ಮಂಗಳೂರು: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆರಾಮದಲ್ಲಿ ಬಾಂಬ್ ಇಟ್ಟು ಬೆಂಗಳೂರಿಗೆ ಹೋಗುವುದು ಪೊಲೀಸರಿಗೆ ಗೊತ್ತಾಗಲಿಲ್ಲವೇ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ.
ಮಂಗಳೂರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆಯಾಗಿರುವುದು ಒಂದು ಗಂಭೀರ ವಿಚಾರ. ಇದೊಂದು ಸಮಾಜ ವಿರೋಧಿ ಕೆಲಸ. ಇದರ ಹಿಂದೆ ಬೇರೆಯವರ ಕೈವಾಡ ಇದೆ ಎಂದು ಸಂಶಯ ವ್ಯಕ್ತಪಡಿಸಿದರು.
ಮೊದಲು ಬಾಂಬ್ ಎಂದು ಇದ್ದದ್ದು ಈಗ ಪಟಾಕಿ ಬಾಂಬ್ ಹೇಗಾಯಿತು ಎಂದು ಪ್ರಶ್ನಿಸಿದ ಖಾದರ್ ಅವರು, ಆರೋಪಿ ಆದಿತ್ಯ ರಾವ್ ಕೃತ್ಯದ ಹಿಂದೆ ಬೇರೆಯವರ ಸಹಕಾರ ಇರಬಹುದು. ಇದರ ಸತ್ಯಾಸತ್ಯತೆಯನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸುವುದು ತಪ್ಪಲ್ಲ. ಬಾಂಬ್ ಪತ್ತೆಯಾದಾಗ ಮೊದಲು ಏನೆಲ್ಲಾ ಹೇಳಿದ್ದರು. ಈಗ ಆರೋಪಿ ಮಾನಸಿಕ ಅಸ್ವಸ್ಥ, ಅಲ್ಲಿ ಪತ್ತೆಯಾಗಿದ್ದು ಕಚ್ಚಾಬಾಂಬ್ ಎನ್ನುತ್ತಿದ್ದಾರೆ ಎಂದರು.
ಎರಡು ದಿನಗಳ ಕಾಲ ಆರೋಪಿಯನ್ನು ಪತ್ತೆಹಚ್ಚಲಾಗಿಲ್ಲ. ಇಂದು ಆರೋಪಿ ಸ್ವತಃ ಶರಣಾಗಿದ್ದರಿಂದ ಅಂತ್ಯ ದೊರಕಿತು ಎಂದ ಅವರು, ಈ ಕೃತ್ಯದ ಹಿಂದೆ ಒಂದು ವ್ಯವಸ್ಥಿತ ಸಂಚು ಇದೆ. ಆತ ಬಾಂಬ್ ಇಡುವಾಗ ತಲೆ ಸರಿ ಇತ್ತಾ? ಸಿಕ್ಕಿಬಿದ್ದಾಗ ಅದೇಗೆ ತಲೆ ಸರಿ ಇಲ್ಲ ಎನ್ನುತ್ತಾರೆ ಎಂದು ಪ್ರಶ್ನಿಸಿದರು.
ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟದ್ದು ಮೊದಲ ಭದ್ರತಾ ವೈಫಲ್ಯ, ಬಾಂಬ್ ಇಟ್ಟು ಬೆಂಗಳೂರಿಗೆ ಹೋದರೂ ಹಿಡಿಯದೇ ಇದ್ದಿದ್ದು ಎರಡನೇ ವೈಫಲ್ಯ ಎಂದು ಆರೋಪಿಸಿದರು.