ನವದೆಹಲಿ/ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ನಡುವಿನ ಮಿತ್ರತ್ವ ಗಾಢವಾಗಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪ ಸರಿಯಲ್ಲ ಎಂದು ಅಮೆರಿಕ ಸರ್ಕಾರ ಹೇಳಿದೆ.
ಲೋಕಸಭೆಯಲ್ಲಿ ರಾಹುಲ್ ಬುಧವಾರ ನೀಡಿದ ಹೇಳಿಕೆ ಬಗ್ಗೆ ವಾಷಿಂಗ್ಟನ್‌ನಲ್ಲಿ ಪ್ರತಿಕ್ರಿಯೆ ನೀಡಿದ ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ “ರಾಹುಲ್ ಗಾಂಧಿಯವರ ಹೇಳಿಕೆಯನ್ನು ಸಮರ್ಥಿಸುವುದಿಲ್ಲ’ ಎಂದು ಹೇಳಿದ್ದಾರೆ.
ಯಾವ ರೀತಿಯಲ್ಲಿ ಮಿತ್ರತ್ವ ಗಾಢವಾಗಿದೆ ಎಂಬ ಬಗ್ಗೆ ಪಾಕಿಸ್ತಾನ ಮತ್ತು ಚೀನಾ ಸರ್ಕಾರಗಳೇ ಹೇಳಬೇಕಾಗಿದೆ. ಅಮೆರಿಕ ಸರ್ಕಾರದ ವತಿಯಿಂದ ರಾಹುಲ್ ಹೇಳಿಕೆಗೆ ಪುಷ್ಟೀಕರಣವಿಲ್ಲ. ಇತ್ತೀಚಿನ ದಿನಗಳಲ್ಲಿ ಆ ಎರಡೂ ದೇಶಗಳ ಬಗ್ಗೆ ಅಮೆರಿಕ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಹೀಗಾಗಿ, ಆ ರಾಷ್ಟ್ರಗಳಿಗೆ ಮಿತ್ರತ್ವದ ಭಾವನೆ ಬಂದಿರಬಹುದು ಎಂದು ಹೇಳಿದ್ದಾರೆ ಪ್ರೈಸ್. ಪಾಕಿಸ್ತಾನ ಸರ್ಕಾರದ ಜತೆಗೆ ಕೆಲವೊಂದು ಕ್ಷೇತ್ರಗಳಲ್ಲಿ ವ್ಯೂಹಾತ್ಮಕ ಬಾಂಧವ್ಯ ಇದೆ ಎಂದು ಪ್ರೈಸ್ ಹೇಳಿಕೊಂಡರು.
ಪೂರ್ಣ ಸರಿಯಲ್ಲ:
ರಾಹುಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ನಟವರ್ ಸಿಂಗ್, “1960ರಿಂದಲೇ ಪಾಕಿಸ್ತಾನ ಮತ್ತು ಚೀನಾ ಮೈತ್ರಿಯಲ್ಲಿವೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ಹೇಳಿದ ಮಾತು ಆಂಶಿಕವಾಗಿ ಸರಿಯಾಗಿದೆ. ನೆಹರೂ ಅವಧಿಯಲ್ಲಿಯೇ ಚೀನಾದ ಕುಮ್ಮಕ್ಕಿನಿಂದ ಪಾಕಿಸ್ತಾನ ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿತು. ಸರ್ಕಾರದ ವತಿಯಿಂದ ಅವರ ಮಾತುಗಳಿಗೆ ಸ್ಪಷ್ಟನೆ ನೀಡದೇ ಇದ್ದದ್ದು ಅಚ್ಚರಿ ತಂದಿದೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಸಂಸದ ರಾಹುಲ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವ ಬಗ್ಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.