ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಉಡುಪಿ ಜಿಲ್ಲೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಎರಡನೇ ವರ್ಷದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚ್ಚಿಲ ದಸರಾ 2023 ವೈಭವವು ಮಂಗಳವಾರ ತಡರಾತ್ರಿ ವಿಜೃಂಭಣೆಯ ತೆರೆ ಕಂಡಿತು.
ನವದುರ್ಗೆಯರು ಮತ್ತು ಶಾರದಾ ಮಾತೆಯ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ವಿಸರ್ಜನಾ ಪೂಜೆಯ ಬಳಿಕ ದೇವಸ್ಥಾನದ ಸ್ವಾಗತಗೋಪುರ ಬಳಿ ಸಂಜೆ 6.30ಕ್ಕೆ ಅಂಬಾರಿ ಹೊತ್ತ ಆನೆಯ ಪ್ರತಿಕೃತಿಗೆ ಪುಷ್ಪಾರ್ಚನೆಗೈದು ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ರಾ.ಹೆ. 66ರ ಉಚ್ಚಿಲ- ಎರ್ಮಾಳು- ಉಚ್ಚಿಲ-ಮೂಳೂರು- ಕೊಪ್ಪಲಂಗಡಿ ಮಾರ್ಗ ವಾಗಿ ಸಾಗಿ ಬಂದ ಶೋಭಾಯಾತ್ರೆಯು 12.05ಕ್ಕೆ ಕಾಪು ಬೀಚ್ (ದೀಪಸ್ತಂಭ)ದ ಬಳಿಗೆ ತಲುಪಿತು. ಬಳಿಕ ಓಶಿಯನ್ ಬೀಚ್ ರೆಸಾರ್ಟ್ ಬಳಿಯ ಸಮುದ್ರ ಕಿನಾರೆಯಲ್ಲಿ ಮಧ್ಯರಾತ್ರಿ 2.15ಕ್ಕೆ ವಿಗ್ರಹಗಳನ್ನು ಜಲಸ್ತಂಭನಗೊಳಿಸಲಾಯಿತು.
ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಜಲಸ್ತಂಭನಾಪೂರ್ವಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಕಾಶಿಯಿಂದ ಆಗಮಿಸಿರುವ ಪಂಡಿತ್ ಮೋಹಿತ್ ಉಪಾಧ್ಯಾಯ ನೇತೃತ್ವದ ಪುರೋಹಿತರ ತಂಡವು ಧೂಪ, ದೀಪ, ಪುಷ್ಪಾರ್ಚನೆ ಸಹಿತ ಗಂಗಾರತಿ ಬೆಳಗಿತು. ಇದೇ ವೇಳೆ ಸಹಸ್ರಾರು ಮಹಿಳೆಯರು ಮಹಾಮಂಗಳಾರತಿ ಬೆಳಗಿದರು. ಅನಂತರ ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್ ಅವರ ಪ್ರಾರ್ಥನಾ ನುಡಿಗಳೊಂದಿಗೆ ಜಯಘೋಷದ ಮೂಲಕ ನವದುರ್ಗೆಯರು ಮತ್ತು ಶಾರದಾ ಮಾತೆಯನ್ನು ಏಕಕಾಲದಲ್ಲಿ ಜಲಸ್ತಂಭನಗೊಳಿಸಲಾಯಿತು.
ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್, ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಎ. ಸುವರ್ಣ, ಓಶಿಯನ್ ಬೀಚ್ ರೆಸಾರ್ಟ್‌ನ ಮಾಲಕರಾದ ಗಂಗಾಧರ ಸುವರ್ಣ ಮತ್ತು ಶಿಲ್ಪಾ ಜಿ. ಸುವರ್ಣ ದಂಪತಿ, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ, ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಕಾರ್ಯದರ್ಶಿ ಸುಧಾಕರ್ ಕುಂದರ್, ಕೋಶಾಧಿಕಾರಿ ಭರತ್ ಎರ್ಮಾಳು, ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣಾ ಕರ್ಕೇರ, ಪ್ರಮುಖರಾದ ದಯಾನಂದ ಸುವರ್ಣ ಮಲ್ಪೆ, ಮೋಹನ್ ಬೆಂಗ್ರೆ, ಅನಿಲ್ ಕುಮಾರ್, ಹರಿಯಪ್ಪ ಕೋಟ್ಯಾನ್, ನಯನಾ ಗಣೇಶ್, ಶಂಕರ್ ಸಾಲ್ಯಾನ್, ಚೇತನ್ ಬೆಂಗ್ರೆ, ಉಮೇಶ್ ಟಿ. ಕರ್ಕೇರ, ಭರತ್ ಉಳ್ಳಾಲ, ವಿನಯ್ ಕರ್ಕೇರ, ಸತೀಶ್ ಕುಂದರ್, ಶರಣ್ ಕುಮಾರ್ ಮಟ್ಟು, ಶಿವಕುಮಾರ್ ಮೆಂಡನ್, ಸರ್ವೋತ್ತಮ ಕುಂದರ್, ದಿನೇಶ್ ಎರ್ಮಾಳು, ಮೋಹನ್ ಬಂಗೇರ, ವಿಶ್ವಾಸ್ ಅಮೀನ್, ಶ್ರೀಪತಿ ಭಟ್, ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ, ಸೇರಿದಂತೆ ಗಣ್ಯರು ಮತ್ತು ಸಮಾಜ ಭಾಂದವರು ಉಪಸ್ಥಿತರಿದ್ದರು.
ಅಚ್ಚುಕಟ್ಟಿನ ವ್ಯವಸ್ಥೆ
ಐದೂವರೆ ಗಂಟೆಗಳ ಕಾಲ ರಾ.ಹೆ. 66ರಲ್ಲಿ ಕಾಲ್ನಡಿಗೆ ಮೂಲಕ ನಡೆದ ಶೋಭಾಯಾತ್ರೆಯ ಯಶಸ್ಸಿಗೆ ದಸರಾ ಉತ್ಸವ ಸಮಿತಿ, ಪೊಲೀಸರು ಮತ್ತು ಸ್ವಯಂಸೇವಕರು ಶ್ರಮಿಸಿದರು. ಬೀಚ್‌ನಲ್ಲಿ ವಿಗ್ರಹ ಜಲಸ್ತಂಭನೆಯ ದೃಶ್ಯಾವಳಿಗಳನ್ನು ಕಣ್ತುಂಬಿಸಿಕೊಳ್ಳಲು ಸಹಸ್ರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಿಕೊಡಲಾಗಿತ್ತು. ಗಂಗಾರತಿ ವೀಕ್ಷಣೆಗೂ ವಿಶೇಷ ವ್ಯವಸ್ಥೆ ಜೋಡಣೆ ಮಾಡಿದ್ದು ಮಹಿಳೆಯರು ಕುಳಿತಲ್ಲಿಂದಲೇ ಸಾಮೂಹಿಕ ಮಂಗಳಾರತಿ ಬೆಳಗಿದ್ದು ದೀಪಾವಳಿಯ ಸಂಭ್ರಮ ಮನೆ ಮಾಡಿತು. ವಿಜಯದಶಮಿ, ವಿಸರ್ಜನಾ ಪೂಜೆ, ದಸರಾ ಶೋಭಾಯಾತ್ರೆ ಮತ್ತು ಜಲಸ್ತಂಭನವನ್ನು ಎರಡು ಲಕ್ಷಕ್ಕೂ ಅಧಿಕ ಮಂದಿ ಕಣ್ತುಂಬಿಸಿಕೊಂಡರು.
ಕೃತಜ್ಞತೆ ಸಲ್ಲಿಕೆ
ತಾಯಿ ಶ್ರೀ ಮಹಾಲಕ್ಷ್ಮೀಯ ಸನ್ನಿಧಾನದಲ್ಲಿ 10 ದಿನಗಳ ಕಾಲ ಜರಗಿದ ಉಚ್ಚಿಲ ದಸರಾ 2023 ಅತ್ಯಂತ ವಿಜೃಂಭಣೆಯೊಂದಿಗೆ ಸಂಪನ್ನಗೊಂಡಿದೆ. ಗ್ರಾಮ, ಜಿಲ್ಲೆ, ರಾಜ್ಯ, ರಾಷ್ಟ್ರದ ಒಳಿತಿಗಾಗಿ ಮತ್ತು ಸಮಷ್ಠಿಯ ಅಭಿವೃದ್ಧಿ, ಕಸುಬುದಾರರಿಗೆ ಹೇರಳ ಮತ್ಸéಸಂಪತ್ತು ದೊರಕುವಂತಾಗಲಿ ಎಂದು ಪ್ರಾರ್ಥಿಸಿ ಸಮುದ್ರ ಪೂಜೆ, ಗಂಗಾರತಿಯನ್ನೂ ನಡೆಸಲಾಗಿದೆ. ದಸರಾ ವೈಭವದ ಯಶಸ್ಸಿನಲ್ಲಿ ಸಹಕಾರ ನೀಡಿದ ಸಹೃದಯಿ ಭಕ್ತರು, ದಾನಿಗಳು, ರಾಜ್ಯ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಾಧ್ಯಮ ವಿಭಾಗ, ಪುರೋಹಿತ ವರ್ಗ, ಮೊಗವೀರ ಸಂಯುಕ್ತ ಸಭೆ, ಗ್ರಾಮ ಸಭೆಗಳು, ಮೀನುಗಾರಿಕಾ ಸಂಘಟನೆಗಳು, ಸ್ವಯಂ ಸೇವಕರು ಹಾಗೂ ಎಲ್ಲ ಭಕ್ತರಿಗೆ ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್ ಮತ್ತು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಕೃತಜ್ಞತೆ ಸಲ್ಲಿಸಿದ್ದಾರೆ.