಾನ್‌ ಯೋಜನೆಯ ಮೂರನೇ ಹಂತದಲ್ಲಿ ಬೆಳಗಾವಿಯನ್ನು ಸೇರ್ಪಡೆ ಮಾಡಬೇಕು ಎಂದು ಪ್ರಧಾನಿಗಳಿಗೆ ಮನವಿ ಮಾಡಲಾಗಿದ್ದು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಜುಲೈದಿಂದ ಸಾಂಬ್ರಾ ವಿಮಾನ ನಿಲ್ದಾಣ ಮತ್ತೆ ಎಂದಿನಂತೆ ವಿಮಾನ ಸಂಚಾರಕ್ಕೆ ತೆರೆದುಕೊಳ್ಳಲಿದೆ.
ಸುರೇಶ ಅಂಗಡಿ,
ಸಂಸದರು

„ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next