Advertisement

UAE-ಭಾರತ ಬಾಂಧವ್ಯ ಇನ್ನಷ್ಟು ದೃಢ: ಪ್ರಧಾನಿ ಮೋದಿ- ದೊರೆ ಶೇಖ್‌ ಮೊಹಮ್ಮದ್‌ ಮಾತುಕತೆ

12:38 AM Feb 14, 2024 | Pranav MS |

ಅಬುಧಾಬಿ: ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೇದ್‌ ಅಲ್‌ ನಹ್ಯಾನ್‌ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪ್ರಧಾನಿ ಮೋದಿ ಅವರನ್ನು ಅಬುಧಾಬಿ ಅಂ.ರಾ. ವಿಮಾನ ನಿಲ್ದಾಣದಲ್ಲಿ ಯುಎಇ ಅಧ್ಯಕ್ಷರು ಸ್ವಾಗತಿಸಿದರು.

Advertisement

ಯಎಇ ಅಧ್ಯಕ್ಷರೇ ವಿಮಾನ ನಿಲ್ದಾಣಕ್ಕೆ ತೆರಳಿ ದೇಶದ ಅತಿಥಿ ಯನ್ನು ಬರಮಾಡಿಕೊಂಡಿದ್ದು ವಿಶೇಷ ವಾಗಿತ್ತು. ಈ ವೇಳೆ ಉಭಯ ನಾಯಕರು ಪರಸ್ಪರ ಆಲಂಗಿಸಿ ಕೊಂಡರು. ಶೇಖ್‌ ಮೊಹಮ್ಮದ್‌ ಅವರನ್ನು ಪ್ರಧಾನಿ ಮೋದಿ “ನನ್ನ ಸಹೋದರ’ ಎಂದು ಬಣ್ಣಿಸಿದರು.

ದ್ವಿಪಕ್ಷೀಯ ಮಾತುಕತೆ
ವ್ಯಾಪಾರ, ಹೂಡಿಕೆ, ಡಿಜಿಟಲ್‌ ಮೂಲಸೌಕರ್ಯ, ಫಿನ್‌ಟೆಕ್‌, ಇಂಧನ, ಮೂಲಸೌಕರ್ಯ, ಸಂಸ್ಕೃತಿ ವಲಯಗಳ ಸಹಿತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು.

8 ಒಡಂಬಡಿಕೆಗಳಿಗೆ ಸಹಿ
ಎಂಟು ಒಡಂಬಡಿಕೆಗಳಿಗೆ ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷರು ಸಹಿ ಹಾಕಿದರು. ವಿದ್ಯುತ್‌ ಸಂಪರ್ಕ, ವ್ಯಾಪಾರ, ಡಿಜಿಟಲ್‌ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ, ಮ್ಯೂಸಿಯಂ ಹಾಗೂ ಯುಪಿಐ ಮತ್ತು ಎಎಎನ್‌ಐ, ರೂಪೇ ಮತ್ತು ಜೆವಾನ್‌ ಹಾಗೂ ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್‌ನಲ್ಲಿ ಭಾರತ ಮತ್ತು ಯುಎಇ ನಡುವಿನ ಅಂತರ್‌ ಸರಕಾರಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಯುಎಇಯಲ್ಲೂ ರೂಪೇ ಕಾರ್ಡ್‌ ಸೇವೆಗೆ ಚಾಲನೆ
ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷರು ರೂಪೇ ಕಾರ್ಡ್‌ ಸೇವೆಗೆ ಚಾಲನೆ ನೀಡಿದರು. ಡಿಜಿಟಲ್‌ ಪಾವತಿ ವ್ಯವಸ್ಥೆಯಾದ ಭಾರತದ ಯುಪಿಐ ಮತ್ತು ಯುಎಇಯ ಎಎಎನ್‌ಐ ಗಳನ್ನು ಪರಸ್ಪರ ಜೋಡಿಸುವ ಒಡಂಬಡಿಕೆ ಪತ್ರಕ್ಕೆ ಉಭಯ ನಾಯಕರು ಸಹಿ ಹಾಕಿದ್ದು, ಇದು ಉಭಯ ದೇಶಗಳ ನಡುವಿನ ಗಡಿಯಾಚೆಗಿನ ವಹಿವಾಟನ್ನು ಸುಗಮಗೊಳಿಸಲಿದೆ. ಇದರಿಂದ ಯುಎಇಯಲ್ಲಿರುವ ಭಾರತೀಯರಿಗೆ ಹಾಗೂ ಪ್ರವಾಸಕ್ಕಾಗಿ ಪರಸ್ಪರ ದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next